ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ “ವೀಲ್‌ಚೇರ್ ರೋಮಿಯೋ’, ಇದೇ ಮೇ 27ಕ್ಕೆ ತೆರೆಗೆ ಬರುತ್ತಿದೆ.
ಇನ್ನು ಸಿನಿಮಾದ ಹೆಸರೇ ಹೇಳುವಂತೆ, “ವೀಲ್‌ಚೇರ್ ರೋಮಿಯೋ’ ವಿಕಲಚೇತನ ಹುಡುಗ ಮತ್ತು ಅಂಧ ಹುಡುಗಿಯೊಬ್ಬಳ ಸುತ್ತ ನಡೆಯುವ ನವಿರಾದ ಪ್ರೇಮಕಥೆ ಹೊಂದಿರುವ ಸಿನಿಮಾ. ಚಿತ್ರದಲ್ಲಿ ನಾಯಕಿ ಮಯೂರಿ ಅಂಧ ಹುಡುಗಿಯಾಗಿ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಯಕ ರಾಮ್ ಚೇತನ್ ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲನಾಣಿ, ಗಿರೀಶ್ ಶಿವಣ್ಣ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ವೀಲ್‌ಚೇರ್‌ನಲ್ಲಿರುವ ವಿಕಲಚೇತನನೊಬ್ಬನ ಆಸೆ, ಅದನ್ನು ಈಡೇರಿಸಲು ಮುಂದಾಗುವ ತಂದೆ, ನಡುವೆ ಅಂಧ ಯುವತಿಯೊಬ್ಬಳ ಬದುಕು ಎಲ್ಲವನ್ನೂ ಕಾಮಿಡಿ ಹಾಗೂ ಎಮೋಶನ್ ಜೊತೆಗೆ ಸಿನಿಮಾದಲ್ಲಿ ಹೇಳಲಾಗಿದೆ. ಕನ್ನಡದ ಪ್ರೇಕ್ಷಕರಿಗೆ ಇದೊಂದು ಹೊಸಥರದ ಅನುಭವ ಕೊಡುವ ಸಿನಿಮಾ’ ಎನ್ನುವುದು ಚಿತ್ರದ ಕಥಾಹಂದರ ಬಗ್ಗೆ ಚಿತ್ರತಂಡದ ಮಾತು.
ಚಿತ್ರದ 4 ಹಾಡುಗಳಿಗೆ ಬಿ.ಜೆ ಭರತ್ ಸಂಗೀತವಿದೆ “ಅಗಸ್ತ್ಯ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ಟಿ. ವೆಂಕಟಾಚಲಯ್ಯ ನಿರ್ಮಿಸಿರುವ “ವೀಲ್‌ಚೇರ್ ರೋಮಿಯೋ’ ಚಿತ್ರಕ್ಕೆ ಜಿ. ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ದ್ದಾರೆ. ಚಿತ್ರಕ್ಕೆ ಸಂತೋಷ್ ಪಾಂಡಿ ಛಾಯಾ ಗ್ರಹಣ, ಕಿರಣ್ ಸಂಕಲನವಿದೆ.
ಒಟ್ಟಾರೆ ತನ್ನ ಟೈಟಲ್, ಟ್ರೇಲರ್‌ನಿಂದಾಗಿ ಗಮನ ಸೆಳೆದಿರುವ “ವೀಲ್‌ಚೇರ್ ರೋಮಿಯೋ’ ತೆರೆಮೇಲೆ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲಲಿದ್ದಾನೆ ಅನ್ನೋದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.