ಇದು ನಿಜಕ್ಕೂ ನನಗಾದ ಅನುಭವ ಅಲ್ಲ. ಆದರೆ, ಬೇರೆಯವರಿಗೆ ಆದ ಈ ಅನುಭವಕ್ಕೆ ನಾನೇ ಪ್ರತ್ಯಕ್ಷ ದರ್ಶಿ. ಹೀಗಾಗಿ, ಅವರ ಜಾಗದಲ್ಲಿ ನಾನಿದ್ದರೆ ಏನಾಗುತ್ತಿತ್ತು ಅಂತ ಯೋಚಿಸಿದಾಗೆಲ್ಲಾ ಈಗಲೂ ಕಣ್ಣಲ್ಲಿ ನೀರು ಬರುತ್ತದೆ.
ನೆರವು ನೀಡಿದ ಆ ಪುಣ್ಯಾತ್ಮ ಕಣ್ಣ ಎದುರು ಬರುತ್ತಾನೆ. ಮೂರು ನಿಮಿಷದಲ್ಲಿ ನಡೆದ ಆ ಘಟನೆ ಹೀಗಿದೆ.
ನಾನು ಊರಿಗೆ ಹೊರಡಬೇಕು ಅಂತ ಸಿದ್ಧರಾಗಿ, ಉಡುಪಿಯಿಂದ ಹೊರಡುವ ಬಸ್ಸು ಹತ್ತಿದ್ದೆ. ಇನ್ನೇನು ಬಸ್ ಹೊರಡುವುದರಲ್ಲಿತ್ತು. ಹತ್ತೋಣ ಅಂದರೆ ನನಗೆ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಫುಟ್ ಬೋರ್ಡ್‌ಗಳು ಮೂರು, ನಾಲ್ಕು ಅಡಿಗಳಷ್ಟು ಎತ್ತರದ್ದವು. ನಾನು ಅಷ್ಟು ಎತ್ತರಕ್ಕೆ ಕಾಲನ್ನು ಹೊಂದಿಸಿಕೊಂಡು ಹತ್ತಲು ಬಹಳ ಶ್ರಮ ಪಡಬೇಕಾಯಿತು. ಹೀಗೆಲ್ಲಾ ಹರಸಾಹಸ ಮಾಡಿ ಬಸ್‌ನಲ್ಲಿ ಕುಳಿತು, ಸುಧಾರಿಸಿ ಕೊಳ್ಳುತ್ತಿರುವಾಗಲೇ ನನ್ನ ಕಣ್ಣ ಎದುರಿಗೆ ಇಬ್ಬರು ಅವಸರದಲ್ಲಿ ಬಂದರು. ಬಹುಶಃ ಅಮ್ಮ, ಮಗಳು ಇರಬೇಕು ಅನಿಸುತ್ತದೆ. ಹೊರಟಿದ್ದಿ ಬಸ್ ಇವರಿಬ್ಬರನ್ನು ನೋಡಿ ನಿಲ್ಲಿಸಿತು. ತಕ್ಷಣ ಮಗಳು ಬಸ್ ಒಳಗೆ ಹತ್ತಿ, ಫುಟ್‌ಬೋರ್ಡ್‌ಮೇಲೆ ನಿಂತು, ಸುಮಾರು ಎಪ್ಪತ್ತೈದು ವರ್ಷದ ತಾಯಿಯನ್ನು ಫುಟ್ ಬೋರ್ಡ್‌ಗೆ ಹತ್ತಿಸಲು ಒದ್ದಾಡುತ್ತಿದ್ದಳು. ಎದ್ದು ಹೋಗಿ ಸಹಾಯ ಮಾಡೋಣ ಅಂತ ಅನಿಸಿದರೂ, ಆಗ ತಾನೇ ಪಡಿಪಾಟಲು ಬಿದ್ದು ಬಸ್ ಹತ್ತಿದ್ದರಿಂದ ನನಗೂ ಸುಸ್ತಾಗಿತ್ತು. ಅಷ್ಟರಲ್ಲಿ ಕಂಡಕ್ಟರ್ ಬಂದ. ಏನೋ ಸಹಾಯ ಮಾಡಬಹುದು ಅಂದರೆ, ಬೇಗ, ಬೇಗ ಎಂದು ಬೊಬ್ಬೆ ಹೊಡೆಯುತ್ತಿದ್ದಾನೆ. ಆತ ಎಷ್ಟೇ ಅವಸರಿಸಿದರೂ ಪಾಪ, ಆಕೆಗೆ ಮೇಲೆ ಬರಲು ಆಗುತ್ತಲೇ ಇಲ್ಲ. ಪುನಃ ಕಂಡಕ್ಟರ್ ಡ್ರೈವರ್ ಹತ್ತಿರ ಹೋಗಿ, “ಆ ಹೆಂಗಸು ಮೇಲೆ ಹತ್ತುವ ಅವಸ್ಥೆ ನೋಡಿ ಮಾರ್ರೆ’ ಅಂತ ಹೇಳುತ್ತಾ ತಮಾಷೆ ಮಾಡಿದಾಗ, ಡ್ರೈವರನ ಜೊತೆ ಸೇರಿ ಬಸ್ಸಿನಲ್ಲಿದ್ದ ಕೆಲವರು ನಗಾಡಿದರು.
ಈ ಪರಿಸ್ಥಿತಿ ಗಮನಿಸಿದ ಬಸ್‌ನಲ್ಲಿದ್ದ ಒಬ್ಬ ಸದೃಢ ಯುವಕ, ತಕ್ಷಣ ಹಿಂದಿನ ಬಾಗಿಲಿನಿಂದ ಕೆಳಗಿಳಿದು, ಮುಂದೆ ಹೋಗಿ ಆ ವೃದ್ದೆಯನ್ನು ಒಂದೇ ಸಲ ಎತ್ತಿ ಮೆಟ್ಟಿಲಿನ ಮೇಲೆ ಹತ್ತಿಸಿದ. ನಗಾಡುತ್ತಿದ್ದವರೆಲ್ಲರೂ ಅವಾಕ್ಕಾಗಿ ಅವನನ್ನೇ ನೋಡಹತ್ತಿದರು. ಆ ತಾಯಿ -ಮಗಳ ಕಣ್ಣಲ್ಲಿ ಆ ಯುವಕನ ಬಗ್ಗೆ ಅವ್ಯಕ್ತವಾದ ಮೆಚ್ಚುಗೆ, ಕೃತಜ್ಞತಾ ಭಾವ ಸೆಲೆ ಕಣ್ಣೀರ ಮೂಲಕ ವ್ಯಕ್ತವಾಯಿತು.
ಈ ಪ್ರಪಂಚದಲ್ಲಿ ಒಬ್ಬಿಬ್ಬರಲ್ಲಾದರೂ ಇಂಥ ಮನುಷ್ಯತ್ವ ಇನ್ನೂ ಇದೆ ಎಂಬುದು ಸಾಬೀತಾಯಿತು ಆವತ್ತು. ಇಂಥವರ ಸಂಖ್ಯೆ ಸಾವಿರವಾಗಲಿ.
-ಪುಷ್ಪ ಎನ್ ಕೆ ರಾವ್