Advertisement

ವಾಟ್ಸಾಪ್‌ ಕತೆ : ಜೀವನ ಪ್ರೀತಿ

08:55 PM Sep 21, 2019 | mahesh |

ನೌಕರಿಯ ಕಾರಣಕ್ಕೆ ಮನೆಯಿಂದ ತುಂಬಾ ದೂರದಲ್ಲಿದ್ದೇನೆ. ಒಂದು ರೂಮ್‌ ಮಾಡಿಕೊಂಡು ವಾಸ. ಹೊಟೇಲ್‌ನಲ್ಲಿ ಊಟ, ರೂಮಿನಲ್ಲಿ ನಿದ್ದೆ. ಹೀಗೆ ಸಾಗಿದ್ದವು ದಿನಗಳು. ಊಟ, ತಿಂಡಿಗೆ ನಿಕ್ಕಿ ಮಾಡಿಕೊಂಡಿದ್ದ ಹೊಟೇಲ್‌ನಲ್ಲಿ ಕೆಲಸಕ್ಕೆ ಬರುವ ಹುಡುಗರ ಬಗ್ಗೆ ನನಗೊಂದು ಕನಿಕರವಿರುತ್ತಿತ್ತು. ಯಾವ ಹುಡುಗರೂ ಮೂರು ತಿಂಗಳಿಗಿಂತ ಹೆಚ್ಚು ಅಲ್ಲಿರುತ್ತಿರಲಿಲ್ಲ, ಬಿಟ್ಟು ಹೋಗುತ್ತಿದ್ದರು.

Advertisement

ದೂರದ ವಿಜಾಪುರದಿಂದ ಒಬ್ಬ ಸುಮಾರು ಮೂವತ್ತು ವರ್ಷ ವಯಸ್ಸಿನವನೊಬ್ಬ ಬಂದಿದ್ದ. ಅವನು ಒಂದು ವರ್ಷವಾದರೂ ಹೊಟೇಲ್‌ ಬಿಟ್ಟು ಹೋಗಿರಲಿಲ್ಲ. ಯಾಕಿರಬಹುದು? ಅವನಿಗೆ ಇಲ್ಲೇನು ತೃಪ್ತಿ ಸಿಕ್ಕಿರಬಹುದು ಅಂತ ಯೋಚಿಸುತ್ತಿದ್ದೆ. ಒಂದಿನ ಅವನನ್ನು ಕೇಳಿಯೇ ಬಿಟ್ಟೆ, “”ಎಲ್ಲ ಚೆನ್ನಾಗಿದೆಯೆನೊ ಇಲ್ಲಿ? ಎಷ್ಟು ಕೊಡ್ತಾರೆ ದುಡ್ಡು?” ಅಂತ ಕೇಳಿದೆ.

“”ಹೂಂ! ಸರ್‌, ಎಲ್ಲಾ ಚೆನ್ನಾಗಿದೆ, ಖುಷಿಯಾಗಿದ್ದೀನಿ. ಮೂರು ಸಾವಿರ ಕೊಡ್ತಾರೆ. ಅಷ್ಟನ್ನೂ ಮನೆಗೆ ಕಳ್ಸತೀನಿ. ಊಟ-ವಸತಿ ಹೊಟೇಲ್‌ನಲ್ಲೇ ಮತ್ತೇನು ಬೇಕು ಸಾರ್‌?” ಅಂದ.

“”ಹೊಟೇಲ್‌ನಲ್ಲಿ ಇದೀನಿ ಅನ್ನುವ ಕೀಳರಿಮೆ, ಎಲ್ಲಾದರೂ ದೊಡ್ಡ ಕೆಲಸ ಹುಡುಕಬೇಕು ಆಸೆ ಇಲ್ವಾ?” ಅಂದೆ. “”ನೋಡಿ ಸರ್‌, ನೀವು ಬೆಳಗ್ಗೆ ಇಲ್ಲಿ ತಿಂಡಿ ತಿಂತೀರಿ, ನಾನು ಅದನ್ನೇ ತಿನ್ನೋದು, ನೀವು ರಾತ್ರಿ ಇಲ್ಲೇ ಊಟ ಮಾಡೋದು, ನಾನು ಕೂಡ ಅದನ್ನೇ ತಿನ್ನೋದು, ನೀವು ರೂಮಿನಲ್ಲಿ ಮಲಗ್ತೀರಿ. ನಾನು ಇಲ್ಲೇ ಮಲಗ್ತೀನಿ. ಇಬ್ಬ ರಿಗೂ ಚೆನ್ನಾಗಿ ನಿದ್ದೆ ಬರ್ತ ದೆ. ನೀವು ಊರಿಗೆ ಮೂವತ್ತು ಸಾವಿರ ಕಳಿಸಬಹುದು, ನಾನು ಮೂರು ಸಾವಿರ ಕಳಿ ಸ್ತೀನಿ. ಅದನ್ನು ಪಡೆದ ನಿಮ್ಮ ಮನೆಯವರಿಗೆ ಅದೆಷ್ಟು ಖುಷಿಯಾಗುತ್ತೋ ಅಷ್ಟೇ ನಮ್ಮ ಮನೆಯವರಿಗೂ ಆಗುತ್ತದೆ. ಊರಿಗೆ ನೀವು ಬಸ್ಸಲ್ಲಿ ಹೋಗ್ತೀರಿ, ನಾನು ಬಸ್ಸಲ್ಲೇ ಹೋಗ್ತೀನಿ. ನೀವು ದೊಡ್ಡ ನೌಕರಿಯವರು, ನಾನು ಸಣ್ಣ ಕೆಲಸಗಾರ. ಊಟ ತಿಂಡಿ ನಿದ್ದೆಯ ವಿಚಾರದಲ್ಲಿ ಎಲ್ಲರ ಬದುಕು ಒಂದೇ ಆದರೆ, ಖುಷಿ ಮಾತ್ರ ಒಂದೇ ಅಲ್ಲ ! ನೀವು ಇನ್ನೂ ದೊಡ್ಡ ನೌಕರಿಯಲ್ಲಿ ಖುಷಿ ಹುಡುಕುತ್ತಿದ್ದೀರಿ. ಆದರೆ, ನನಗೆ ಅದು ಇದರಲ್ಲೇ ಸಿಕ್ಕಿದೆ” ಅಂದು ಯಾರೋ ಗಿರಾಕಿ ಕರೆದರು ಅಂತ ಎದ್ದು ಹೋದ.

ಬದುಕಿನ ಆ ಪಾಠ ನನಗೆ ಯಾವ ಪುಸ್ತಕದಲ್ಲಿಯೂ ಸಿಕ್ಕಿರಲಿಲ್ಲ.

Advertisement

ಸದಾಶಿವ ಸೊರಟೂರು

ಐಸ್‌ಕ್ರೀಮ್‌ ಮಾರುವ ಹುಡುಗ
ಕಾಯ್ದ ಹೆಂಚಿನಂತಾಗಿದ್ದ ನೆಲದ ಮೇಲೆ ಬರಿಗಾಲಿನಲ್ಲಿ ನಡೆದು ಬರುತ್ತಿದ್ದ ಹುಡುಗ. ತಾನು ಮಾರಬೇಕೆಂದುಕೊಂಡು ತಂದಿದ್ದ ಐಸ್‌ಕ್ರೀಮ್‌ಗಳೆಲ್ಲ ಕರಗಿ ಊರಿಗೆ ಹೋಗಲು ಬಸ್‌ ಜಾರ್ಚ್‌ ಕೂಡ ಇಲ್ಲದ ಪರಿಸ್ಥಿತಿ ಅವನದು.

ನಾನು ಅವನಿಗೆ ನೂರು ರೂಪಾಯಿ ಕೊಟ್ಟು ಊರಿಗೆ ಹೋಗಲು ತಿಳಿಸಿದೆ. “”ನನಗೆ ಹಣ ಬೇಡ ಸರ್‌, ನಾನು ಹೇಗಾದರೂ ಮಾಡಿ ಊರಿಗೆ ಹೋಗುತ್ತೇನೆ” ಎಂಬ ಅವನ ನಿರಾಕರಣೆಯ ನಡುವೆಯೂ ನನ್ನ ಒತ್ತಾಯಕ್ಕೆ ಮಣಿದು ತಲೆಯಾಡಿಸಿ ಅಲ್ಲಿಂದ ಹೊರಟು ಹೋದ.

ನಾಲ್ಕೈದು ಗಂಟೆಗಳ ನಂತರ ಅವನು ನನ್ನ ಹುಡುಕಿಕೊಂಡು ಬಂದು ನನ್ನ ಕೈಗೆ ನಾನು ಕೊಟ್ಟ ಹಣ ಮರಳಿ ಕೊಟ್ಟಾಗ ಆಶ್ಚರ್ಯ ಚಕಿತನಾದೆ ನಾನು.

“”ಸರ್‌, ನೀವು ಕೊಟ್ಟ ಹಣದಿಂದ ಮತ್ತೆ ನಾನು ಐಸ್‌ಕ್ರೀಮ್‌ಗಳನ್ನು ಕೊಂಡು ಮಾರಿ ಬಂದ ಹಣದಲ್ಲಿ ನಿಮ್ಮ ಹಣವನ್ನು ಮರಳಿಸುತ್ತಿದ್ದೇನೆ. ನನಗೆ ಊರಿಗೆ ಹೋಗಲು, ನನ್ನ ತಾಯಿಗೆ ಔಷಧಿ ಕೊಳ್ಳಲು ಇವತ್ತಿನ ದುಡಿಮೆಯ ಹಣವಿದೆ. ನಿಮಗೆ ಥ್ಯಾಂಕ್ಸ್‌ ಸರ್‌ ” ಎಂದ.
ಏನು ಮಾಡೋಣ, ಒಳ್ಳೆಯ ಹುಡುಗರು ಐಸ್‌ ಕ್ಯಾಂಡಿ ಮಾರುತ್ತ ಇರುತ್ತಾರೆ !

ಮಹಾದೇವ ಬಸರಕೋಡ

Advertisement

Udayavani is now on Telegram. Click here to join our channel and stay updated with the latest news.

Next