Advertisement

ಅಗ್ನಿಸಾ…ಕ್ಷಿ ಧಾರಾವಾಹಿಯೊಂದು ಮುಗಿದಾಗ…..

09:21 AM Jan 16, 2020 | mahesh |

ಸೀರಿಯಲ್‌ಗ‌ಳಿಗೂ ಹೆಣ್ಣುಮಕ್ಕಳಿಗೂ ಬಿಡದ ನಂಟು. ಅದೆಷ್ಟೋ ಮಂದಿ, ಸೀರಿಯಲ್‌ನ ಪಾತ್ರಗಳಲ್ಲಿ ತಮ್ಮನ್ನೇ ಕಾಣುವುದುಂಟು! ಒಂದು ಧಾರಾವಾಹಿ ಮುಗಿದರೆ, “ಅಯ್ಯೋ, ಮುಗಿದೇ ಹೋಯ್ತಾ?’ ಎಂದು ಸಂಕಟದಿಂದ ಹೇಳುವುದೂ ಉಂಟು. ಈ ಧಾರಾವಾಹಿಗಳು ಉಂಟು ಮಾಡಿದ ಪಜೀತಿಗಳು, ನೀಡಿದ ಅನುಭವಗಳು ಒಂದಾ, ಎರಡಾ…

Advertisement

ಹೊಸವರ್ಷದಂದು ಎಲ್ಲರೂ ಶುಭಾಶಯಗಳನ್ನು ಕೋರುತ್ತಿದ್ದರೆ ನನಗಂತೂ ಮನದಲ್ಲಿ ಹೇಳಲಾಗದ ಕಸಿವಿಸಿ. ಅದಕ್ಕೆ ಕಾರಣ ಏನಂತ ಹೇಳ್ಳೋದು? ಈ ವರ್ಷದಾರಂಭದಲ್ಲೇ ನನ್ನ ಮೆಚ್ಚಿನ ಜೊತೆಗಾತಿಗೆ ಅಂತ್ಯಕಾಲ ಸಮೀಪಿಸಿತ್ತು. ಹೇಗಾದರೂ ಮಾಡಿ ಇನ್ನೂ ಕೆಲ ವರ್ಷ ಉಳಿಯುವಂತೆ ಮಾಡಲು ನನಗಾಸೆ, ಆದರೆ ನಮ್ಮ ಕೈಯಲ್ಲೇನಿದೆ? ಅಲ್ವ…. ಯಾರ್ಯಾರಿಗೆ ಎಷ್ಟು ಲಭ್ಯವೋ ಅಷ್ಟೇ ಸಿಕ್ಕೋದು ತಾನೆ? ಈ ನನ್ನ ಜೊತೆಗಾತಿಯ ಆಯಸ್ಸೂ ಮುಗೀತಾ ಬಂದಿತ್ತು. ನಾನಂತೂ ಮನದಲ್ಲಿ ನೋವು ಅನುಭವಿಸೋದು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ.

ಅಗ್ನಿಸಾ…ಕ್ಷಿ
ನಾನು ಯಾವುದರ ಬಗ್ಗೆ ಹೇಳ್ತಿರೋದೂಂತ ಯೋಚಿಸ್ತಿದ್ದೀರಾ?ಅದೇ ಮಾರಾಯ್ರೆ, ಕಳೆದ ಐದಾರು ವರ್ಷಗಳಿಂದ ನಮ್ಮನ್ನೆಲ್ಲ ರಂಜಿಸುತ್ತಿದ್ದ, ನಮ್ಮೆಲ್ಲರ ಅಮೂಲ್ಯ ಸಮಯವನ್ನು ತನಗಾಗಿ ಮೀಸಲಿರಿಸಿಕೊಂಡಿದ್ದ, ಮೊನ್ನೆ ಮೊನ್ನೆ ತಾನೆ ಸುಖಾಂತ್ಯಗೊಂಡ ನಮ್ಮೆಲ್ಲರ ಪ್ರೀತಿಯ ಅಗ್ನಿಸಾಕ್ಷಿ ಧಾರಾವಾಹಿ. ಎಷ್ಟೊಂದು ಸುಂದರವಾದ ಧಾರಾವಾಹಿಯದು. ಅದರ ಕಥೆ, ಪಾತ್ರಗಳು,ದೃಶ್ಯಗಳು ಎಲ್ಲವೂ ಸುಂದರ. ಅದರಲ್ಲಿನ ವಾಸ್ತವಕ್ಕೆ ಹತ್ತಿರವಾದ ಕೌಟುಂಬಿಕ ಕಥೆ, ಸಿದ್ಧಾರ್ಥ್ ಹಾಗೂ ಸನ್ನಿಧಿಯ ಪ್ರೇಮ, ಚಂದ್ರಿಕಳ ದುಷ್ಟಬುದ್ಧಿ, ಅವಳ ಕುತಂತ್ರ, ಅದನ್ನು ಅಸಫ‌ಲಗೊಳಿಸುವ ನಾಯಕಿಯ ಚಾತುರ್ಯ, ಅವಳು ಕಷ್ಟಗಳನ್ನೆಲ್ಲಾ ನಗುನಗುತ್ತಾ ಎದುರಿಸುತ್ತಿದ್ದ ಪರಿ, ಅವಳಿಗೆ ಬೆಂಬಲವಾಗಿ ನಿಲ್ಲುವ ಸ್ವಾಮಿಗಳು, ದಿಢೀರನೆ ಕಥೆ ತೆಗೆದುಕೊಳ್ಳುತ್ತಿದ್ದ ತಿರುವುಗಳು… ಅಬ್ಟಾ… ಒಂದೆರಡಲ್ಲ, ಬರೀತಾ ಹೋದರೆ ಇದೇ ಒಂದು ಧಾರಾವಾಹಿ ಆಗಬಹುದೇನೋ? ಅದೆಷ್ಟು ಯುವಕ-ಯುವತಿಯರು ತಮ್ಮನ್ನ ಅದರ ನಾಯಕ- ನಾಯಕಿಗೆ ಹೋಲಿಸಿಕೊಂಡು ಸಂತಸ ಪಟ್ಟಿದ್ದಾರೋ? ಅದೆಷ್ಟು ಜನ ತಮ್ಮ ಮಗ-ಸೊಸೆ ಅಥವಾ ಮಗಳು-ಅಳಿಯರನ್ನು ಅವರಲ್ಲಿ ಕಂಡಿದ್ದಾರೋ?

ಅಯ್ಯೋ, ಮುಗಿದೇ ಹೋಯ್ತು
ಇಂಥ ಒಂದು ಧಾರಾವಾಹಿ ಮುಗಿದೇ ಹೋಯ್ತು ಎನ್ನುವಾಗ, ಅದನ್ನು ನೋಡುತ್ತಿದ್ದ ನನ್ನಂತಹ ಅದೆಷ್ಟು ಮನಸುಗಳು ಬೇಸರ ಪಟ್ಟಿರಬೇಡ. ಎಷ್ಟೊಂದು ಖಾಲಿತನ ಅನುಭವಿಸಿರಬೇಡ, ಅಲ್ವೆ? ನನಗಂತೂ ಏನು ಮಾಡಲೂ ತೋಚುತ್ತಿಲ್ಲ. ಒಂದು ರೀತಿ ಶೂನ್ಯ ಆವರಿಸಿಕೊಂಡು ಬಿಟ್ಟಿದೆ. ಬೆಳಗ್ಗೆಯಿಂದ ಗೃಹ ಕೃತ್ಯದ ಧಾವಂತದಲ್ಲಿರುತ್ತಿದ್ದವಳಿಗೆ ರಾತ್ರಿ ಎಂಟಾದರೆ ಸಾಕು; ಏನೋ ಸಂಭ್ರಮ. ಬೇಗ ಅಡುಗೆ ಕೆಲಸ ಮುಗಿಸಿ ಟಿ.ವಿ ಮುಂದೆ ಪ್ರತಿಷ್ಠಾಪನೆಗೊಳ್ಳುತ್ತಿದ್ದೆ. ಮಕ್ಕಳಿಗೂ ಆ ಸಮಯದಲ್ಲಿ “ಓದಿಕೊಳ್ಳಿ’ ಎಂದು ಗದರುವ ನನ್ನ ಕಾಟದಿಂದ ಮುಕ್ತಿ ದೊರಕುತ್ತಿತ್ತು. ಅದಕ್ಕೀಗ ಮಕ್ಕಳು ಕೇಳುತ್ತಿವೆ “ಆ ಅಗ್ನಿಸಾಕ್ಷಿ ಇಷ್ಟು ಬೇಗ ಯಾಕೆ ಮುಗೀತಮ್ಮಾ?’ ಅಂತ. ನನ್ನ ಪತಿಯೂ ಅಷ್ಟೆ: ಯಾವಾಗ ರೇಗಿಸಿದರೂ, ಆ ಸಮಯದಲ್ಲಿ ಮಾತ್ರ ನನ್ನನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ಸುಮ್ಮನೆ ಟಿ.ವಿ ಮತ್ತು ರಿಮೋಟ್‌ ಅನ್ನು ನನ್ನ ಸುಪರ್ದಿಗೆ ಬಿಟ್ಟು ಬಿಡೋರು. ನೆಂಟರು ಬಂದಾಗಲಂತೂ, ನನ್ನ ತಳಮಳ ಹೇಳತೀರದಾಗಿರುತ್ತಿತ್ತು, ಅವರೇನಾದರೂ ಅಗ್ನಿಸಾಕ್ಷಿಯ ಪ್ರೇಮಿಯಾಗಿದ್ದರೆ ಮಾತ್ರ ನನಗೆ ಇನ್ನಷ್ಟು ಆಪ್ತವಾಗಿ ಬಿಡುತ್ತಿದ್ದರು. ಅಗ್ನಿಸಾಕ್ಷಿ ಬರುವ ಸಮಯದಲ್ಲಿ ಟಿ.ವಿಯೊಂದು ಬಿಟ್ಟು ಮಿಕ್ಕೆಲ್ಲ ಚರಾಚರಗಳೂ ಸ್ತಬ್ಧವಾಗಿಬಿಡುತ್ತಿದ್ದವು. ಅಂಥ ಒಂದು ಪರಿಸ್ಥಿತಿಯಲ್ಲಿ ಬೇರೆಲ್ಲವನ್ನೂ ಮರೆತು ಅದನ್ನು ನೋಡುವ ತಾದ್ಯಾತ್ಮತೆ ಇದೆಯಲ್ಲ…ವಾವ್‌, ಅದೆಂಥ ಒಳ್ಳೆ ಅನುಭವ ಅಂತೀರಾ? ಅದೆಲ್ಲ ಬರೀ ಅನುಭವ ವೇದ್ಯವಷ್ಟೆ.

ತುಂಬಾ ನೋವಾಗ್ತಿದೆ…
ಈಗ ಅದೆಲ್ಲ ಕನಸೇನೋ ಅನ್ನಿಸ್ತಿದೆ. ನಾನಂತೂ ಅದರಲ್ಲಿ ಎಷ್ಟು ಮುಳುಗಿ ಹೋಗಿದ್ದೆನೆಂದರೆ, ನನ್ನ ಮಗನಿಗೆ ಶಾಲೆಯಲ್ಲಿನ ಹಾಡಿನ ಸ್ಪರ್ಧೆಯೊಂದಕ್ಕೆ ಅಗ್ನಿಸಾಕ್ಷಿಯ ಹಾಡಿನ ರಾಗಕ್ಕೇ ಹಾಡೊಂದನ್ನು ಸಂಯೋಜಿಸಿ ಕಲಿಸಿಕೊಟ್ಟಿದ್ದೆ. ಹೀಗೆಲ್ಲ ನಮ್ಮ ಪ್ರತಿದಿನದ ಒಡನಾಡಿಯಾಗಿದ್ದ ಧಾರಾವಾಹಿ ಇದ್ದಕ್ಕಿದ್ದ ಹಾಗೇ ದಿಢೀರ್‌ (?) ಅಂತ ಮುಗಿದು ಹೋಗಿ, ನನ್ನಂಥ ಅದೆಷ್ಟು ಹೆಂಗಳೆಯರ ಮನಸ್ಸನ್ನು ಘಾಸಿಗೊಳಿಸಿದೆಯೋ ಗೊತ್ತಿಲ್ಲ. ಮಹಿಳೆಯರಷ್ಟೇ ಅಲ್ಲದೆ ಅದನ್ನು ನೋಡುತ್ತಿದ್ದ ಪುರುಷರೂ, ಯುವ ಜನತೆಯೂ ಇದ್ದಿರಬಹುದು.

Advertisement

ಅಬ್ಟಾ, ಸದ್ಯ ಮುಗಿಯಿತಲ್ಲ
ನೋಡದವರು ಮಾತ್ರ ನನ್ನ ಪತಿಯಂತೆ ಹರುಷ ಪಟ್ಟಿರಬಹುದು. ಹೆಚ್ಚಿನವರಿಗೆ, ಧಾರಾವಾಹಿ ಮುಗಿದಿರುವುದರಿಂದ ತುಂಬ ಆನಂದ ಮತ್ತು ನಿರಾಳವಾಗಿದೆಯಂತೆ. ಅವರಿಗದೆಷ್ಟು ಖುಷಿಯಾಗಿದೆ ಎಂದು ಅವರ ಮಾತಲ್ಲೇ ಕೇಳ್ಬೇಕು.. ನಮ್ಮನೆಯವರಂತೂ, “ನಿನ್ನ ಆ ಧಾರಾವಾಹಿ ಮುಗೀತಲ್ಲ, ಇನ್ನಾದರೂ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಊಟಕ್ಕೆ ಹಾಕು’ ಅಂತಾರೆ. ಅವರಿಗೆ ವರ್ಷದ ಆರಂಭದಲ್ಲೇ ಶತ್ರುಸಂಹಾರ ಆದಷ್ಟು ಸಂತಸವಾಗಿದೆಯಂತೆ. “ನನ್ನಂಥ ಧಾರಾವಾಹಿ ಪೀಡಿತ ಪುರುಷರು ಅದೆಷ್ಟು ದೇವರಿಗೆ ಯಾವ್ಯಾವ ರೀತಿ ಹರಕೆ ಹೊತ್ತಿದ್ರೋ ಕಾಣೆ, ಅದೀಗ ಫ‌ಲಿಸಿದೆ’ ಅಂತಿರ್ತಾರೆ. ನನಗೆಷ್ಟು ಬೇಸರವಾಗಬೇಡ? ಅಗ್ನಿಸಾಕ್ಷಿಯಿಂದ ನಿಮಗಾದ ನಷ್ಟವೇನು? ಎಂದೇನಾದರೂ ಕೇಳಿದರೆ, “ಅಯ್ಯೋ ಒಂದಾ, ಎರಡಾ?’… ಅಂತ ಇಷ್ಟೂದ್ದ ಲಿಸ್ಟ್ ಕೊಡ್ತಾರೆ.

ಏನೋ ಕೆಲವು ಬಾರಿ ಒಲೆಯ ಮೇಲಿಟ್ಟ ಅಡುಗೆಯೋ ಹಾಲೋ, ಅಗ್ನಿಸಾಕ್ಷಿ ನೋಡುವಾಗ ಅಗ್ನಿಗೆ ಆಹುತಿಯಾಗಿ ಸೀದು ಹೋಗಿದೆಯಪ್ಪ…. ಅದಕ್ಕೆ ನಮ್ಮನೆ ಅಗ್ನಿಯೇ ಸಾಕ್ಷಿಯಂತೆ. ಇದ್ರಿಂದಾಗಿ ನೆಂಟರಿಷ್ಟರ ಅನೇಕ ಕಾರ್ಯಕ್ರಮಗಳನ್ನು ತಪ್ಪಿಸಿದ್ದೇನಂತೆ, ಇವರ ಗೆಳೆಯರನ್ನು ಸಂಸಾರ ಸಮೇತ ಊಟಕ್ಕೆ ಕರೆದಾಗ, ಸರಿಯಾಗಿ ಉಪಚಾರ ಮಾಡಿಲ್ಲವಂತೆ…….ಹೀಗೇ ಪಟ್ಟಿ ಬೆಳೆಯುತ್ತದೆ….ಆದರೆ, “ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ’ ಎನ್ನುವಂತೆ ಇಂಥ ಚಿಕ್ಕಪುಟ್ಟ (?) ಅವಾಂತರಗಳಿಗೆಲ್ಲ ಅಗ್ನಿಸಾ….ಕ್ಷಿ ಮೇಲೇನೇ ತಪ್ಪು ಹೊರಿಸಿದ್ರೆ ಹೇಗಲ್ವಾ? ಅದನ್ನು ನೋಡುತ್ತಿದ್ದಾಗ ನನಗೆ ಸಿಗುತ್ತಿದ್ದ ಆನಂದಕ್ಕೆ ಹೋಲಿಸಿದರೆ ಇವೆಲ್ಲ ಲೆಕ್ಕಕ್ಕೇ ಇಲ್ಲ…..

ಅಗ್ನಿಸಾಕ್ಷಿಯೇನೋ ನಾಯಕ-ನಾಯಕಿಯರು ಫಾರಿನ್‌ಗೆ ಹೋಗಿ, ಮಿಕ್ಕವರೆಲ್ಲ ಅವರವರ ಪಾಡಿಗೆ ಹಾಯಾಗಿ ಇರುವಂತಾಗಿ ಸುಖಾಂತ್ಯಗೊಂಡಿತು. ಆದರೆ, ಅದಕ್ಕೆ ಹೊಂದಿಕೊಂಡಿದ್ದ ನಮ್ಮ ಗತಿ ಏನೂಂತ? ನಮ್ಮ ಬಗ್ಗೆ ಕರುಣೆ ಬರ್ತಿಲ್ವಾ? ಹೇಳಿ ಯಾರಾದ್ರೂ……

-ಜ್ಯೋತಿ ರಾಜೇಶ್‌

Advertisement

Udayavani is now on Telegram. Click here to join our channel and stay updated with the latest news.

Next