Advertisement

ಸ್ಟೂಡೆಂಟ್‌ಗಳೇ ಮೇಷ್ಟ್ರುಗಳಾದಾಗ!

11:43 PM Sep 05, 2019 | mahesh |

ನಾವು ವಿದ್ಯಾರ್ಥಿಗಳು. ಆದರೆ ನಮ್ಮನ್ನು ವಿದ್ಯಾರ್ಥಿಗಳೆಂದು ಕರೆಯುವುದಿಲ್ಲ. ಈ ಕಡೆ ಶಿಕ್ಷಕರು ಎಂದೂ ಕರೆಯುವುದಿಲ್ಲ. ಆದರೆ, ಎರಡೂ ಪಾತ್ರಗಳನ್ನು ನಿಭಾಯಿಸುತ್ತೇವೆ. ಹಾಗಾದರೆ, ನಾವು ಯಾರು?

Advertisement

ಇದೇನಪ್ಪ , ಈ ಒಗಟು ಒಂಥರ ವಿಚಿತ್ರವಾಗಿದೆಯಲ್ಲ ! ಇದಕ್ಕೇನು ಉತ್ತರ ಎಂದು ಯೋಚಿಸುತ್ತಿರುವಿರಾ? ಅವರೇ ನಾವು ಬಿಎಡ್‌ನ‌ “ವಿದ್ಯಾರ್ಥಿ-ಶಿಕ್ಷಕರು’.

ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವವರನ್ನು ವಿದ್ಯಾರ್ಥಿಗಳೆಂದೂ, ಬೋಧನೆ ಮಾಡುವವರನ್ನು ಶಿಕ್ಷಕರೆಂದು ಕರೆಯುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಭಾವೀ ಶಿಕ್ಷಕರಾಗುವ ನಾವು, ಶಿಕ್ಷಕರಾಗಲು ಬೇಕಾದ ಅಂಶಗಳನ್ನು , ನಮ್ಮ ಜವಾಬ್ದಾರಿಗಳ ಕುರಿತು ಕಲಿಯುತ್ತ ಮುಂದೆ ಸಾಗುವ ವಿದ್ಯಾರ್ಥಿಗಳಾಗಿರುವುದರಿಂದಾಗಿ ನಮ್ಮನ್ನು “ವಿದ್ಯಾರ್ಥಿ-ಶಿಕ್ಷಕರು’ ಎಂದು ಸಂಬೋಧಿಸಲಾಗುತ್ತದೆ. ಈ ಎರಡು ವರುಷಗಳ ಬಿ.ಎಡ್‌. ಪ್ರಯಾಣದಲ್ಲಿ ಸ್ವಲ್ಪ ಸಮಯ ನಾವು ವಿದ್ಯಾರ್ಥಿಗಳಾಗಿದ್ದರೆ, ಮತ್ತೆ ಸ್ವಲ್ಪ ಸಮಯ ತರಬೇತಿಗಾಗಿ, ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸುವುದರಿಂದಾಗಿ ನಮ್ಮದು “ದ್ವಿಪಾತ್ರ’ ಅನುಭವ. ವಿದ್ಯಾರ್ಥಿ- ಶಿಕ್ಷಕರಾಗಿ ನಮ್ಮ ಜವಾಬ್ದಾರಿ ಮಹತ್ತರವಾಗಿದೆ.

ನಮಗೆ ಕೊಟ್ಟ ಕೆಲಸಗಳನ್ನು ನೀಡಿರುವ ಕಾಲಾವಕಾಶದೊಳಗೆ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾಲೇಜಿನಲ್ಲಿ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ನಮ್ಮ ಅಧ್ಯಾಪ ಕರ ಮಾರ್ಗದರ್ಶನದಂತೆ, ಕೆಲವೊಂದು ಕಾರ್ಯ ಕ್ರಮಗಳನ್ನು ಆಯೋಜಿಸುವುದನ್ನು ಕಲಿಯಲೇಬೇಕು. ನಾಳೆ ವೃತ್ತಿಜೀವನದಲ್ಲಿ ನಮ್ಮ ವಿದ್ಯಾರ್ಥಿ ಗಳನ್ನು ವಿವಿಧ ಸ್ಪರ್ಧೆಗಳಿಗೆ ಅಣಿಗೊಳಿಸಬೇಕಾದಲ್ಲಿ ಜೀವನದ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಸ್ಥೈರ್ಯವನ್ನು ಮೂಡಿಸಲು, ಕಲೆ, ನೃತ್ಯ, ಸಾಹಿತ್ಯ, ಸಂಗೀತ, ನಾಟಕ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಮೂಡಿಸುವಲ್ಲಿ, ಶಿಕ್ಷಕರಾಗಿ ಸೂಕ್ತ ಮಾರ್ಗದರ್ಶನವನ್ನು ನೀಡಿ ಪ್ರೋತ್ಸಾಹಿಸಬೇಕಾ ಗಿದೆ. ಇದು ಸಾಧ್ಯವಾಗಬೇಕಾದರೆ, ನಾವು ಇಂದು ವಿದ್ಯಾರ್ಥಿ-ಶಿಕ್ಷಕರಾಗಿ ಸಿಕ್ಕಿದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು, ಸಹಪಠ್ಯ ಚಟುವಟಿಕೆ ಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾಗಿದೆ. ಅಲ್ಲದೆ ಸಮಯದ ಪರಿಜ್ಞಾನವೂ ಬಹುಮುಖ್ಯ. ನಾವೇ ಶಾಲೆಗೆ ತಡವಾಗಿ ಬಂದರೆ, ನಮ್ಮ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬರಬೇಕೆಂದು ಆಶಿಸುವುದು ಹೇಗೆ?

ಯಾವುದೇ ಒಂದು ತರಗತಿಯನ್ನು ಗಮನಿಸಿದರೆ, ಅಲ್ಲಿ ನಿಧಾನಗತಿಯ ಕಲಿಕೆಯ ವಿದ್ಯಾರ್ಥಿಗಳಿಂದ ಹಿಡಿದು, ಸಾಮಾನ್ಯ ಹಾಗೂ ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳೂ ಇದ್ದು, ಅವರ ಮಾನಸಿಕ ಬೆಳವಣಿಗೆಯ ಕುರಿತು, ಪಾಠ ಮಾಡಬಹುದಾದ ಕ್ರಮ, ವಿಧಾನಗಳ ಬಗ್ಗೆ ನಾವಿಂದು ಕಲಿಯುತ್ತಿದ್ದೇವೆ. ಇದನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮುಂದಿದೆ. ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಪಾಠಗಳನ್ನು ತಯಾರಿಸಿ, ಪರಿಣಾಮಕಾರಿಯಾಗಿ ಬಳಸಿ, ಪಾಠ ಮಾಡುವ ಬಗೆಯನ್ನು ಕಲಿತುಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ.

Advertisement

ಕಾಲೇಜಿನಲ್ಲಿರುವ ಸಂಪನ್ಮೂಲಗಳನ್ನು, ಗ್ರಂಥಾಲಯದ ಪುಸ್ತಕಗಳನ್ನು ಸರಿಯಾಗಿ ಬಳಸಿ, ನಿರ್ವಹಿಸುವುದೂ ಕೂಡ ನಮ್ಮ ಜವಾಬ್ದಾರಿ. ಯಾಕೆಂದರೆ, ಮಕ್ಕಳಿಗೆ “ಪುಸ್ತಕ ಪ್ರೀತಿ’ಯನ್ನು ಬೆಳೆಸಬೇಕಾದಲ್ಲಿ, ಮೊದಲು ನಾವು ಪುಸ್ತಕಗಳ ಬಗ್ಗೆ ತಿಳಿದುಕೊಂಡಿರಬೇಕು. ಅಲ್ಲದೇ ಪುಸ್ತಕಗಳನ್ನು ಓದಿ, ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯತೆಯಿದೆ.

ಮುಗ್ಧ ಮನಸ್ಸಿನ ಪುಟಾಣಿ ಮಕ್ಕಳಿಗೆ ಶಿಕ್ಷಕರೇ “ರೋಲ್‌ಮಾಡೆಲ್‌’. ಆದ್ದರಿಂದ ಸದೃಢ ಸಮಾಜದ ನಿರ್ಮಾಣದಲ್ಲಿ ನಮ್ಮ ಜವಾಬ್ದಾರಿಗಳನ್ನು ತಿಳಿದುಕೊಂಡು, ವಿದ್ಯಾರ್ಥಿಗಳಿಗೆ ಸರಿಯಾದ ದಾರಿಯನ್ನು ತೋರಿಸುವ ಅಧ್ಯಾಪಕರು ನಾವಾಗಬೇಕಾದಲ್ಲಿ, ಬಿ.ಎಡ್‌. ನಲ್ಲಿ ಕಲಿತ ಎಲ್ಲಾ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕಾದ ಅನಿವಾರ್ಯತೆ “ವಿದ್ಯಾರ್ಥಿ-ಶಿಕ್ಷಕ’ರಾದ ನಮ್ಮ ಮೇಲಿದೆ.

ಅನುಷಾ ಎಸ್‌. ಶೆಟ್ಟಿ
ಬಿ.ಎಡ್‌ 4ನೇ ಸೆಮಿಸ್ಟರ್‌
ಡಾ. ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next