Advertisement

ರೈಲು ಬಸ್‌ ಸಂಚಾರ ಪುನಾರಂಭ ಯಾವಾಗ?

09:37 AM Jun 15, 2019 | Team Udayavani |

ಕಲಾದಗಿ: ಬಾಗಲಕೋಟೆ -ಕುಡಚಿ ರೈಲು ಮಾರ್ಗ ಖಜ್ಜಿಡೋಣಿವರಗೆ ಮುಗಿದಿದ್ದು, ಈ ಮಾರ್ಗದಲ್ಲಿ ರೈಲ್ ಬಸ್‌ ಸಂಚಾರ ಆರಂಭವಾಗಿ ವರ್ಷವಾಗುವುದರೊಳಗೆ ಸ್ಥಗಿತಗೊಂಡಿದೆ. ಈ ಒಂದು ವರ್ಷದಲ್ಲಿ ರೈಲ್ ಬಸ್‌ ಖಜ್ಜಿಡೋಣಿ ನಿಲ್ದಾಣಕ್ಕೆ ಬಂದ ದಿನಕ್ಕಿಂತ ಬಾರದ ದಿನಗಳೇ ಹೆಚ್ಚು. ಇದರಿಂದ ಈ ಭಾಗದ ಜನರ ರೈಲು ಸಂಚಾರದ ಕನಸು ಕನಸಾಗಿಯೇ ಉಳಿದಿದೆ.

Advertisement

ಹೌದು, ಬಾಗಲಕೋಟೆ-ಕುಡಚಿ ರೈಲು ಮಾರ್ಗ ಜಿಲ್ಲೆಯ ಜನರ ಸ್ವಾತಂತ್ರ್ಯಪೂರ್ವ ಬೇಡಿಕೆಯಾಗಿದೆ. ಈ ರೈಲು ಮಾರ್ಗ ಕಾಮಗಾರಿ 2009ರಲ್ಲಿ ಆರಂಭವಾಗಿದ್ದು, 2017ರಲ್ಲಿ ಖಜ್ಜಿಡೋಣಿವರೆಗೆ 33 ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ಈ ಮಾರ್ಗ ವ್ಯಾಪ್ತಿ ಬರುವ ಜನರ ಅನುಕೂಲಕ್ಕಾಗಿ 2018, ಜೂನ್‌ 15ರಂದು ರೈಲು ಬಸ್‌ ಸೇವೆ ಆರಂಭಿಸಲಾಗಿತ್ತು. ಆದರೆ, ಈ ಸೇವೆ ಆರಂಭಗೊಂಡ ಒಂದು ತಿಂಗಳಲ್ಲಿಯೇ ಸ್ಥಗಿತಗೊಂಡಿದೆ. ಹೀಗಾಗಿ ಈ ಭಾಗದ ಜನರಿಗೆ ರೈಲು ಸಂಚಾರ ಕನಸು ಕನಸಾಗಗೇ ಉಳಿದಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಬಾಗಲಕೋಟೆ ಜಿಲ್ಲೆಯ ಜನರ ಬಹುನಿರೀಕ್ಷೆಯ ಮಹತ್ವಕಾಂಕ್ಷೆಯ ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಮಂದ ಗತಿಯಲ್ಲಿ ಸಾಗಲು ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೇ ಕಾರಣ. ರೈಲು ಮಾರ್ಗ ಪೂರ್ಣಗೊಂಡ ಮಾರ್ಗ ಮಧ್ಯೆ ರೈಲು ಬಸ್‌ ಸಂಚಾರ ನಡೆಯುವಂತೆ ನೋಡಿಕೊಳ್ಳುವುದರಲ್ಲೂ ತಮ್ಮ ಇಚ್ಚಾಶಕ್ತಿ ತೋರುತ್ತಿಲ್ಲ ಎಂದು ಈ ಭಾಗದ ಜನರ ಆರೋಪ. ಆದರೆ, ಬಾಗಲಕೋಟೆ-ಖಜ್ಜಿಡೋಣಿ ರೈಲು ಮಾರ್ಗದಲ್ಲಿ ರೈಲು ಬಸ್‌ ಸಂಚಾರ ಸ್ಥಗಿತಗೊಳ್ಳಲು ಪ್ರಯಾಣಿಕರ ಕೊರತೆ ಪ್ರಮುಖ ಕಾರಣ ಎಂದು ರೈಲ್ವೆ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಪುನರಾರಂಭಕ್ಕೆ ಆಗ್ರಹ: ಖಜ್ಜಿಡೋಣಿ, ಕಲಾದಗಿ, ಹಿರೇಶೆಲ್ಲಿಕೇರಿ, ಚಿಕ್ಕಶೆಲ್ಲಿಕೇರಿ, ನೀರಬೂದಿಹಾಳ, ಕೆರಕಲಮಟ್ಟಿ, ಸೂಳಿಕೇರಿ ಇನ್ನಿತರ ಗ್ರಾಮಗಳ ಜನರಿಗೆ ಬಾಗಲಕೋಟೆಗೆ ತೆರಳಲು ರೈಲು ಬಸ್‌ ಸಂಚಾರ ಅನುಕೂಲವಾಗಿದೆ. ಈ ರೈಲು ಬಸ್‌ ಸಂಚಾರವನ್ನು ಪುನರಾರಂಭಿಸಬೇಕೆಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.

•ಚಂದ್ರಶೇಖರ ಆರ್‌.ಎಚ್

Advertisement
Advertisement

Udayavani is now on Telegram. Click here to join our channel and stay updated with the latest news.

Next