Advertisement

ಮಳೆ ಬಂದರೆ ಮನವೂ ಹಸಿಯಾಗುತ್ತದೆ

04:37 PM Jun 08, 2021 | Team Udayavani |

ಹೊರಗೆ ಬಿಟ್ಟೂ ಬಿಡದ ತುಂತುರು ಹನಿ. ಇತ್ತ ಮನದೊಳಗೆ ಎಂದೂ ಮಾಸದ ನೆನಪುಗಳ ಗಣಿ. ಸುಮ್ಮನೆ ಒಂದು ಸಲ ಕೆದಕಿ ನೋಡಿ. ನೀವು ತುಳಿದು ಬಂದ ಹಾದಿ ನಿಮ್ಮನ್ನೇ ಅಚ್ಚರಿಗೊಳಿಸುತ್ತ ದೆ. ಕಾಗದದ ದೋಣಿ ಮಾಡಿ ನೀರಿನಲ್ಲಿ ತೇಲಿ ಬಿಟ್ಟ ಆ ಬಾಲ್ಯದ ದಿನಗಳಿಂದ ಹಿಡಿದು, ಹರೆಯದ ಸೊಗಸಿನಲ್ಲಿ ಗೆಳೆಯ, ಗೆಳತಿಯ ಕೈ ಹಿಡಿದು ನಡೆದ ಸುಂದರ ಸಂಜೆಗಳ ತರ ಹಳೆಯ ನೆನಪುಗಳು ಎದೆಯ ಗೂಡಿನ ಮೂಲೆಯೊಂದರಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಲೆಕ್ಕವಿಲ್ಲದಷ್ಟು ನೆನಪುಗಳು ಮನದಲ್ಲಿ ಬೆಚ್ಚಗೆ ಕೂತಿರುತ್ತವಾದರೂ ನಾವು ತೆರೆದು ನೋಡುವುದು ಎಲ್ಲೋ ಕೆಲವನ್ನು ಮಾತ್ರ. ಮಳೆಗಾಲ ಸುಂದರ ನೆನಪುಗಳಿಗೊಂದು ವೇದಿಕೆ.

Advertisement

ತುಂತುರು ಮಳೆ ಹನಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ಮಳೆಯನ್ನಿಷ್ಟ ಪಡುವವರೇ. ಪುಟಾಣಿಗಳು ಮಳೆಯಲ್ಲಿ ನೆನೆದು ಕುಣಿದು ಪಡುವ ಖುಷಿಯನ್ನೇ ದೊಡ್ಡವರು ಕೂಡ ಪಡೆಯುತ್ತಾರೆ. ಅದರಲ್ಲೂ ಮನಸ್ಸು ಸಂಭ್ರಮದಿಂದಿರುವಾಗ, ಆಪ್ತರಾದವರು ಜತೆಗಿದ್ದಾಗ ಮಳೆ ಕೊಡುವ ಆನಂದವೇ ಬೇರೆ!

ಕೆಲವರಂತೂ ಮಳೆಯ ಸೊಬಗನ್ನು ಆಸ್ವಾದಿಸಿ ಪದಗಳಲ್ಲಿ ಸೆರೆಹಿಡಿದು ಅದೆಷ್ಟೋ ಮನಸ್ಸುಗಳನ್ನು ಬೆಚ್ಚಗಾಗಿಸಿದ್ದಾರೆ. ಮಳೆಯಲ್ಲೊಂದು ಮನಮೀಟುವ ಹಾಡು ಇದ್ದರೆ ಅದೆಂತಹ ಮುದವಿದ್ದೀತು ಅಲ್ಲವೇ? ಅವನ್ನು ಆಸ್ವಾದಿಸಿ ಮನದಣಿಯಬೇಕು. ಭಾವುಕ ಮನದ ಕನವರಿಕೆಗಳಿಗೆ ಮಳೆಗಿಂತ ಉತ್ತಮ ಗೆಳೆಯ ಬೇರಿಲ್ಲ. ಬತ್ತಿ ಹೋದ ಮನದಲ್ಲೂ ಸಣ್ಣ ಚಿಗುರು ಮೂಡಿಸುವ ಶಕ್ತಿ ಮಳೆಗಿದೆ. ಬಿಡದೇ ಸುರಿವ ಮಳೆ ಕೆಲವರಿಗೆ ಕಿರಿಕಿರಿ ತಂದರೆ ಕೆಲವರಿಗೆ ಹಿಡಿಸಲಾರದಷ್ಟು ಸಡಗರ ತರುವುದು. ಮನಸ್ಸು ತೆರೆದು ನಿಂತಿರಾದರೆ ನೆನಪುಗಳ ಸುಗ್ಗಿಯೇ ನಿಮ್ಮದಾಗುವುದು.

ಕೆಲಸದ ಬಾಹುಳ್ಯ ಒತ್ತಡ, ಸಮಸ್ಯೆಗಳು, ಗೊಂದಲ, ನೋವು, ನಿರಾಸೆ, ಗೋಜಲುಗಳು ಯಾವ ಮನಸ್ಸಿಗೂ, ಯಾರ ಬದುಕಿಗೂ ಹೊರತಾದುದಲ್ಲ. ಇಂತಹ ಮನಸ್ಸುಗಳಿಗೊಂದಿಷ್ಟು ಚೈತನ್ಯ ತುಂಬಬೇಕೆಂದರೆ ನೀವು ಮಳೆಯಲ್ಲಿ ಹೆಜ್ಜೆ ಹಾಕಬೇಕು. ಮುಂಜಾನೆಯಾದರೂ ಸರಿ, ಮುಸ್ಸಂಜೆಯಾದರೂ ಸರಿ, ಮಳೆಯೊಂದಿಗೆ ಮಾತಾಡಿ ನೋಡಿ. ನಿಮ್ಮ ಮನದ ಮಾತುಗಳಿಗೆ ಮಳೆಗಿಂತ ಕೇಳುಗ ಬೇರಿಲ್ಲ. ಮಳೆಯನ್ನೇ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋಡುತ್ತಾರೆ. ಕೆಲವರಿಗೆ ಬರೀ ಖುಷಿಯನ್ನೇ ನೀಡುವ ಮಳೆ ಮತ್ತೆ ಕೆಲವರಿಗೆ ಬೆಟ್ಟದಷ್ಟು ಬೇಸರ ತರಬಹುದು. ನನ್ನ ವಿಚಾರಕ್ಕೆ ಬಂದರೆ ಈ ಎರಡನ್ನೂ ಕಂಡಿದ್ದೇನೆ. ಅವಳೊಂದಿಗಿರುವಾಗ ಪ್ರತಿ ಹನಿಯನ್ನೂ ಆಸ್ವಾದಿಸಿದ ಮನ, ಅವಳಿಲ್ಲದಾಗ ಬೋರೆಂದು ಅತ್ತಿದ್ದು ಇದೆ. ಬಿಟ್ಟು ಬಿಡಲಾರದ ಅನುಬಂಧ ಸಣ್ಣ ತೆರೆಯಾಗಿ ಕಳಚಿಕೊಳ್ಳುವಾಗ ಜೀವ ಹಿಡಿಯಾಗಿತ್ತು.

ಬೇಕೇ ಬೇಕೆಂದು ಹಿಡಿದಿಟ್ಟುಕೊಳ್ಳಲಾರದ ಅಸಹಾಯಕತೆಗೆ ಕಂಬನಿಯುಕ್ಕಿತ್ತಾದರೂ ಹೊರ ತೋರಲಾರದ ಅಸಹಾಯಕತೆಗೆ ಮೌನದ ಮೊರೆ ಹೊಕ್ಕಿದ್ದು ಇಂದೂ ಆ ಮೌನದಿಂದ ಹೊರಬರಲಾಗುತ್ತಿಲ್ಲ, ಆದರೆ ಮಳೆ ಬಂದಾಗ ತೇವಗೊಳ್ಳುವ ನೆಲದಂತೆ ಈ ಮನವೂ ಹಸಿಯಾಗುತ್ತದೆ.

Advertisement

 

ಬಸವರಾಜ ಎನ್‌.

ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next