ಚೌತಿ ಹಬ್ಬಕ್ಕೆ ನಾನು, ನನ್ನ ಊರು ಪುತ್ತೂರಿಗೆ ಹೋಗಬೇಕಿತ್ತು. ಆದರೆ, ಅವತ್ತು ರಾತ್ರಿ ಬಸ್‌ಗಳೆಲ್ಲ ಬುಕ್ ಆಗಿ, ಸೀಟ್ ಇಲ್ಲದ ಕಾರಣ ಬೆಂಗಳೂರಿನಲ್ಲಿಯೇ ಇರಬೇಕಾಯಿತು. ಆಫೀಸಿನಲ್ಲಿ ಕೆಲಸವೂ ಜಾಸ್ತಿ ಇದ್ದಿದ್ದರಿಂದ ತಡರಾತ್ರಿ ರೂಮ್‌ಗೆ ತಲುಪಿ, ಹಬ್ಬದ ದಿನ ಬೆಳಗ್ಗೆ ಏಳುವಾಗ 11 ಗಂಟೆ! ಯಾಕೋ ಮೈ ತುಂಬಾ ಬಿಸಿಯಾಗಿ, ಜ್ವರ ಬಂದಿತ್ತು. ವೈದ್ಯರ ಕ್ಲಿನಿಕ್ಕಿಗೆ ಹುಡುಕಾಡಿದೆ. ಯಾವುದೂ ತೆರೆದಿರಲಿಲ್ಲ. ಜೋರು ಬಿಸಿಲು. ಬೆಳಗ್ಗೆ ತಿಂಡಿ ಬೇರೆ ತಿಂದಿರಲಿಲ್ಲ. ಹಸಿವು ನನ್ನನ್ನೇ ನುಂಗುತ್ತಿತ್ತು. ರೂಮ್‌ನಲ್ಲಿ ಏನಾದರೂ ತಿಂಡಿ ಮಾಡಿಕೊಳ್ಳಲು ತಾಳ್ಮೆ ಇದ್ದಿರಲಿಲ್ಲ, ಆರೋಗ್ಯವೂ ಸಹಕರಿಸುತ್ತಿರಲಿಲ್ಲ. ಕೆಲ ದೂರದಲ್ಲಿದ್ದ ಹೋಟೆಲ್‌ಗೆ ನಡೆದು ಹೋಗೋಣ ಅಂತ ಹೊರಟೆ.
ಆದರೆ, ಅದೇನಾಯಿತೋ? ಕೆಲ ದೂರ ನಡೆದಿದ್ದೆನಷ್ಟೇ… ಅಲ್ಲೇ ಮೂಛೆì ಬಿದ್ದುಬಿಟ್ಟೆ. ಕಣ್ಣು ಬಿಟ್ಟು ನೋಡುವಾಗ, ಒಬ್ಬರ ಮನೆಯಲ್ಲಿದ್ದೆ. ಹಾಸಿಗೆ ಮೇಲೆ ಮಲಗಿದ್ದೆ. ನನ್ನೆದುರು ಒಬ್ಬರು ಮಹಿಳೆ ಕುಳಿತಿದ್ದರು. ನನ್ನ ಹಣೆಗೆ ಥಂಡಿ ಬಟ್ಟೆ ಹಾಕಿ,
ಉಪಚರಿಸುತ್ತಿದ್ದರು.
“ವಿಶ್ರಾಂತಿ ತೆಗೆದುಕೊಳ್ಳಿ. ನಿಮಗೆ ವಿಪರೀತ ಜ್ವರ ಬಂದಿದೆ…’ ಎಂದು ಹೇಳಿ, ಅವರ ಮನೆ ಬಾಗಿಲೆದುರೇ ಮೂಛೆì ಬಿದ್ದ ನನ್ನ ಅವಸ್ಥೆಯನ್ನು ಹೇಳಿದರು. “ಯಾರೋ ಪಾಪ, ಹುಷಾರು ತಪ್ಪಿದ್ದಾರೆ’ ಎಂದು ಅವರ ಯಜಮಾನರು ಒಳಗೆ ಎತ್ತಿಕೊಂಡು ಬಂದರಂತೆ. ನಿಜಕ್ಕೂ ಗಣಪತಿಯೇ ಅಂದು ಮನುಷ್ಯನ ರೂಪದಲ್ಲಿ ಬಂದು ನನ್ನ ಕಷ್ಟಕ್ಕೆ ನೆರವಾದನೇನೋ! ಅಂದು ಅವರ ಮನೆಯಲ್ಲಿಯೇ ಹಬ್ಬದ ಊಟ ಆಯಿತು. ಒಟ್ಟಿಲ್ಲಿ, ಅಂದು ಅವರಿಗೆ ನಾನು ಬಂಧುವಾಗಿದ್ದೆ.
ಬೆಂಗಳೂರಿನ ಮೇಲೆ ಅನೇಕರು ಆರೋಪ ಹೊರಿಸುತ್ತಾರೆ. ಇಲ್ಲಿನವರು ಯಾರೊಂದಿಗೂ ಬೆರೆಯುವುದಿಲ್ಲ, ಅಕ್ಕಪಕ್ಕದ ಮನೆಯವರೂ ಇಲ್ಲಿ ಪರಿಚಿತರಾಗುವುದಿಲ್ಲ. ನಕ್ಕರೆ ಪ್ರತಿಯಾಗಿ ನಗುವುದಿಲ್ಲ… ಇತ್ಯಾದಿ ಮಾತುಗಳನ್ನು ಕೇಳಿದ್ದೆ. ಆದರೆ, ಆ ಮಾತನ್ನು ಈ ದಂಪತಿ ಸುಳ್ಳು ಮಾಡಿದ್ದರು. ಅವರಿಗೆ ನಾನು ಎಂದೆಂದಿಗೂ ಋಣಿ.
– ಕಾರ್ತಿಕ್ ನಾಯಕ್