Advertisement

ಸರಕಾರಿ ಶಾಲೆಗಳಿಗೆ ಕಾಯಕಲ್ಪ ಯಾವಾಗ?

12:50 AM Jun 08, 2022 | Team Udayavani |

ಇತ್ತೀಚಿನ ಕೆಲವು ವರ್ಷಗಳಲ್ಲಿ ಸರಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದರೆ ಫ‌ಲಿತಾಂಶದಲ್ಲೂ ಸರಕಾರಿ ಶಾಲೆಗಳು ಸಾಕಷ್ಟು ಪ್ರಗತಿಯನ್ನು ಕಂಡಿವೆ. ಈ ಆಶಾದಾಯಕ ವರದಿಗಳ ನಡುವೆಯೇ ಸರಕಾರಿ ಶಾಲೆಗಳು ಮೂಲಸೌಕರ್ಯಗಳ ಸಮಸ್ಯೆಯಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ ಎಂಬುದು ತೀರಾ ಬೇಸರದ ಸಂಗತಿ.

Advertisement

ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆ ನೀಡಿರುವ ಅಂಕಿಅಂಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ರಾಜ್ಯದಲ್ಲಿನ ಸರಕಾರಿ ಶಾಲೆಗಳ ವಾಸ್ತವ ಚಿತ್ರಣದ ಅರಿವಾಗುತ್ತದೆ. ಕುಡಿಯುವ ನೀರು, ಶೌಚಾಲಯ, ಸುವ್ಯವಸ್ಥಿತ ಕಟ್ಟಡ, ಕಾಂಪೌಂಡ್‌, ವಿದ್ಯುತ್‌ ಸಂಪರ್ಕ ಆದಿಯಾಗಿ ಮೂಲ ಸೌಕರ್ಯಗಳ ಕೊರತೆಯ ದೊಡ್ಡ ಪಟ್ಟಿಯೇ ಈ ಶಾಲೆಗಳಲ್ಲಿ ಕಾಣಸಿಗುತ್ತಿವೆ. ಬಹುತೇಕ ಶಾಲೆಗಳು ಒಂದಲ್ಲ ಒಂದು ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿವೆ. ಇದು ಇಂದು-ನಿನ್ನೆಯ ಸಮಸ್ಯೆಯಲ್ಲ. ಪ್ರತೀ ವರ್ಷ ಕೂಡ ಶೈಕ್ಷಣಿಕ ವರ್ಷ ಆರಂಭವಾದಾಗ ಈ ಬಗ್ಗೆ ಒಂದಿಷ್ಟು ಚರ್ಚೆಗಳು ನಡೆಯುತ್ತವೆ. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನುವಾಗ ಆ ಶಾಲೆಗೆ ಸೀಮಿತವಾಗಿ ಸಮಸ್ಯೆಯನ್ನು ನಿವಾರಿಸುವ ಕೆಲಸಕಾರ್ಯಗಳು ನಡೆಯುತ್ತವೆ.

ದಶಕಗಳ ಹಿಂದೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದ ಸಂದರ್ಭದಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ ಸೇರ್ಪಡೆಗೊಳಿಸಲು ಮುಗಿಬೀಳುತ್ತಿದ್ದರು. ಶುಲ್ಕ ಹೆಚ್ಚಾ ಗಿದ್ದರೂ ತಮ್ಮ ಮಕ್ಕಳಿಗೆ ಸುರಕ್ಷಿತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಲಿದೆ ಎಂಬ ವಿಶ್ವಾಸ ಅವರದಾಗಿತ್ತು. ಇದರ ಪರಿಣಾಮವಾಗಿ ಸರಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ಕಡಿಮೆಯಾದಾಗ ಸರಕಾರ ಈ ಸಮಸ್ಯೆಯ ಮೂಲಕ್ಕೆ ಔಷಧ ಕೊಡುವ ಬದಲು ತಾನೂ ಆಂಗ್ಲ ಮಾಧ್ಯಮ ತರಗತಿ ಗಳನ್ನು ಆರಂಭಿಸಿ ಒಂದಿಷ್ಟು ಸಂಖ್ಯೆಯ ಮಕ್ಕಳನ್ನು ಸರಕಾರಿ ಶಾಲೆ ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸರಕಾರಿ ಶಾಲೆಗಳಲ್ಲಿ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಲಭಿಸುತ್ತದೆ ಎಂದಾದಾಗ ಮಧ್ಯಮ ವರ್ಗದ ಮಂದಿ ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಸೇರ್ಪಡೆ ಗೊಳಿಸಿದರು. ಇದರಿಂದ ಸರಕಾರಿ ಶಾಲೆಗಳಲ್ಲೂ ಮಕ್ಕಳ ದಾಖಲಾತಿ ಹೆಚ್ಚಿದ್ದೇ ಅಲ್ಲದೆ ಶಿಕ್ಷಣದ ಗುಣಮಟ್ಟದಲ್ಲೂ ಸುಧಾರಣೆಯಾಯಿತು. ಆದರೆ ಸರಕಾರಿ ಶಾಲೆಗಳು ಈ ಹಿಂದಿನಿಂದಲೂ ಎದುರಿಸುತ್ತ ಬಂದಿರುವ ಮೂಲ ಸೌಕರ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಯಿಂದಾಗಲಿ, ಸರಕಾರದಿಂದಾಗಲಿ ಪ್ರಯತ್ನಗಳು ನಡೆ ಯಲೇ ಇಲ್ಲ. ಮಕ್ಕಳು ಸುರಕ್ಷೆಗೆ ಅಪಾಯ ತಂದೊಡ್ಡಬಲ್ಲ ಕಟ್ಟಡಗಳಲ್ಲಿ ಇಂದಿಗೂ ಸರಕಾರಿ ಶಾಲೆಗಳು ನಡೆಯುತ್ತಿವೆ ಎಂಬುದು ತೀರಾ ವಿಪ ರ್ಯಾಸವೇ ಸರಿ. ಆಧುನಿಕತೆಗೆ ಸರಕಾರಿ ಶಾಲೆಗಳು ತೆರೆದುಕೊಂಡಿವೆ ಯಾದರೂ ಮೂಲಸೌಕರ್ಯಗಳ ಕೊರತೆ ಇನ್ನೂ ಭಾದಿಸುತ್ತಿದೆ.

ಇನ್ನಾದರೂ ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಶಾಲಾ ಕಟ್ಟಡಗಳ ನಿರ್ವಹಣೆ, ಮೂಲಸೌಕರ್ಯಗಳ ಕಲ್ಪಿಸುವಿಕೆ ಆದಿಯಾಗಿ ಸರಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲು ಸಮಗ್ರವಾದ ಕಾರ್ಯಸೂಚಿ ರಚಿಸಿ, ಅನುಷ್ಠಾನಗೊಳಿಸಬೇಕು. ಇಲ್ಲವಾದಲ್ಲಿ ಸರಕಾರಿ ಶಾಲೆಗಳು ಮತ್ತೆ ಹಿನ್ನೆಲೆಗೆ ಸರಿಯುವ ಸಾಧ್ಯತೆ ಅಧಿಕ. ಕಲಿಕೆಗೆ ಪೂರಕ ವಾತಾವರಣ, ವ್ಯವಸ್ಥೆಗಳು ಇದ್ದಲ್ಲಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿ ಸುವುದು ಸವಾಲಿನ ಕಾರ್ಯವೇನಲ್ಲ. ಈ ದಿಸೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಜನಸಮುದಾಯ ಕೈಜೋಡಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next