ಆಲ್ದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರ ಪಾಳು ಬಿದ್ದಿದ್ದು, ಪುಂಡ ಪೋಕರಿಗಳ ತಾಣವಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಆಗಮಿಸುತ್ತಿದ್ದ ಕಾಲದಲ್ಲಿ ಅವರು ತಂಗಲೆಂದೇ ಈ ಪ್ರವಾಸಿ ಮಂದಿರವನ್ನು 1935 ರಲ್ಲಿ ನಿರ್ಮಿಸಲಾಗಿತ್ತು.
ಈ ಕಟ್ಟಡ ವಿಶಾಲವಾದ ಕಿಟಕಿಗಳು, 8 ಕೊಠಡಿಗಳನ್ನು ಹೊಂದಿದ್ದು, ನಿರ್ವಹಣೆ ಇಲ್ಲದ ಕಾರಣ ಬೆಲೆಬಾಳುವ ಮರ-ಮುಟ್ಟುಗಳನ್ನು ಕಿಡಿಗೇಡಿಗಳು ಕಿತ್ತು ಕದ್ದೊಯ್ದಿದ್ದಾರೆ. ಈ ಕಟ್ಟಡ ಸ್ವಲ್ಪ ದಿನಗಳ ಕಾಲ ಕ್ಲಬ್ ಆಗಿ ಪರಿವರ್ತನೆಯಾಗಿತ್ತು. ಇದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾದ್ದರಿಂದ ಬಾಗಿಲು ಮುಚ್ಚಲಾಗಿತ್ತು. ಸ್ವಲ್ಪ ದಿನಗಳ ಕಾಲ ಗ್ರಂಥಾಲಯವನ್ನಾಗಿ ಮಾಡಲಾಗಿತ್ತು. ಆದರೆ, ಇದ್ದಕ್ಕೂ ಸೂಕ್ತ ಸ್ಪಂದನೆ ದೊರೆಯದ ಕಾರಣ ಗ್ರಂಥಾಲಯವನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಯಿತು.
ನಂತರ ದಿನಗಳಲ್ಲಿ ಕಟ್ಟಡದ ನಿರ್ವಹಣೆ ನಿರ್ಲಕ್ಷಕ್ಕೊಳಗಾಗಿ ಸಂಪೂರ್ಣವಾಗಿ ಪಾಳುಬಿದ್ದಿದೆ. ಆಲ್ದೂರು ಪಟ್ಟಣ ಪ್ರಸಿದ್ಧಯಾತ್ರಾಕ್ಷೇತ್ರಗಳಾದ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಖಾಂಡ್ಯ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನ. ಆಲ್ದೂರು ಮಾರ್ಗವಾಗಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ತಂಗಲು ಇಲ್ಲಿ ವಸತಿ ಗೃಹಗಳಾಗಲಿ, ಪ್ರವಾಸಿ ಮಂದಿರವಾಗಲಿ ಇಲ್ಲ. ಸ್ವಂತ ವಾಹನಗಳಲ್ಲಿ ಬಂದವರು ಶೃಂಗೇರಿ ಇಲ್ಲವೇ ಹೊರನಾಡು ದೇವಾಲಯಗಳಲ್ಲಿ ಆಶ್ರಯ ಪಡೆಯಬೇಕು. ಇಲ್ಲಿಗೆ ಪ್ರವಾಸಿ ಮಂದಿರದ ಅವಶ್ಯಕತೆ ಇದ್ದರೂ ಸಹ ಸಂಬಂಧಪಟ್ಟ ಇಲಾಖೆಗಳಾಗಲಿ ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಗಮನ ಹರಿಸಿಲ್ಲ.
– ರಾಜೇಶ್ ವಿ.ಜೆ