ಔರಾದ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಕೇಂದ್ರ-ರಾಜ್ಯ ಸರ್ಕಾರಗಳು ವಿನೂತನ ಯೋಜನೆಗಳನ್ನು ಜಾರಿಗೆ ತಂದರೂ ಅಧಿ ಕಾರಿಗಳ ನಿರ್ಲಕ್ಷ್ಯದಿಂದ ಗಡಿ ತಾಲೂಕಿನಲ್ಲಿ ಬಾಲಕಾರ್ಮಿಕ ಪದ್ಧತಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ಔರಾದ ಹಾಗೂ ಕಮಲನಗರ ತಾಲೂಕು ವ್ಯಾಪ್ತಿಯಲ್ಲಿ ಕಂಡುಬರುತ್ತಿದೆ.
ಕೇಂದ್ರ-ರಾಜ್ಯ ಸರ್ಕಾರಗಳು ಪ್ರತಿವರ್ಷ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಕೋಟ್ಯಂತರ ರೂ. ಖರ್ಚು ಮಾಡಿ ಜನ ಜಾಗೃತಿ ಕಾರ್ಯಕ್ರಮ ಹಾಗೂ ಬಲಿಷ್ಠ ಕಾನೂನು ಕೂಡ ರೂಪಿಸಿದೆ. ಅವುಗಳೆಲ್ಲ ಕಾರ್ಮಿಕ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿನ ಕಡತಗಳಿಗೆ ಸೀಮಿತವಾಗಿ ಉಳಿದುಕೊಂಡಿದ್ದು, ಕಾರ್ಯರೂಪಕ್ಕೆ ಬರುವುದಾದರು ಯಾವಾಗ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷéದಿಂದ 538 ಮಕ್ಕಳು ಶಿಕ್ಷಣದಿಂದ ವಂಚಿತವಾಗಿ ತಾಲೂಕಿನಲ್ಲಿಯೇ ಕೆಲಸ ಮಾಡುತ್ತಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆ ಗಣತಿಯಿಂದ ತಿಳಿದುಬಂದಿದೆ.
ಮಕ್ಕಳ ಭವಿಷ್ಯಕ್ಕೆ ಕೊಳ್ಳಿ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಬಡ ಹಾಗೂ ನಿರ್ಗತಿಕ ಕುಟುಂಬದ ಪಾಲಕರು ಹೊಟ್ಟೆ ತುಂಬಿಸಿಕೊಳ್ಳಲು ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಅಂಥ ಪಾಲಕರ ಮನೆ- ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಇಲ್ಲಿಯವರೆಗೂ ಕಾರ್ಮಿಕ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಿದ ಉದಾರಣೆಗಳೇ ಇಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಪ್ರಚಾರಕ್ಕೆ ಸೀಮಿತವಾದ ಕಾರ್ಯಕ್ರಮ: ಪ್ರತಿವರ್ಷ ಮಕ್ಕಳ ದಿನಾಚರಣೆ ಸಮಯದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟಡದ ಹಿಂದೆ ಇರುವ ಕುಟುಂಬದ ಸದಸ್ಯರಿಗೆ ಭೇಟಿ ನೀಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ವಸತಿ ನಿಲಯ ಹಾಗೂ ಸರ್ಕಾರಿ ಕಚೇರಿಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿಯೂ ಸರ್ಕಾರದ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಎರಡು ದಿನಗಳ ಹಿಂದೆಯೇ ತಾಲೂಕು ಕೇಂದ್ರ ಸ್ಥಾನದಲ್ಲಿ ನಡೆದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕಾರ್ಯಕ್ರಮ ಕೂಡ ಪ್ರಚಾರ ಹಾಗೂ ಜನರಿಗೆ ಅರಿವು ಮೂಡಿಸದೇ 30 ಜನಸೇರಿಸಿಕೊಂಡು ಕಾರ್ಯಕ್ರಮ ಮಾಡಲಾಗಿದೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಮಕ್ಕಳು-ಪಾಲಕರಲ್ಲಿ ಜಾಗೃತಿ ಮೂಡಿಸಿ: ಆದ್ದರಿಂದ ನಾಲ್ಕು ಗೋಡೆ ನಡುವೆ ಕಾರ್ಯಕ್ರಮ ನಡೆಸುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಿ ಅಕ್ಷರ ಜ್ಞಾನದಿಂದ ದೂರ ಉಳಿದ ಮಕ್ಕಳಿಗೆ ಶಾಲಾಭಿರುಚಿ ಬಗ್ಗೆ ಅರಿವು ಮೂಡಿಸಿ ಪಾಲಕರಿಗೆ ತಿಳಿ ಹೇಳುವ ಕೆಲಸ ಇಲಾಖೆ ಅಧಿ ಕಾರಿಗಳು ಮಾಡಲು ಮುಂದಾಗಬೇಕು ಎನ್ನುವುದು ಜನರ ಒತ್ತಾಸೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ನಡೆಸಿದ ಶಾಲೆಯಿಂದ ದೂರ ಉಳಿದ ಮಕ್ಕಳ ಸಂಖ್ಯೆ 538 ಆಗಿದೆ. ಶಾಲೆಯಲ್ಲಿ ಒಮ್ಮೆಯೂ ಕಾಲಿಡದಿರುವ 138 ಮಕ್ಕಳು, ಎರಡು ಮೂರು ವರ್ಷ ಶಾಲೆಗೆ ಬಂದು ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿದ 400 ಮಕ್ಕಳು ಸೇರಿದಂತೆ ಒಟ್ಟು 538 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆಂದು ಶಿಕ್ಷಣ ಇಲಾಖೆ ಅಧಿ ಕಾರಿಗಳು ನಡೆಸಿದ ಸಮೀಕ್ಷೆ ವರದಿಗಳಿಂದ ತಿಳಿದುಬರುತ್ತಿದೆ.
ಆದರೆ ತಾಲೂಕಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಕಚೇರಿ ಹಿಂಭಾಗದಲ್ಲಿ ಹಾಗೂ ಉಪಬಂಧಿ ಖಾನೆಯ ಮುಂಭಾಗದಲ್ಲಿಯೇ 100 ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ನಾಳೆಯಿಂದಲೇ ಶ್ರಮಿಸುತ್ತೇವೆ. ಗಡಿ ತಾಲೂಕಿನಲ್ಲಿ ಹೆಚ್ಚಾಗಿ ಬಾಲಕಾರ್ಮಿಕ ಪದ್ಧತಿ ಇದೆ ಎನ್ನುವುದು ನಮಗೂ ಗೊತ್ತಿದೆ. ನಿರ್ಮೂಲನೆ ಮಾಡಲು ದುಡಿಯುತ್ತೇವೆ. ಪ್ರಸನ್ನಕುಮಾರ, ಬಾಲಕಾರ್ಮಿಕ ನಿರೀಕ್ಷಕರು.
-ರವೀಂದ್ರ ಮುಕ್ತೇದಾರ