ಬೆಂಗಳೂರು ಸಹಿತ ದೇಶದ ವಿವಿಧೆಡೆ ಸಾರ್ವ ಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ಕೋಟ್ಯಂತರ ರೂ. ವಂಚಿಸಿದ ಆರು ಮಂದಿಯ ರಾಷ್ಟ್ರೀಯ ಮಟ್ಟದ ಜಾಲವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಆರೋಪಿಗಳು ಬೆಂಗಳೂರು ಸಹಿತ ದೇಶದ ವಿವಿಧೆಡೆ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಬರೋಬ್ಬರಿ 854 ಕೋಟಿ ರೂ. ವಹಿವಾಟು ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ)ಯಲ್ಲಿ ಆರೋಪಿಗಳು ಬಳಸಿದ್ದ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾದ್ಯಂತ ಬರೋಬ್ಬರಿ 5,013 ಕೇಸ್‌ಗಳು ದಾಖಲಾಗಿವೆ.
Advertisement
ವಿದ್ಯಾರಣ್ಯಪುರ, ಯಲಹಂಕ ನಿವಾಸಿಗಳಾದ ಮನೋಜ್ ಅಲಿಯಾಸ್ ಜಾಕ್ (32), ಫಣೀಂದ್ರ (33), ಚಕ್ರಾಧರ್ ಅಲಿಯಾಸ್ ಚಕ್ರಿ (30), ಶ್ರೀನಿವಾಸ್ (35), ಸೋಮಶೇಖರ್ ಅಲಿಯಾಸ್ ಅಂಕಲ್ (40) ಹಾಗೂ ವಸಂತ ಕುಮಾರ್ (32) ಬಂಧಿತರು. ಆರೋಪಿಗಳಿಂದ 13 ಮೊಬೈಲ…, 7 ಲ್ಯಾಪ್‌ಟಾಪ್‌ಗ್ಳು, 1 ಪ್ರಿಂಟರ್, 1 ಸ್ವೆ„ಪಿಂಗ್ ಯಂತ್ರ, 1 ಹಾರ್ಡ್‌ಡಿಸ್ಕ್, ಹಲವು ಬ್ಯಾಂಕ್ ಪಾಸ್‌ಬುಕ್ ಹಾಗೂ ಇತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ 84 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದ್ದು, 5 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೂರುದಾರರ ಸ್ನೇಹಿತೆಯೊಬ್ಬರು “ದಿ ವೈನ್ ಗ್ರೂಪ್’ ಎಂಬ ಆ್ಯಪ್‌ನಲ್ಲಿ ಸಾವಿರಾರು ರೂ. ಹೂಡಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದುಕೊಂಡಿದ್ದರು. ಈ ವಿಚಾರ ತಿಳಿದ ದೂರುದಾರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿದ್ದ ಇನ್‌ಸ್ಟಾಲ್‌ಮೆಂಟ್ ಆಫರ್‌ಗಳನ್ನು ಗಮನಿಸಿದ ಹಣ ಹೂಡಿಕೆ ಆರಂಭಿಸಿದ್ದಾರೆ. ಮೊದಲಿಗೆ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ 1 ಸಾವಿರ ರೂ. ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಕೇವಲ ಒಂದು ಗಂಟೆಯಲ್ಲೇ ಒಂದೂವರೆ ಸಾವಿರ ರೂ. ಲಾಭ ಪಡೆದುಕೊಂಡಿದ್ದಾರೆ. ಹೀಗೆ ಹಂತ-ಹಂತವಾಗಿ ಎರಡು ಖಾಸಗಿ ಬ್ಯಾಂಕ್‌ಗೆ 8.5 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ ಯಾವುದೇ ಲಾಭಾಂಶ ಬಂದಿಲ್ಲ. ಈ ಸಂಬಂಧ ತನಿಖೆ ನಡೆಸಿದಾಗ, ಆರೋಪಿಗಳು ಹಣ ಸ್ವೀಕರಿಸಿರುವ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯು ವಾಗ ಬಹು ವಂಚನೆ ಬೆಳಕಿಗೆ ಬಂದಿದೆ.
ಬ್ಯಾಂಕ್ ಖಾತೆಗಳ ಪೈಕಿ ತಮಿಳುನಾಡಿನಲ್ಲಿ ತೆರೆದ ಒಂದು ಬ್ಯಾಂಕ್ ಖಾತೆಯಿಂದ ಬೆಂಗಳೂರಿನ ಸುಬ್ಬು ಎಂಟರ್ ಪ್ರೈಸಸ್ ಎಂಬ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. ಈ ಖಾತೆಯ ಮಾಲಕರನ್ನು ವಿಚಾರಿಸಿದಾಗ ತನಗೆ ಅರಿವಿಲ್ಲದೆ ಸ್ನೇಹಿತ ಆರೋಪಿ ವಸಂತಕುಮಾರ್ ದಾಖಲೆಗಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದ್ದ. ಅದನ್ನು ಪರಿಶೀಲಿಸಿದಾಗ ವಸಂತಕುಮಾರ್ ಸ್ನೇಹಿತನ ಹೆಸರಿನ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ಖಾತೆ ತೆರೆದು, ಕೃತ್ಯ ಎಸಗಿದ್ದಾನೆ. ಆ ಬಳಿಕ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
Related Articles
ನಕಲಿ ಬ್ಯಾಂಕ್ ಖಾತೆಗಳಿಗೆ ಅಮಾಯಕರ ಹಣ ಪಡೆಯುತ್ತಿದ್ದ ಆರೋಪಿಗಳು, ಅದನ್ನು ಸರಕಾರ ಕಪ್ಪು ಹಣ ಎಂದು ದಂಡ ವಿಧಿಸಬಹುದು ಎಂದು ಭಾವಿಸಿ, ಆನ್‌ಲೈನ್ ಗೇಮ್‌ಗಳ ಹೆಸರಿನಲ್ಲಿ ಖಾತೆ ತೆರೆದು ಬಿಳಿ ಮಾಡಿಕೊಳ್ಳುತ್ತಿದ್ದರು. ಮತ್ತೂಂದೆಡೆ ಆರೋಪಿಗಳು ಒಬ್ಬ ವ್ಯಕ್ತಿಯ ಜತೆ 24 ಗಂಟೆಯಿಂದ 48 ಗಂಟೆ ಅವಧಿಯಲ್ಲೇ ಹಣಕಾಸಿನ ವಹಿವಾಟು ನಡೆಸಿ ವಂಚಿಸಿ ನಾಪತ್ತೆಯಾಗುತ್ತಿದ್ದರು. ಆರೋಪಿಗಳು ಬಳಸುತ್ತಿದ್ದ ಆ್ಯಪ್ ಚೀನ ಮೂಲದ್ದಾಗಿದೆ ಎಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಫೇಸ್‌ಬುಕ್‌ನಲ್ಲಿ ಬ್ಯಾಂಕ್ ಖಾತೆ ಮಾರಾಟವಿಚಾರಣೆಯಲ್ಲಿ ಆರೋಪಿ ಮನೋಜ್ ಕುಮಾರ್ ಫೇಸ್‌ಬುಕ್ ಮೂಲಕ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸನ್ನಿ ಸೇರಿ ಇಬ್ಬರು ಆರೋಪಿಗಳನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ಇತರ ಆರೋಪಿಗಳ ಜತೆ ಸೇರಿಕೊಂಡು ಫೇಸ್‌ಬುಕ್‌ನಲ್ಲಿ ಬ್ಯಾಂಕ್ ಖಾತೆ ಮಾರಾಟಕ್ಕಿಟ್ಟಿರುವ ವ್ಯಕ್ತಿಗಳು ಅಥವಾ ಹಣದ ಅಗತ್ಯವಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಬ್ಯಾಂಕ್ ಖಾತೆಗಳನ್ನು ಖರೀದಿಸಿದ್ದ. ಕೆಲವೊಮ್ಮೆ ಅಮಾಯಕರ ಬ್ಯಾಂಕ್ ಖಾತೆಗಳನ್ನು ಕಳವು ಮಾಡಿದ್ದಾನೆ. ಬಳಿಕ ತಲೆಮರೆಸಿಕೊಂಡಿರುವ ವ್ಯಕ್ತಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಹೀಗೆ ಬೆಂಗಳೂರಿನಲ್ಲಿ 17 ಮಂದಿಯಿಂದ ಬ್ಯಾಂಕ್ ಖಾತೆಗಳನ್ನು ಪಡೆದು ವಂಚಿಸಿದ್ದಾರೆ. ಅವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಾಗಿದ್ದು, ಈ ಪೈಕಿ ನಗರ ಸೈಬರ್ ಪೊಲೀಸ್ ಠಾಣೆಯ 2 ಪ್ರಕರಣಗಳು, ಆಗ್ನೇಯ ವಿಭಾಗದಲ್ಲಿ 3 ಪ್ರಕರಣಗಳು, ಈಶಾನ್ಯ ವಿಭಾಗದಲ್ಲಿ 4 ಪ್ರಕರಣಗಳು ಮತ್ತು ಉತ್ತರ ವಿಭಾಗದಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.