ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಸರ್ಕಾರದ ಮೊದಲ ಆಯವ್ಯಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ (ಜು.5) ಮಂಡಿಸುತ್ತಿದ್ದಾರೆ. ಪ್ರತಿ ವರ್ಷ ಕೇಂದ್ರ ಬಜೆಟ್ ಸಮಯದಲ್ಲಿ ಜಿಲ್ಲೆಯಿಂದ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ದೊರೆಯುತ್ತಿಲ್ಲ.
ರೈತರ ಆಗ್ರಹ: ಕೇಂದ್ರ ಸರ್ಕಾರ ಮಂಡಿಸಲಿರುವ ಆಯಾವ್ಯಯಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ನಿರೀಕ್ಷೆ ಇರುವುದಿಲ್ಲ ಆದರೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರ ಸಾಲಮನ್ನಾ ಹಾಗೂ ರೈತರಿಗೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು, ಸ್ವಾಮಿನಾಥನ್ ವರದಿಯನ್ನು ಮಂಡಿಸುವ ಬಜೆಟ್‌ನಲ್ಲಿ ವ್ಯಕ್ತವಾಗಬೇಕು ಎಂಬುವುದು ಜಿಲ್ಲೆಯ ರೈತರ ಆಗ್ರಹವಾಗಿದೆ.
ಕೈಗಾರಿಕೆಗಳಿಗೆ ಆದ್ಯತೆ ನೀಡುವುದೇ ಬಜೆಟ್: ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಜನರಿಗೆ ಮತ್ತು ರೈತರಿಗೆ ಯಾವ ಯಾವ ಕೊಡುಗೆಗಳನ್ನು ನೀಡಲಿದ್ದಾರೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಕೈಗಾರಿಕೆಗಳಿಲ್ಲ.
ನಿರುದ್ಯೋಗದ ಸಮಸ್ಯೆ: ನಿರುದ್ಯೋಗದ ಸಮಸ್ಯೆ ಹೆಚ್ಚು, ಕನಿಷ್ಠ ಬೆಂಗಳೂರಿಗೆ 2 ರೈಲು ಮಾತ್ರ ಸಂಚರಿಸುತ್ತಿದ್ದು ಇನ್ನೂ 3 ರಿಂದ 4 ರೈಲು ಸಂಚಾರ ಕಲ್ಪಿಸಿಕೊಟ್ಟರೆ ಅನುಕೂಲವಾಗುತ್ತದೆ. ಇದೇ ರೈಲು ಬಂದರೆ ಪ್ರಯಾಣಿಕರಿಗೆ ಅನುಕೂಲದ ಜೊತೆಗೆ ಆದಾಯವೂ ಸಹ ಬರುವುದು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಆಗಿರುವುದರಿಂದ ಸಾಕಷ್ಟು ಅನುದಾನ ಬರುವಂತೆ ಆಗಬೇಕು. ದೇವನಹಳ್ಳಿಯಲ್ಲಿರುವ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮೂಲಭೂತ ಸೌಲಭ್ಯ ನೀಡಬೇಕು. ರೇಷ್ಮೆ ಬೆಳೆಗಾರರು ಹೆಚ್ಚು ಇರುವುದರಿಂದ ರೇಷ್ಮೆ ಆಮದು ಸುಂಕವನ್ನು ಏರಿಸಿದರೆ ಅನುಕೂಲವಾಗುವುದು.
ರಸ್ತೆ ಕಾಮಗಾರಿ ನನೆಗುದಿಗೆ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿ ಸಾವು ನೋವುಗಳು ಹೆಚ್ಚಾಗಿದೆ. ದೇವನಹಳ್ಳಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬೈಪಾಸ್ ರಸ್ತೆಯನ್ನು ದಾಬಸ್‌ಪೇಟೆಯಿಂದ ಹೊಸೂರು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕಾಮಗಾರಿಗೆ ನನೆಗುದ್ದಿಗೆ ಬಿದ್ದಿದೆ. ಕೇವಲ ಅರ್ಧ ಪ್ರಮಾಣದಲ್ಲಿ ರಸ್ತೆ ಕಾಮಗಾರಿಗೆ ಸ್ಥಗಿತಗೊಂಡಿದೆ. ಈ ಬಜೆಟ್‌ನಲ್ಲಾದರೂ ಹೆಚ್ಚಿನ ಅನುದಾನ ನೀಡಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಸಾಲ ಮನ್ನಾಗೆ ಹಿಂದೇಟು: ರಾಜ್ಯದ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ್ದ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 2 ಲಕ್ಷ ವರೆಗೆ ಸಾಲ ಮನ್ನಾ ವಾಗುತ್ತಿರುವುದರಿಂದ ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನಿಂದ ಋಣ ಪತ್ರವನ್ನು ಕೆಲವು ರೈತರಿಗೆ ನೀಡುತ್ತಿದ್ದಾರೆ. ಶೇ.10 ರಿಂದ 15 ರಷ್ಟು ಮಾತ್ರ ತಲುಪುತ್ತಿದೆ ಇನ್ನೂ ಶೇ. 85 ರಷ್ಟು ಹಾಗೇ ಉಳಿದಿದೆ. ಕೇಂದ್ರ ಸರ್ಕಾರದ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಲೇ ಬಂದಿದೆ.
ಲೋಪದೋಷಗಳಿಗೆ ಕಡಿವಾಣ ಹಾಕಬೇಕು: ಏರುತ್ತಿರುವ ಪೆಟ್ರೋಲ್ ಬೆಲೆಗಳ ನಿಯಂತ್ರಣಕ್ಕೆ ಸೂತ್ರ ಆದಾಯದ ಮೇಲಿನ ತೆರಿಗೆ ಮಿತಿ ಏರಿಕೆ, ಕೃಷಿ ತೋಟಗಾರಿಕೆ ಬೆಳೆಗಳಿಗೆ ವೈಜ್ಞಾ ನಿಕ ಬೆಲೆ ನಿಗದಿಗೆ ಜನಸಾಮಾನ್ಯರು ಕೇಂದ್ರ ಸರ್ಕಾರ ವನ್ನು ಒತ್ತಾಯ ಮಾಡಿದ್ದಾರೆ.
ನೋಟು ಅಮಾನ್ಯ ದಿಂದ ಆಹಾರ ಪದಾ ರ್ಥಗಳ ಬೆಲೆ ಇಳಿಕೆಯಾಗು ವುದು ಎಂಬ ನಂಬಿಕೆ ಹುಸಿ ಯಾಗಿದೆ. ದಿನನಿತ್ಯ ಬಳಸುವ ವಸ್ತುಗಳು ಏರುತ್ತಲೇ ಹೋಗು ತ್ತಿದೆ. ಪ್ರಧಾನಿ ಈ ಬಗ್ಗೆ ಗಮನ ಹರಿಸಿ ಲೋಪದೋಷಗಳಿಗೆ ಕಡಿವಾಣ ಹಾಕಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.
ನಿರೀಕ್ಷೆಗಳೆಲ್ಲ ಹುಸಿ: ಕಳೆದ 5 ವರ್ಷಗಳಿಂದ ಮಂಡಿಸಿರುವ ಬಜೆಟ್‌ನಲ್ಲಿ ಜಿಲ್ಲೆಗೆ ನೀಡಿರು ವುದು ಬರೀ ಶೂನ್ಯವಾಗಿದೆ. ಯಾವುದೇ ಯೋಜನೆಗಳು ಸಹ ಮಂಜೂರು ಆಗಿಲ್ಲ. ಜನರ ನಿರೀಕ್ಷೆಯಲ್ಲ ಹುಸಿಯಾಗಿದೆ ಈ ಬಜೆಟ್‌ನಲ್ಲಾದರೂ ಯೋಜನೆಗಳನ್ನು ನೀಡುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.
● ಎಸ್.ಮಹೇಶ್