ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ಮಗಳು ಮೂರನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ಶಾಲಾ ವಾರ್ಷಿಕೋತ್ಸವಕ್ಕೆ ಅವಳ ಕ್ಲಾಸ್ ಟೀಚರ್, “ಮಕ್ಕಳಿಗೆ ಹಾಡು ನೃತ್ಯ ಕಲಿಸಬೇಕಿದೆ. ನಿಮಗೆ ಯಾವುದಾದರೂ ಗೊತ್ತಿದ್ದರೆ ತಿಳಿಸಿ’ ಎಂದು ನನ್ನ ಸಲಹೆ ಕೇಳಿದರು. ಆಗ ನನಗೆ ತಿಳಿದಿದ್ದ, ಎರಡೇ ಚರಣವಿದ್ದ, ಸೂರ್ಯಕಾಂತಿ ಹೂವಿನ ಸಣ್ಣ ಪದ್ಯ (ಸನ್‌ಫ್ಲವರ್ ರೈಮ್)ಕ್ಕೆ ನಾಲ್ಕೈದು ಹೆಜ್ಜೆ ಹಾಕಿ ತೋರಿಸಿ, ಅಭ್ಯಾಸ ಮಾಡಲು ತಿಳಿಸಿಕೊಟ್ಟೆ. ಆ ಪದ್ಯವನ್ನು ಬೇರೊಂದು ಶಾಲಾ ಕಾರ್ಯಕ್ರಮದಲ್ಲಿ ನೋಡಿದ್ದೆ. ನನ್ನ ಮಗಳು ಆ ನೃತ್ಯದಲ್ಲಿ ಇರುತ್ತಾಳೆಂದು ಹೆಚ್ಚು ಅಕ್ಕರೆ ತೋರಿಸಿದ್ದೆ ಮತ್ತು ಟೀಚರ್ ಕೋರಿಕೆಯ ಮೇರೆಗೆ (ಮೊಬೈಲ…,ಅಂತರ್ಜಾಲವಿರದ, ಕ್ಯಾಸೆಟ್ ಟೇಪ್ ರೆಕಾರ್ಡರ್ ಕಾಲ) ದಿನ ನಿತ್ಯದ ತಾಲೀಮಿಗೆ ಉಪಯೋಗಿಸಲು ನನ್ನ ದನಿಯಲ್ಲಿ ಆ ಪದ್ಯವನ್ನು ಹಾಡಿ ರೆಕಾರ್ಡ್ ಮಾಡಿ ಕೊಟ್ಟಿದ್ದೆ. “ಇದನ್ನೇ ಸ್ಕೂಲ್ ಡೇ ದಿನ ಪ್ಲೇ ಮಾಡಿದರೆ ಸಾಕು’ ಎಂದು ಟೀಚರ್ ಕೂಡಾ ಮೆಚ್ಚುಗೆ ತೋರಿದ್ದರು.
ನಿಗದಿತ ದಿನ ಮಕ್ಕಳೆಲ್ಲ ಮೇಕಪ್‌ನೊಂದಿಗೆ ಸಜ್ಜಾಗಿ, ಅವರ ಅವಕಾಶಕ್ಕಾಗಿ ಕಾಯುತ್ತಿದ್ದರು. ಕೊನೆಗೂ ಅವರ ಸರದಿ ಬಂದೇ ಬಿಟ್ಟಿತು. “ಈಗ ಮಕ್ಕಳಿಂದ ಸನ್ ಫ್ಲವರ್ ಹಾಡಿಗೆ ನೃತ್ಯ’ ಎಂದು ಮೈಕ್‌ನಲ್ಲಿ ಘೋಷಿಲಾಯ್ತು. ಸೂರ್ಯಕಾಂತಿ ವಿನ್ಯಾಸದಲ್ಲಿ ಉಡುಗೆ ತೊಟ್ಟ ಮಕ್ಕಳು ಕುಣಿಯಲೆಂದು ವೇದಿಕೆ ಏರಿದರು.
ಆದರೆ, ಇದೇನು? ಸೌಂಡ್ ಸಿಸ್ಟಮ್‌ನಲ್ಲಿ ನನ್ನ ಹಾಡು ಪ್ಲೇ ಆಗಲೇ ಇಲ್ಲ. ಪಾಪ, ಟೀಚರ್ ಮತ್ತೆ ಮತ್ತೆ ಪ್ರಯತ್ನಿಸಿದರೂ ಫಲವಿಲ್ಲ. ವೀಕ್ಷಕರ ಮಧ್ಯೆ ನನ್ನ ಆತಂಕ ಹೇಳತೀರದು. ವೇದಿಕೆಯಲ್ಲಿ ಪಿಳಿಪಿಳಿ ಕಂಗಳನ್ನು ಬಿಡುತ್ತ ಮಕ್ಕಳು ಪದ್ಯದ ದನಿಗೆ ಕಾಯುತ್ತಿದ್ದರು. ತಕ್ಷಣ ಕಾರ್ಯೋನ್ಮುಖರಾದ ಟೀಚರ್, ವೇದಿಕೆಗೆ ನನ್ನನ್ನೇ ಕರೆದು ಹಾಡಲು ಮೈಕ್ ಕೊಟ್ಟರು. ಚೂರು ಹೆದರಿಕೆಯಾದರೂ, ನಿಟ್ಟುಸಿರೆಳೆದು ಹಾಡಿದೆ, ಮಕ್ಕಳು ಕುಣಿದರು, ಸಭೆಯಲ್ಲಿ ಚಪ್ಪಾಳೆ!
ಸರಿಯಾದ ಸಮಯಕ್ಕೆ ಕೈ ಕೊಟ್ಟ ಕ್ಯಾಸೆಟ್‌ನಿಂದ ಉಂಟಾದ ಆತಂಕ, ಖುದ್ದು ಹಾಡಿ ಮುಗಿಸುವ ಹೊತ್ತಿಗೆ ಸಂಭ್ರಮ ತಂದಿತ್ತು.
ಕೆ.ವಿ. ರಾಜಲಕ್ಷ್ಮಿ