ನವದೆಹಲಿ: ಭಾರತ ಸೇರಿದಂತೆ ವಿಶ್ವದಾದ್ಯಂತ ಇಂದು ವಾಟ್ಸಾಪ್ ಸಕ್ರಿಯ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮವೆಂಬಂತೆ ಹ್ಯಾಕರ್ ಗಳ ದೃಷ್ಟಿ ಕೂಡ ಅದರತ್ತ ತಿರುಗಿದ್ದು, ಖಾಸಗಿ ಮಾಹಿತಿಗಳಿಗೆ ಕನ್ನ ಹಾಕಲು ವ್ಯವಸ್ಥಿತ ಸಂಚು ಹೂಡುತ್ತಿದ್ದಾರೆ.
ಕೆಲದಿನಗಳಿಂದ ವಾಟ್ಸಾಪ್ OTP ಸ್ಕ್ಯಾಮ್ ಎನ್ನುವುದು ಸದ್ದು ಮಾಡುತ್ತಿದ್ದು, ಹ್ಯಾಕರ್ ಗಳು ಓಟಿಪಿಯನ್ನೇ ಬಂಡವಾಳ ಮಾಡಿಕೊಂಡು ಜನರ ಅಕೌಂಟ್ ಗಳಿಗೆ ಲಗ್ಗೆಯಿಡುತ್ತಿದ್ದಾರೆ. ಆ ಮೂಲಕ ಹಲವು ಮಹತ್ವದ ಮಾಹಿತಿಗಳನ್ನು ಪಡೆದು ದುರುಪಯೋಪಯೋಗ ಪಡಿಸಿಕೊಳ್ಳುತ್ತಿರುವ ವ್ಯವಸ್ಥಿತ ಜಾಲ ಪತ್ತೆಯಾಗುತ್ತಿದೆ.
ಏನಿದು OTP ಸ್ಕ್ಯಾಮ್ :
ಹ್ಯಾಕರ್ ಗಳು ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶವೊಂದನ್ನು ರವಾನಿಸಿ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ. ಕೆಲಕಾಲಗಳ ಬಳಿಕ ಮತ್ತೊಂದು ಸಂದೇಶ ಕಳುಹಿಸಿ ‘ಅಚಾನಕ್ಕಾಗಿ ವಾಟ್ಸಾಪ್ ವೇರಿಫಿಕೇಶನ್ ಸಂದರ್ಭದಲ್ಲಿ ನಿಮ್ಮ ನಂಬರ್ ನಮೂದಿಸಿದ್ದರಿಂದ OTP ನಿಮಗೆ ಬಂದಿದೆ. ಅದನ್ನು ಈ ಕೂಡಲೇ ಕಳುಹಿಸಬಹುದೇ ?” ಎಂದು ಭಿನ್ನವಿಸಿಕೊಳ್ಳುತ್ತಾರೆ.
Related Articles
ಈ ವೇಳೆ ಮೈಮರೆತು ನೀವು OTP ಕೋಡ್ ಕಳುಹಿಸಿದ್ದೇ ಆದಲ್ಲಿ ನಿಮ್ಮ ವಾಟ್ಸಾಪ್ ನಲ್ಲಿರುವ ಸಂಪೂರ್ಣ ಮಾಹಿತಿ ಹ್ಯಾಕರ್ ಗಳ ಪಾಲಾಗುತ್ತದೆ. ಮಾತ್ರವಲ್ಲದೆ ನಿಮ್ಮ ಅಕೌಂಟ್ ಕೂಡ ಲಾಕ್ ಆಗುವುದು. ವಾಟ್ಸಾಪ್ ಭದ್ರತಾ ನಿಯಮದ ಪ್ರಕಾರ ‘ಒಂದೇ ನಂಬರ್ ನಿಂದ ಎರಡು ಕಡೆ ವಾಟ್ಸಾಪ್ ಅಪ್ಲಿಕೇಶನ್ ಬಳಸಲು ಸಾಧ್ಯವಾಗುದಿಲ್ಲ’. (ವೆಬ್ ಹೊರತುಪಡಿಸಿ) ಹೀಗಾಗಿ OTP ಕಳುಹಿಸಿದ ತಕ್ಷಣ ನಿಮ್ಮ ಅಕೌಂಟ್ ಕೂಡ ತೆರೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ:ಕೋವಿಡ್ ಹೆಸರಲ್ಲಿ ಹಿಂಸೆ ಸಲ್ಲದು; ಪೊಲೀಸರು ಮತ್ತು ಅಧಿಕಾರಿಗಳಿಗೆ ‘ಯೋಗಿ ಖಡಕ್ ಸೂಚನೆ’
ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?
ನಿಮಗೆ ಇಂತಹ ಯಾವುದಾದರೂ ಸಂದೇಶಗಳು ಬಂದಲ್ಲಿ, ಅದಕ್ಕೆ ಪ್ರತಿಕ್ರಿಯೆ ನೀಡದಿರುವುದು ಸೂಕ್ತ. ಒಟಿಪಿ ಎನ್ನುವಂಥದ್ದು ಅತ್ಯಂತ ಗೌಪ್ಯವಾದ ಮಾಹಿತಿ. ಹೀಗಾಗಿ ನಿಮ್ಮ ಆತ್ಮೀಯ ಗೆಳೆಯರ ಹೆಸರಿನಲ್ಲೇ, ಈ ತೆರನಾದ ಸಂದೇಶ ಬಂದರೂ ಕೂಡಾ ಒಟಿಪಿ ಸಂಖ್ಯೆಯನ್ನು ನೀಡದಿರುವುದು ಈ ಸ್ಕ್ಯಾಮ್ ತಡೆಗಟ್ಟಲು ಸಹಾಯಕವಾಗುತ್ತದೆ. ಆ ಮೂಲಕ ಅತ್ಯಮೂಲ್ಯ ಮಾಹಿತಿಯ ಸೋರಿಕೆಯಾಗದಂತೆ ತಡೆಯಬಹುದು.
ವಾಟ್ಸಾಪ್ ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ?
ಹ್ಯಾಕರ್ ಗಳಿಂದ ನಿಮ್ಮ ವಾಟ್ಸಾಪ್ ಖಾತೆಯನ್ನು ಸುರಕ್ಷಿತವಾಗಿಡಲು ನೀವು ‘To step verification’ ಎಂಬ ಫೀಚರ್ ಬಳಸಬಹುದು. ಸೆಟ್ಟಿಂಗ್ಸ್ ನಲ್ಲಿ ಈ ಆಯ್ಕೆಯಿದ್ದು ಪಿನ್ ನಂಬರ್ ಹಾಗೂ ಇಮೇಲ್ ವಿಳಾಸವನ್ನು ನಮೂದಿಸಬೇಕು. ಆ ಮೂಲಕ ಹ್ಯಾಕರ್ ಗಳು OTP ಪಡೆದರೂ ಲಾಗಿನ್ ಆಗಲು ಅವಕಾಶವಿರದಂತೆ ಮಾಡಬಹುದು.