Advertisement

ಮಾವು ತಿನ್ನುವಾಗ ಬಲು ಜೋಕೆ

11:58 AM May 17, 2019 | pallavi |

ಬೆಂಗಳೂರು: ರಾಜ್ಯದೆಲ್ಲೆಡೆ ಮಾವಿನ ಸುಗ್ಗಿ ಆರಂಭವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಸಾಯನಿಕ ಮಾವಿನ ಹಣ್ಣಿನ ಅಬ್ಬರ ಜೋರಿದ್ದು, ಆತಂಕದಲ್ಲಿಯೇ ಮಾವನ್ನು ಸವಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಾರುಕಟ್ಟೆ, ಮುಖ್ಯರಸ್ತೆಗಳು ಸೇರಿದಂತೆ ನಗರ ಪ್ರದೇಶದ ವಿವಿಧೆಡೆ ಮಾವಿನ ವಹಿವಾಟು ಭರದಿಂದ ಸಾಗುತ್ತಿದ್ದು, ಮಾವು ಪ್ರಿಯರು ಮಾವಿನ ಹಣ್ಣನ್ನು ಮುಗಿಬಿದ್ದು ಆಸ್ವಾದಿಸುತ್ತಿದ್ದಾರೆ. ಆದರೆ, ಮಾವನ್ನು ಮಾಗಿಸುವ ಸಲುವಾಗಿ ಕ್ಯಾಲ್ಸಿಯಂ ಕಾರ್ಬೈಡ್‌ನ್ನು ಎಲ್ಲೆಡೆ ಯಥೇಚ್ಛವಾಗಿ ಬಳಕೆ ಮಾಡುತ್ತಿದ್ದು, ಅಂತಹ ಮಾವು ಸೇವಿಸುವವರ ದೇಹಕ್ಕೆ ರಾಸಾಯನಿಕ ವಿಷ ನೇರವಾಗಿ ಸೇರುತ್ತಿದೆ.

ಸುಗ್ಗಿಯ ಆರಂಭದ ದಿನಗಳಲ್ಲಿ ಮಾವಿನ ಬೇಡಿಕೆ ಹಾಗೂ ಬೆಲೆ ಹೆಚ್ಚಿರುತ್ತದೆ. ಹೀಗಾಗಿ, ಅನೇಕ ಮಧ್ಯವರ್ತಿಗಳು ಹಾಗೂ ಮಾರಾಟಗಾರರು ಬೇಗ ಮಾರುಕಟ್ಟೆಗೆ ಮಾವಿನ ಹಣ್ಣನ್ನು ತರಬೇಕು ಎಂಬ ಉದ್ದೇಶದಿಂದ ಬಲಿತ ಮಾವಿನ ಕಾಯಿ ಕಿತ್ತು, ಕ್ಯಾಲ್ಸಿಯಂ ಕಾರ್ಬೈಡ್‌ (ಪೌಡರ್‌) ಜತೆ ಇಟ್ಟು ಕೃತಕವಾಗಿ ಹಣ್ಣು ಮಾಡಿ, ಮಾರಾಟ ಮಾಡುತ್ತಾರೆ. ಈ ಕೃತಕ ಮಾಗಿಸುವ ಪ್ರಕ್ರಿಯೆಯಿಂದ ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕವು ಹಣ್ಣಿನ ಮೂಲಕ ಮಾನವನ ದೇಹ ಸೇರಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೂ ಕಾರಣವಾಗುತ್ತಿದೆ.

ಏನಿದು ಕ್ಯಾಲ್ಸಿಯಂ ಕಾರ್ಬೈಡ್‌: ಇದರ ರಾಸಾಯನಿಕ ಸಂಯೋಜನೆ CaC2 ಆಗಿದ್ದು, ಮಾರುಕಟ್ಟೆಯಲ್ಲಿ ಇದನ್ನು ಪೌಡರ್‌ ಎಂದೇ ಕರೆಯುತ್ತಾರೆ. ಇದು ವಾತಾವರಣದ ಆಮ್ಲಜನಕದೊಂದಿಗೆ ಸೇರಿದಾಗ ಎಸಿಟಿಲಿನ್‌ ಎಂಬ ಆಮ್ಲ ಬಿಡುಗಡೆ ಮಾಡುತ್ತದೆ. ಆಮ್ಲ, ಹಣ್ಣುಗಳನ್ನು ಶೀಘ್ರವಾಗಿ ಮಾಗಿಸುವ ಪ್ರಕ್ರಿಯೆಗೆ ಸಹಕಾರಿಯಾಗುತ್ತದೆ.

ಈ ರಾಸಾಯನಿಕವನ್ನು ಕೃತಕ ಮಾಗಿಸುವ ಪ್ರಕ್ರಿಯೆಗೆ ಬಳಸದಂತೆ ಆಹಾರ ಕಾಯ್ದೆಯಡಿ ಸುಮಾರು ವರ್ಷಗಳ ಹಿಂದೆಯೇ ರಾಷ್ಟ್ರಾದ್ಯಂತ ನಿಷೇಧ ಮಾಡಲಾಗಿದೆ. ಆದರೂ, ಮಾರುಕಟ್ಟೆಯ ಎಲ್ಲಾ ಹಣ್ಣಿನ ವ್ಯಾಪಾರಿಗಳಿಗೆ ಇದರ ಪರಿಚಯ ಇದ್ದೇ ಇರುತ್ತದೆ. ಅಲ್ಲದೆ, ಈ ರಾಸಾಯನಿಕ ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿದ್ದು, ಲಾಭದ ಆಸೆಗೆ ಕದ್ದು ಮುಚ್ಚಿ ಮಾವು, ಬಾಳೆ, ಕಲ್ಲಂಗಡಿ ಸಹಿತ ವಿವಿಧ ಹಣ್ಣುಗಳಲ್ಲಿಟ್ಟು ಕೃತಕವಾಗಿ ಮಾಗಿಸಲು ಇದನ್ನು ಬಳಸಲಾಗುತ್ತಿದೆ.

Advertisement

ಯಾವೆಲ್ಲಾ ಕಾಯಿಲೆಗಳಿಗೆ ತುತ್ತಾಗಬಹುದು: ಕೃತಕವಾಗಿ ಮಾಗಿಸಿದ ಮಾವಿನ ಮೂಲಕ ಕ್ಯಾಲ್ಸಿಯಂ ಕಾರ್ಬೈಡ್‌ ನಮ್ಮ ದೇಹ ಸೇರುವುದರಿಂದ ಮೊದ ಮೊದಲು ವಾಂತಿ, ಅತಿಸಾರ ಸಮಸ್ಯೆ ಉಂಟಾಗುತ್ತದೆ. ಆ ರಾಸಾಯನಿಕದ ನಿರಂತರ ಸೇವನೆ ಅಥವಾ ಅದರ ಸೇವನೆ ಪ್ರಮಾಣ ಹೆಚ್ಚಿದರೆ ಯಕೃತ್‌, ಮೂತ್ರಪಿಂಡಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತಿಮವಾಗಿ ಕಾರ್ಬೈಡ್‌ನ‌ಲ್ಲಿರುವ ಆರ್ಸೆನಿಕ್‌ ಮತ್ತು ಫಾಸ್ಪರಸ್‌ನಂತಹ ಅಂಶಗಳು ಬಹು ಅಂಗಾಂಗ ವೈಫ‌ಲ್ಯ, ಕ್ಯಾನ್ಸರ್‌ಗೂ ಕಾರಣವಾಗುತ್ತವೆ ಎನ್ನುತ್ತಾರೆ ವೈದ್ಯರು.

ರಾಸಾಯನಿಕ ಅಂಶ ಕಂಡು ಹಿಡಿಯೋದು ಹೇಗೆ?

•ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸಿದ ಮಾವನ್ನು ಮೂಗಿನ ಬಳಿ ಹಿಡಿದಾಗ ಯಾವುದೇ ವಾಸನೆ ಬರುವುದಿಲ್ಲ. ಸಹಜ ಮಾವು ಪರಿಮಳ ಬೀರುತ್ತದೆ.
•ಹೊರ ಭಾಗದಲ್ಲಿ ಕೆಂಬಣ್ಣ, ಹಳದಿಯಿಂದ ಕೂಡಿದ್ದು, ತಿಂದಾಗ ಯಾವುದೇ ರುಚಿ ಇರುವುದಿಲ್ಲ.
•ಸಹಜವಾಗಿ ಮಾಗಿಸಿದ ಹಣ್ಣು 8 ರಿಂದ 10 ದಿನ ಬಾಳಿಕೆ ಬರುತ್ತದೆ. ಕೃತಕ ಹಣ್ಣು ಎರಡು ದಿನಕ್ಕೆ ಕೆಟ್ಟು ಹೋಗುತ್ತದೆ.
ಯಾರಿಗೆ ದೂರು ಕೊಡಬಹುದು?

ರಾಸಾಯನಿಕ ಮಾವಿನ ಕುರಿತು ಸಾರ್ವಜನಿ ಕರು ದೂರು ನೀಡಲು ಜಿಲ್ಲಾ ಮಟ್ಟದಲ್ಲಿ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸ ಬಹುದು. //www.foodsafety.kar.nic.in ವೆಬ್‌ಸೈಟ್‌ನಲ್ಲಿ ಜಿಲ್ಲಾವಾರು ಅಧಿಕಾರಿಗಳ ದೂರವಾಣಿ ಸಂಖ್ಯೆ ಲಭ್ಯವಿದೆ.
ಹಣ್ಣುಗಳ ಮಾಗಿಸುವ ಪ್ರಕ್ರಿಯೆಯಲ್ಲಿ ರಾಸಾಯನಿಕ ಬಳಕೆ ಕುರಿತು ಯಾವುದೇ ದೂರು ಬಂದರೂ ಅಲ್ಲಿಗೆ ತೆರಳಿ ಹಣ್ಣನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕಳಿಸುತ್ತೇವೆ. ರಾಸಾಯನಿಕ ಅಂಶ ದೃಢಪಟ್ಟರೆ ದಂಡ ವಿಧಿಸಲಾಗುವುದು.
●ಡಾ.ಶೈಲೇಂದ್ರಕುಮಾರ್‌, ಅಂಕಿತ ಅಧಿಕಾರಿಗಳು, ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪರೀಕ್ಷೆ ವಿಭಾಗ.
ಸುಲಭವಾಗಿ ಈ ರಾಸಾಯನಿಕ ಹಣ್ಣು ಮಾರಾಟಗಾರರಿಗೆ ಸಿಗುತ್ತಿದೆ. ಇಂತಹ ರಾಸಾಯನಿಕ ಹಣ್ಣುಗಳು ಕ್ಯಾನ್ಸರ್‌ಕಾರಕವೂ ಆಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಅದನ್ನು ಪತ್ತೆ ಹಚ್ಚುವಲ್ಲಿ ವಿಫ‌ಲವಾಗುತ್ತಿದ್ದಾರೆ.
● ಡಾ.ಎಸ್‌.ವಿ.ಹಿತ್ತಲಮನಿ, ನಿವೃತ್ತ ಅಪರ ನಿರ್ದೇಶಕರು, ತೋಟಗಾರಿಕೆ ಇಲಾಖೆ
ಜಯಪ್ರಕಾಶ್‌ ಬಿರಾದಾರ್‌
Advertisement

Udayavani is now on Telegram. Click here to join our channel and stay updated with the latest news.

Next