Advertisement

ಇಂಟರ್‌ನೆಟ್‌ ಯುಗಕ್ಕೆ ಹಿರಿಯರು ಹೊಂದಿಕೊಂಡಾಗ

11:18 AM Jun 21, 2021 | Team Udayavani |

ಉನ್ನತ ವ್ಯಾಸಂಗಕ್ಕಾಗಿ ದೂರದ ಮೈಸೂರಿಗೆ ಹೋಗಬೇಕಾಯಿತು. ಅಪ್ಪ ಅಮ್ಮನನ್ನು ಬಿಟ್ಟು ಒಂದು ದಿನವೂ ಇದ್ದವಳಲ್ಲ ನಾನು. ಹಾಗಾಗಿ ಅವರು ಜತೆಗಿಲ್ಲದಿರುವುದು ತುಂಬಾ ಕಷ್ಟಕರವಾಗಿತ್ತು. ಹೋದ ಒಂದೇ ದಿನದಲ್ಲಿ ಅವರಿಬ್ಬರನ್ನು ನೋಡಬೇಕೆಂದು ಎಣಿಸಿತು. ಮುಂಜಾನೆ 5.30ರ ಬಸ್ಸಿಗೆ ಹೊರಟು ಬಂದೆ.

Advertisement

ಮುಂಜಾನೆ ಎದ್ದೊಡನೆ, ಊಟ ಮಾಡುವಾಗ, ರಾತ್ರಿ ನಿದ್ರೆ ಮಾಡುವ ಮುನ್ನ ಪ್ರತೀ ದಿನ ಅವರನ್ನು ಮನೆಯಲ್ಲಿ ನೋಡುತ್ತಿದ್ದ ನನಗೆ ಒಂದು ದಿನವೂ ನೋಡದೇ ಇರಲಾಗಲಿಲ್ಲ. ಅವರ ಜತೆ ಹೇಗಾದ್ರೂ ಮಾತನಾಡಬೇಕು, ನೋಡಬೇಕು ಅನಿಸುತ್ತಿತ್ತು. ಆದ್ರೆ ಕಾಲೇಜು ತುಂಬಾ ದೂರ, ಅವರನ್ನು ನೋಡುವುದು ತಿಂಗಳಿಗೊಮ್ಮೆ. ಅದಕ್ಕಾಗಿ ಏನಾದರೂ ಮಾಡಬೇಕಲ್ಲಾ. ಹಾಗಾಗಿ ಊರಿಗೆ ಹೋದಾಗ ಅಮ್ಮನ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್‌ ಹಾಕಿ ಕೊಟ್ಟೆ. ಕೇವಲ ವೀಡಿಯೋ ಕರೆ ಹೇಗೆ ಮಾಡಬಹುದು ಎಂದು ತಿಳಿಸಿ ಕೊಟ್ಟೆ. ಹಾಗೆ ವೀಡಿಯೋ ಕರೆ ಹೇಗೆ ಸ್ವೀಕರಿಸಬೇಕೆಂದು ಹೇಳಿಕೊಟ್ಟು ಮತ್ತೆ ಕಾಲೇಜಿಗೆ ಬಂದೆ.

ಪ್ರತೀ ದಿನ ಅಪ್ಪ ಅಮ್ಮ ನನ್ನ ಕರೆಗಾಗಿ ಕಾಯುತ್ತಿದ್ದರು. ಕರೆ ಮಾಡಿ ಮಾತನಾಡುತ್ತಿದ್ದರೆ ಅವರೇ ಹೇಳುತ್ತಿದ್ದಳು ಮಗಳೇ ಆನ್‌ಲೈನ್‌ಗೆ ಬಾ, ವೀಡಿಯೋ ಕಾಲ್‌ ಮಾಡು ಎಂದು. ವೀಡಿಯೋ ಕರೆ ಮಾಡಿದಾಗ ಅಡುಗೆ ಯಾವ ರೀತಿ ಮಾಡಬೇಕು, ಬಟ್ಟೆ ಹೇಗೆ ಒಗಿಯಬೇಕು ಎಲ್ಲ ಹೇಳಿಕೊಡುತ್ತಿದ್ದಳು ಅಮ್ಮ. ಅದೆಷ್ಟೋ ಬಾರಿ ಅಪ್ಪ ಅಮ್ಮನಿಗೆ ನಮ್ಮ ಟೀಚರ್‌ ಪಾಠ ಮಾಡೋದು ನೋಡು ಅಂತ ಅವಳಿಗೆ ವೀಡಿಯೋ ಕಾಲ್‌ ಮಾಡಿ ತೋರಿಸಿದ್ದು ಇದೆ.

ಅದಾದ ಅನಂತರ ಊರಿಗೆ ಹೋದಾಗಲೆಲ್ಲ ಒಂದೊಂದೇ ಹೊಸ ವಿಷಯ ಹೇಳಿ ಕೊಡುತ್ತಿದೆ. ಮೆಸೇಜ್‌ ಹೇಗೆ ಮಾಡುವುದು, ಡಿಪಿ ಹೇಗೆ ಬದಲಾಯಿಸುವುದು, ಸ್ಟೇಟಸ್‌ ಹೇಗೆ ಹಾಕುವುದು ಎಲ್ಲ ಕೆಲವೇ ಕೆಲವು ದಿನಗಳಲ್ಲಿ ಕಲಿತಳು ನನ್ನ ಅಮ್ಮ. ಅಪ್ಪನೂ ಕೂಡ ಕರೆ ಮಾಡಿದಾಗ ಮಾತನಾಡುತ್ತಿದ್ದರು. ನನ್ನನ್ನು ನೋಡಿದಾಗಲೆಲ್ಲ ಕಣ್ಣಲ್ಲಿ ನೀರು ಇದ್ದೇ ಇರುತ್ತಿತ್ತು. ಯಾಕಂದ್ರೆ ನಾನು ಅಪ್ಪನ ಮುದ್ದಿನ ಮಗಳು. ಅವರಿಗೆ ನನ್ನ ಬಿಟ್ಟಿರುವುದು ತುಂಬಾ ಕಷ್ಟ.

ಮತ್ತೆ ಊರಿಗೆ ಹೋದಾಗ ಅಮ್ಮನಿಗೆ ಫೇಸ್‌ಬುಕ್‌ ಹಾಕಿ ಕೊಟ್ಟೆ, ಅದಕ್ಕಾಗಿ ಅವಳ ಪೋಟೋ ತೆಗೆದದ್ದು ಒಂದಾ ಎರಡಾ| ಹಾಗೆ ನನ್ನ ಖಾತೆಯನ್ನು ಕೂಡ ಪರಿಶೀಲಿಸಿದ್ದಳು. ನನ್ನ ಖಾತೆಯಲ್ಲಿ ಇದ್ದ ಕೆಲವೊಂದು ಪೋಟೋ ನೋಡಿ ಬೈದಿದ್ದೂ ಇದೆ. ಅವಳಿಗೆ ಇನ್ನೊಂದು ಖುಷಿ ತಂದ ವಿಷಯ ಏನೆಂದರೆ ಅವಳ ಶಾಲಾ ಗೆಳತಿಯರು ಮತ್ತೆ ಫೇಸ್‌ಬುಕ್‌ಮುಖಾಂತರ ಒಂದಾದದ್ದು. ಅವರ ಫೋಟೋಗಳನ್ನು ಗುರುತಿಸಿ ರಿಕ್ವೆಸ್ಟ್‌ ಕಳಿಸಿದ್ದರು. ಅಲ್ಲಿ ಅವರ ನಡುವೆ ಫೋಟೋ, ಕಮೆಂಟ್‌, ಲೈಕ್‌ ಎಲ್ಲ ನೋಡಿ ನನಗೆ ಖುಷಿ. ಫೇಸ್‌ಬುಕ್‌ ಮೂಲಕ ಅದೆಷ್ಟೋ ಗೆಳೆಯರು, ಗೆಳತಿಯರು ಅಮ್ಮನಿಗೆ ಮತ್ತೆ ಸಿಕ್ಕರು.

Advertisement

ಯೂಟ್ಯೂಬ್‌ಗಳಲ್ಲಿ ಇರುವ ವೀಡಿಯೋ ನೋಡಿ ಅಡುಗೆ ಕಲಿತು, ಅದನ್ನ ಪ್ರಯೋಗಿಸಿ, ನನಗೂ ಲಿಂಕ್‌ ಕಳುಹಿಸುತ್ತಿದ್ದಳು. ನೋಡು ಇದು ಮಾಡು, ತುಂಬಾ ಋಷಿಯಾಗುತ್ತದೆ ಎಂದು. ಹಾಗೆ ಯೂಟ್ಯೂಬ್‌ನಲ್ಲಿ ಬರುತ್ತಿದ್ದ, ಯೋಗ ಕೂಡ ಕಲಿಯುತ್ತಿದ್ದಳಂತೆ.

ಅವರು ಸಿಕ್ಕಿದ ಅವಕಾಶಗಳನ್ನು ಎಷ್ಟು ಉತ್ತಮವಾಗಿ ಬಳಸಿಕೊಳ್ಳುತ್ತಾರೆ. ಅದೇ ಈಗಿನ ಪೀಳಿಗೆ ಗೊತ್ತು ಗುರಿ ಇಲ್ಲದ ಮನುಷ್ಯನ ನಡುವೆ ಗೆಳೆತನ, ಗೆಳೆತನದಿಂದ ಪ್ರೀತಿ, ಪ್ರೀತಿ ಇಂದ ಬ್ರೇಕ್‌ಅಪ್‌, ಕಷ್ಟ ನೋವು ನಲಿವು ಎಲ್ಲವನ್ನೂ ಅನುಭವಿಸಿ  ಪಾಠ ಕಲಿತರೂ ಅಷ್ಟಕಷ್ಟೆ. ನನ್ನ ಅಮ್ಮನಿಗೆ ಕಲಿಸಿದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಯೂಟ್ಯೂಬ್‌ ಯಾವುದನ್ನೂ ಆಕೆ ದುರುಪಯೋಗ ಪಡಿಸಿಕೊಳ್ಳಲಿಲ್ಲ. ನಾನೇ ಏಷ್ಟೋ ಬಾರಿ ಹೇಳಿದ್ದೇನೆ ಅಮ್ಮಾ ಜಾಗ್ರತೆ ಇರು, ರಿಕ್ವೆಸ್ಟ್‌ಗಳು ಬಂದಾಗ ಎಚ್ಚರಿಕೆಯಿಂದ ನೋಡಿಕೋ ಎಂದು. ಅವಳು ಒಂದು ಬಾರಿ ಅಲ್ಲ ಅದೆಷ್ಟೋ ಬಾರಿ ನನಗೆ ಹೇಳಿದ್ದಾಳೆ ಮಗಳೇ ನಿನ್ನ ಫ್ರೆಂಡ್‌ ಲೀಸ್ಟ್‌ನಲ್ಲಿ ಇರುವ ಆ ಹುಡುಗನ ಖಾತೆ ಫೇಕ್‌ ಖಾತೆ. ನೋಡು ಒಮ್ಮೆ ಎಂದು. ಅದಕ್ಕೆ ನಮ್ಮ ಹಿರಿಯರು ತಿಳಿದವರು, ಅರಿತವರು ಎಂದು ಹೇಳುವುದು. ಯಾವುದು ತಪ್ಪು, ಯಾವುದು ಸರಿ, ಯಾವುದನ್ನು ಎಷ್ಟು ಬಳಸಿಕೊಳ್ಳಬೇಕು, ಯಾವುದನ್ನು ಮಿತಿಯಲ್ಲಿ ಇಟ್ಟಿರಬೇಕು ಎಂದು ಅವರಿಗೆ ತಿಳಿದಿರುತ್ತದೆ. ನಾವೇ ಈ ಯುವ ಪೀಳಿಗೆ ತಂತ್ರಜ್ಞಾನ ಮುಂದುವರಿಯುತ್ತಾ ಹೋದಂತೆ ನಾವು ಬದಲಾಗಿ ಎಡವುತ್ತಿರುವುದು. ಈಗ ಮನೆಯಲ್ಲಿ ಅಮ್ಮ ಇನ್‌ಸ್ಟಾಗ್ರಾಂ ಓಪನ್‌ ಮಾಡಿ ಕೊಡು ಎಂದಿದ್ದಾಳೆ. ಯಾಕೆಂದರೆ ಅದರಲ್ಲಿ ಬರುವ ವೀಡಿಯೋಗಳನ್ನ ತೋರಿಸಿದ್ದೆ. ಅವಳಿಗೆ ಬಾರೀ ಇಷ್ಟ ಆಗಿದೆ. ಹಾಗೆ ಅಪ್ಪ ನನ್ನ ಮೊಬೈಲ್‌ ಬಳಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಯಕ್ಷಗಾನ ನೋಡ್ತಾರೆ ಅಷ್ಟೇ. ಹಿರಿಯರು ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಾರೆ. ಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಎಷ್ಟು ಬೇಕೋ ಅಷ್ಟಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಈಗಿನ ಯುವಪೀಳಿಗೆಯೂ ಸಹ ತಂತ್ರಜ್ಞಾನವನ್ನು ಎಷ್ಟು ಬೇಕೋ ಅಷ್ಟು ಸೀಮಿತವಾಗಿ ಬಳಸಿದರೆ ಒಳಿತು. ಅತಿಯಾದರೆ ಅಮೃತವೂ ವಿಷವಾಗುತ್ತದೆ.

 

- ಚೈತ್ರಾ ರಾವ್‌ ,ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next