ನವದೆಹಲಿ: ಭಾರತೀಯ ಬಳಕೆದಾರರಿಗೆ ಗೌಪ್ಯತಾ ನೀತಿಯಲ್ಲಿ (ಪ್ರೈವೇಸಿ ಪಾಲಿಸಿ) ಬದಲಾವಣೆ ಹೇರಲು ಮುಂದಾಗಿರುವ ವಾಟ್ಸ್‌ಆ್ಯಪ್‌ಗೆ ಕೇಂದ್ರ ಸರ್ಕಾರ ಬಿಗ್‌ಶಾಕ್ ನೀಡಿದೆ. ಪಾಲಿಸಿಯಲ್ಲಿನ ಎಲ್ಲ ಹೊಸ ಬದಲಾವಣೆಗಳನ್ನು ಕೂಡಲೇ ವಾಪಸ್ ತೆಗೆದುಕೊಳ್ಳುವಂತೆ ಖಡಕ್ಕಾಗಿ ಸೂಚಿಸಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಈ ಸಂಬಂಧ ವಾಟ್ಸ್ ಆ್ಯಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್‌ಗೆ ಕಟುಶಬ್ದಗಳಲ್ಲಿ ಪತ್ರಬರೆದು, “ಭಾರತಕ್ಕೊಂದು ನೀತಿ ಯುರೋಪ್ ದೇಶಗಳಿಗೊಂದು ನೀತಿ ಏಕೆ?’ ಎಂದು ಖಾರವಾಗಿ ಪ್ರಶ್ನಿಸಿದೆ.
“ವಾಟ್ಸಾéಪ್‌ನ ನೂತನ ನೀತಿಗಳು ಭಾರತೀಯರ ನಾಗರಿಕರ ಆಯ್ಕೆ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಕಾರಣಕ್ಕಾಗಿ ವಿವಾದಿತ ನೀತಿಗಳನ್ನು ಕೈಬಿಡಬೇಕು’ ಎಂದು ಸೂಚಿಸಿದೆ.
“ಯುರೋಪ್ ಒಕ್ಕೂಟಗಳಲ್ಲಿನ ವಾಟ್ಸ್ಯಾಪ್ ಪಾಲಿಸಿ ನೀತಿಗೂ, ಭಾರತದಲ್ಲಿನ ಉದ್ದೇಶಿತ ನೀತಿಗಳಿಗೂ ಸಾಕಷ್ಟು ವ್ಯತ್ಯಾಸ ಗಮನಕ್ಕೆ ಬಂದಿದೆ. ಭಾರತದ ಬಳಕೆದಾರರ ಹಿತಾಸಕ್ತಿಗಳನ್ನು ಗೌರವಿಸದೆ, ವಿವಾದಿತ ನೀತಿಗಳ ಮೂಲಕ ವಾಟ್ಸಾಪ್ ತಾರತಮ್ಯ ಎಸಗಿದೆ’ ಎಂದು ಆರೋಪಿಸಿದೆ.
14 ಪ್ರಶ್ನೆಗಳು!: “ಭಾರತೀಯ ನಾಗರಿಕರ ಹಿತಾಸಕ್ತಿ ರಕ್ಷಿಸುವುದು ಸರ್ಕಾರದ ಸಾರ್ವಭೌಮ ಹಕ್ಕು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಇದನ್ನು ವಾಟ್ಸಾಪ್ ಗಂಭೀರವಾಗಿ ಪರಿಗಣಿಸಬೇಕು’ ಎಂದೂ ಎಚ್ಚರಿಸಿದೆ. ಅಲ್ಲದೆ, ಡೇಟಾ ಸುರಕ್ಷತೆ ಕುರಿತು ಎದ್ದಿರುವ 14 ಪ್ರಶ್ನೆಗಳಿಗೆ ಶೀಘ್ರವೇ ಉತ್ತರಿಸುವಂತೆಯೂ ಸರ್ಕಾರ ಸೂಚಿಸಿದೆ.