Advertisement

ನಾನು ಮತ್ತೆ ಸಿಎಂ ಆಗೋದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು: ಸಿದ್ದರಾಮಯ್ಯ

06:37 PM Feb 11, 2021 | Team Udayavani |

ಬಾಗಲಕೋಟೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ. ಇದು ಶತಃಸಿದ್ದ. ನಾನು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಬಾದಾಮಿ ತಾಲೂಕು ಗೋವನಕೊಪ್ಪದಲ್ಲಿ 2 ಕೋಟಿ ವೆಚ್ಚದಲ್ಲಿ ಪ್ರವಾಹದಿಂದ ಹಾನಿಯಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ರಾಜ್ಯದ ಜನ ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿದರೆ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ. ಇದಕ್ಕೆ ಜನ ತೀರ್ಮಾನ ಮಾಡಬೇಕು. ಶಾಸಕರು, ಹೈಕಮಾಂಡ್ ನಿರ್ಧರಿಸಿದ ಮೇಲೆ ನಾನು ಸಿಎಂ ಆಗುವುದು ನಿರ್ಧಾರವಾಗುತ್ತದೆ ಎಂದು ಹೇಳಿದರು.

ಹೌದ್ಧೋ ಹುಲಿಯಾ ಬೇಕು

ಗೋವನಕೊಪ್ಪದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ನೆರೆದ ಜನರು, ರಾಜ್ಯಕ್ಕೆ ಮತ್ತೆ ಹೌದ್ದೋ ಹುಲಿಯಾ ಬೇಕು. ನೀವೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕೂಗಿದರು. ಆಗ ಸಿದ್ದರಾಮಯ್ಯ, ನೀವೆಲ್ಲ ಮತ್ತೆ ಆಶೀರ್ವಾದ ಮಾಡಿ. ಆಗ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.

Advertisement

ಕಾಲೇಜು ಕಟ್ಟಡಕ್ಕೆ ಹಣ ಕೊಡಲಿಲ್ಲ

ನಾನು ಸಿಎಂ ಆಗಿದ್ದಾಗ ಅನುದಾನ ಕಡಿಮೆ ಆಗಿರಲಿಲ್ಲ. ಈಗ ಏನೇ ಕೇಳಿದರೂ ದುಡ್ಡಿಲ್ಲ ಎನ್ನುತ್ತಿದ್ದಾರೆ. ಮಾತೆತ್ತಿದರೆ ಕೋವಿಡ್ ಎನ್ನುತ್ತಾರೆ. ಈ ಬಾರಿ 35 ಸಾವಿರ ಕೋಟಿ ಸಾಲ ಪಡೆಯುತ್ತಿದ್ದಾರೆ. ನಾನು ಸಚಿವರಿಗೆ ಕೆರೂರ ಪಟ್ಟಣದಲ್ಲಿ ಕಾಲೇಜು ಕಟ್ಟಡಕ್ಕೆ ಹಣ ಕೇಳಿದ್ದೆ. ಆ ಸಚಿವರು ಹಣ ಇಲ್ಲ ಎನ್ನುತ್ತಿದ್ದಾರೆ.ಅದಕ್ಕೆ ನಾನು ಮತ್ತೆ ಯಾಕೆ ಸಚಿವನಾದೆ ಎಂದು ಕೇಳಿದೆ ಎಂದರು.

ಎಚ್‌ಡಿಕೆ ಭಿಕ್ಷೆ ಕೊಟ್ಟಿಲ್ಲ

ಬಾದಾಮಿ ಅಭಿವೃದ್ಧಿಗೆ ನಾನೇ ಅನುದಾನ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರನ್ನು ಸಿಎಂ ಮಾಡಿದ್ದು ಯಾರು, 80 ಜನ ಶಾಸಕರನ್ನು ಇಟ್ಟುಕೊಂಡು, 37 ಜನ ಎಂಎಲ್‌ಎ ಇರುವವರನ್ನು ಸಿಎಂ ಮಾಡಿದ್ದೇವು. ನಾವು ಸಿಎಂ ಮಾಡದೇ ಇದ್ದಿದ್ದರೆ ಅನುದಾನ ಎಲ್ಲಿಂದ ಕೊಡುತ್ತಿದ್ದರು. ನಾನು ಎಂಎಲ್‌ಎ ಅಲ್ವಾ, ನನಗೆ ಅನುದಾನ ಕೇಳುವ ಹಕ್ಕಿಲ್ವಾ? ಅವರು ಪುಕ್ಕಟೆ ಅಥವಾ ಭಿಕ್ಷೆ ಕೊಟ್ಟಿಲ್ಲ. ಅವರನ್ನು ಸಿಎಂ ಮಾಡಿದ್ದೇ ನಾವು. ಹೀಗಾಗಿ ಅನುದಾನ ಕೊಡಲೇಬೇಕು. ಅದೂ ಸರಿಯಾಗಿ ಕೊಡಲಿಲ್ಲ. ಅಲ್ಪಸ್ವಲ್ಪ ಕೊಟ್ಟರು ಎಂದು ಹೇಳಿದರು.

ಅಧಿಕಾರ ಬಿಟ್ಟು ಹೋಗಿ

ಬಿಜೆಪಿಯವವರಿಗೆ ಅಧಿಕಾರವನ್ನು ನಿರ್ವಹಿಸಲು ಬರದಿದ್ದರೆ ಬಿಟ್ಟು ಹೋಗಿ. ನಾವು ಜನಪರ ಆಡಳಿತ ನೀಡುತ್ತೇವೆ. ಯಜಮಾನಿಕೆ ಮಾಡಲು ಆಗದಿದ್ದರೆ ಬೇರೆಯವರು ಮಾಡುತ್ತಾರೆ. ನನ್ನ ಅನೇಕ ಕೆಲಸ ನಿಲ್ಲಿಸಿದ್ದಾರೆ. ಹೊಟ್ಟೆ ಉರಿಯುತ್ತಿದೆ. ಮೋದಿ ಮೋದಿ ಎನ್ನುತ್ತಾರೆ. ಮೋದಿ ಏನು ಮಾಡಿದ್ದಾರೆ. ಮೋದಿ ಏಳು ಸುತ್ತಿನ ಕೋಟೆ ಕಟ್ಟಿಕೊಂಡು ತನ್ನ ಪಾಡಿಗೆ ತಾನು ದೆಹಲಿಯಲ್ಲಿ ಇದ್ದಾರೆ. ಮೋದಿ ಇಲ್ಲಿಗೆ ಬಂದು ಕೆಲಸ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:18 ವರ್ಷದ ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ… ಸಾಯೋ ಮುಂಚೆ ಭರ್ಜರಿ ಡಾನ್ಸ್

ಜಾತಿ ನೋಡಿ ಮತ ಹಾಕಬೇಡಿ

ಮತ ಹಾಕುವಾಗ ವಿಚಾರ ಮಾಡಿ ಹಾಕಬೇಕು. ಜಾತಿ ಆಧಾರದ ಮೇಲೆ ಮತ ಹಾಕಿದರೆ ದೇಶ ಉದ್ಧಾರ ಆಗಲ್ಲ. ಸಿದ್ದರಾಮಯ್ಯ ಅಂದ್ರೆ ಕುರುಬರು ವೋಟ್ ಹಾಕೋದಾ ? ಬಾಗಲಕೋಟೆಯ ಎಂಪಿ ನಿಮ್ಮೂರಿಗೆ ಬಂದಿದ್ದಾರಾ ? ಗೆದ್ದ ತಕ್ಷಣ ಮಂತ್ರಿ ಆಗಿ, ಆಕಾಶಕ್ಕೆ ಹೋಗುತ್ತಾರೆ. ಜನರ ಬಳಿ ಬರುವುದಿಲ್ಲ.  ಆ ಗಿರಾಕಿ ಒಂದು ಕಾರ್ಯಕ್ರಮಕ್ಕೂ ಬಂದಿಲ್ಲ. ನನಗೆ ಗದ್ದಿಗೌಡರು ಒಳ್ಳೆಯ ಸ್ನೇಹಿತ ಎಂದು ಹೇಳುತ್ತಲೇ ಗದ್ದಿಗೌಡರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಎರಡು ವರ್ಷಗಳ ಬಳಿಕ ನಾವೇ ಅಧಿಕಾರಕ್ಕೆ

ಸಚಿವರನ್ನು ನಂಬಿಕೊಂಡರೆ ಮೂರು ಕಾಸಿನ ಕೆಲಸವೂ ಆಗುವುದಿಲ್ಲ. ಏನೇ ಆಗಲಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧಿಕಾರಿಗಳನ್ನು ಹಿಡಿದುಕೊಂಡು ಕೆಲಸ ಮಾಡಿಸುತ್ತಿದ್ದೇನೆ. ಇನ್ನು ಎರಡು ವರ್ಷವಾದ ಮೇಲೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ಗೋವನಕೊಪ್ಪ ದೊಡ್ಡ ಗ್ರಾಮ. ಇದು ಗ್ರಾ.ಪಂ. ಆಗಬೇಕು. ಸರ್ಕಾರಕ್ಕೆ ಪತ್ರ ಬರೆದು ನನ್ನ ಪೆನ್ನಿನ ಇಂಕ್ ಖಾಲಿಯಾಗಿದೆ. ದೊಡ್ಡ ಊರಿದೆ. ಆದರೂ ಜನಸಂಖ್ಯೆ ಕಡಿಮೆ ಇದೆ ಎನ್ನುತ್ತಿದ್ದಾರೆ. ಈಗ ಮತ್ತೊಂದು ಗ್ರಾಮ ಸೇರಿಸುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಗೋವನಕೊಪ್ಪ ಗ್ರಾ.ಪಂ. ಮಾಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next