Advertisement

ವಾಟ್ಸ್‌ಆ್ಯಪ್‌ ವಿಚಾರಕ್ಕೆ ಸಹಪಾಠಿಯನ್ನೇ ಕೊಂದ!

12:30 AM Jan 31, 2019 | |

ಬೆಂಗಳೂರು: ತನ್ನ ಸಹ ವಿದ್ಯಾರ್ಥಿನಿಗೆ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರದಲ್ಲಿ ಶುರುವಾದ ವಿದ್ಯಾರ್ಥಿಗಳಿಬ್ಬರ ನಡುವಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ.

Advertisement

ಈ ಬಗ್ಗೆ ಹೊಡೆದಾಡಿಕೊಂಡಿರುವುದು ಬಾಗಲಗುಂಟೆಯ ಸೌಂದರ್ಯ ಪಿಯು ಕಾಲೇಜಿನ ಇಬ್ಬರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು.ಬುಧವಾರ ಬೆಳಗ್ಗೆ ಕಾಲೇಜಿನ ಶೌಚಾಲಯದಲ್ಲೇ ಸಹಪಾಠಿ, ಬಾಗಲಗುಂಟೆಯ ಮಂಜುನಾಥನಗರ ನಿವಾಸಿ ಎಸ್‌.ಡಿ. ದಯಾಸಾಗರ್‌ (18) ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ವಿದ್ಯಾರ್ಥಿ ಪಿ.ರಕ್ಷಿತ್‌ (19)ಈಗ ಜೈಲು ಸೇರಿದ್ದಾನೆ. ಕೃತ್ಯಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ಮತ್ತೂಬ್ಬ ಅಪ್ರಾಪ್ತ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಯಾಸಾಗರ್‌ ತಂದೆ ಸೌಂದರ್ಯ ಕಾಲೇಜಿನ ವಾಹನ ಚಾಲಕರಾಗಿದ್ದು, ತಾಯಿ ಮೇರಿ ಮನೆಗೆಲಸ ಮಾಡುತ್ತಿದ್ದಾರೆ. ರಕ್ಷಿತ್‌ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದರು.

ಏನಿದು ಘಟನೆ?: ದಯಾಸಾಗರ್‌ ಹಾಗೂ ಆರೋಪಿ ರಕ್ಷಿತ್‌ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರತ್ಯೇಕ ವಿಭಾಗಗಳಲ್ಲಿ ಓದುತ್ತಿದ್ದರು. ಈ ಪೈಕಿ ರಕ್ಷಿತ್‌ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದೇ ಯುವತಿಗೆ ದಯಾಸಾಗರ್‌ ಪ್ರತಿನಿತ್ಯ ಸಂದೇಶ ಕಳುಹಿ ಸುತ್ತಿದ್ದ. ಈ ವಿಚಾರ ತಿಳಿದ ರಕ್ಷಿತ್‌ ಕೆಲ ತಿಂಗಳ ಹಿಂದಷ್ಟೇ ದಯಾಸಾಗರ್‌ಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ದಯಾಸಾಗರ್‌ ಸಂದೇಶ ಕಳುಹಿಸುವುದನ್ನು ನಿಲ್ಲಿಸಿ ರಲಿಲ್ಲ. ಇದರಿಂದಾಗಿ ಮೂರು ದಿನಗಳ ಹಿಂದಷ್ಟೇ ದಯಾಸಾಗರ್‌ ಮತ್ತು ರಕ್ಷಿತ್‌ ನಡುವೆ ಮಾರಾಮಾರಿ ನಡೆದಿತ್ತು. ಅಷ್ಟೇ ಅಲ್ಲದೆ, ಮಂಗಳವಾರ ಸಂಜೆ ಇಬ್ಬರು ವಾಟ್ಸ್‌ಆ್ಯಪ್‌ನಲ್ಲೇ ತಮ್ಮ ಸಿಟ್ಟನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ.

ಬ್ಯಾಗ್‌ನಲ್ಲಿತ್ತು ಚಾಕು: ದ್ವಿತೀಯ ಪಿಯು ವಿಜ್ಞಾನ ವಿಭಾಗದ ಲ್ಯಾಬ್‌ ಪರೀಕ್ಷೆ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕರು ಬೆಳಗ್ಗೆ 8 ಗಂಟೆಗೆ ಸಭೆ ನಡೆಸುತ್ತಿದ್ದರು. ಈ ವೇಳೆ ದಯಾಸಾಗರ್‌ ಮತ್ತು ರಕ್ಷಿತ್‌ ನಡುವೆ ಜಗಳವಾಗಿದ್ದು, ಸಹಪಾಠಿಗಳು ಸಮಾಧಾನ ಮಾಡಿ ಇಬ್ಬರನ್ನು ಕಳುಹಿಸಿದ್ದರು.

ಇದರಿಂದ ಕೋಪಗೊಂಡ ರಕ್ಷಿತ್‌, ತನ್ನ ಸ್ನೇಹಿತನೊಬ್ಬನ ಮೂಲಕ ನಾಲ್ಕನೇ ಮಹಡಿಯಲ್ಲಿರುವ ಶೌಚಾಲಯಕ್ಕೆ ದಯಾಸಾಗರ್‌ನನ್ನು ಕರೆಸಿಕೊಂಡಿದ್ದಾನೆ. ಬಳಿಕ ಇಲ್ಲಿಯೂ ಇಬ್ಬರ ನಡುವೆ ಹೊಡೆದಾಟವಾಗಿದ್ದು, ಈ ಸಂದರ್ಭದಲ್ಲಿ ರಕ್ಷಿತ್‌ ತನ್ನ ಬ್ಯಾಗ್‌ನಲ್ಲಿದ್ದ ಚಾಕುವಿನಿಂದ ದಯಾಸಾಗರ್‌ನ ಕುತ್ತಿಗೆಗೆ ಇರಿದಿದ್ದಾನೆ. ಜೋರಾಗಿ ಕೂಗಿದ ಶಬ್ದ ಕೇಳಿದ ಸಹಪಾಠಿಗಳು ಹಾಗೂ ಶಾಲಾ ಸಿಬ್ಬಂದಿ ಶೌಚಾಲಯದ ಬಳಿ ಬಂದಾಗ ದಯಾಸಾಗರ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

ಕರಗಿದ ಐಎಎಸ್‌ ಕನಸು: ದಯಾಸಾಗರ್‌, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸೋಮಪುರ ಮೂಲದ ದೇವರಾಜ್‌ ಮತ್ತು ಮೇರಿ ದಂಪತಿಯ ಪುತ್ರ. ದೇವರಾಜ್‌ ಕಳೆದ 12 ವರ್ಷಗಳಿಂದ ಸೌಂದರ್ಯ ಕಾಲೇಜಿನಲ್ಲಿ ವಾಹನ ಚಾಲಕರಾಗಿದ್ದಾರೆ. ತಾಯಿ ಮೇರಿ ಮನೆಗೆಲಸ ಮಾಡುತ್ತಿದ್ದಾರೆ. ಕಷ್ಟದ ಬದುಕಿನಲ್ಲಿಯೂ ಪುತ್ರನಿಗೆ ಉತ್ತಮ ಶಿಕ್ಷಣ ಕೊಡಿಸಬೇಕು, ಭವಿಷ್ಯದಲ್ಲಿ ಆತನ ಕನಸಿನಂತೆ ಐಎಎಸ್‌ ಅಧಿಕಾರಿ ಮಾಡಿಸಬೇಕು ಎಂದು ಪೋಷಕರು ಆಸೆ ಇಟ್ಟುಕೊಂಡಿದ್ದರು. ಇದೀಗ ಪುತ್ರನನ್ನು ಕಳೆದುಕೊಂಡ ಪೋಷಕರ ಕನಸು ಕರಗಿದೆ.

ಮನೆಯಿಂದ ತಂದಿದ್ದ ಚಾಕು
ಮಂಗಳವಾರ ಸಂಜೆ ಇಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಪರಸ್ಪರ ಕಿತ್ತಾಡಿಕೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ರಕ್ಷಿತ್‌ ಬುಧವಾರ ಬೆಳಗ್ಗೆ ಕಾಲೇಜಿಗೆ ಹೊರಡುವಾಗ ಮನೆಯಲ್ಲಿದ್ದ ಚಾಕುವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಬಂದಿದ್ದ. ಇದೇ ಚಾಕುವಿನಿಂದ ದಯಾಸಾಗರ್‌ನ ಕುತ್ತಿಗೆ ಇರಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.

ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಅಪರಾಧ ಮಾಡುವ ಯಾವುದೇ ಆಲೋಚನೆಗಳ ಬಗ್ಗೆ ಪರಿಕಕ್ವತೆ ಇರುವುದಿಲ್ಲ. ಆದರೆ, ಕೆಲ ಭಾವನಾತ್ಮಕ ಸಂಬಂಧಗಳಿಗೆ ತಕ್ಷಣ ಸ್ಪ‌ಂದಿಸುವುದರಿಂದ ಇಂತಹ ಘಟನೆ ನಡೆಯುತ್ತಿವೆ. ಇಷ್ಟಪಟ್ಟ ವಸ್ತು ನನಗೇ ಸಿಗಬೇಕು ಎಂಬ
ಹಂಬಲ ಕೆಲವೊಮ್ಮೆ ಅಪರಾಧ ಕೃತ್ಯಗಳನ್ನು ಮಾಡಿಸುವ ಸಾಧ್ಯತೆಯಿದೆ.
– ಡಾ ಹರೀಶ ದೇಲಂತಬೆಟ್ಟು, ಮನೋವೈದ್ಯ

ಗಲಾಟೆ ಬಗ್ಗೆ ತಿಳಿದು ಶೌಚಾಲಯದ ಬಳಿ ಹೋದಾಗ ದಯಾಸಾಗರ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ಹತ್ತಿರದ
ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ. ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂಬುದು ತಿಳಿದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
– ಸುರೇಶ್‌, ಸೌಂದರ್ಯ ಕಾಲೇಜು
ಪ್ರಾಂಶುಪಾಲ

ಬುಧವಾರ ಬೆಳಗ್ಗೆ 9 ಗಂಟೆಗೆ ಘಟನೆ ನಡೆದಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಪ್ರೀತಿಯ ವಿಚಾರಕ್ಕೆ ಕೃತ್ಯ ನಡೆದಿದೆ ಎಂಬುದು
ತಿಳಿದು ಬಂದಿದೆ. ಕೊಲೆಯಾದ ದಯಾಸಾಗರ್‌ ತಂದೆ ದೇವರಾಜ್‌ ದೂರಿನ ಅನ್ವಯ ಆರೋಪಿ ರಕ್ಷಿತ್‌ನನ್ನು ಬಂಧಿಸಿದ್ದು, ಆತನ ಅಪ್ರಾಪ್ತ ಸ್ನೇಹಿತನನ್ನು ವಶಕ್ಕೆ ಪಡೆಯಾಗಿದೆ.
– ಚೇತನ್‌ ಸಿಂಗ್‌ ರಾಥೋಡ್‌,
ಉತ್ತರ ವಲಯ ಡಿಸಿಪಿ

ನನ್ನ ಮಗ ಯಾರ ವಿಚಾರಕ್ಕೆ ಹೋದವನಲ್ಲ. ಹುಡುಗಿಯ ವಿಚಾರಕ್ಕೂ ಹೋಗುವುದಿಲ್ಲ. ಪಾತ್ರೆ ತೊಳೆದ ಪುತ್ರನನ್ನು ಸಾಕುತ್ತಿದ್ದೇನೆ. ಆತನನ್ನು ಐಎಎಸ್‌ ಅಧಿಕಾರಿ ಮಾಡಬೇಕೆಂದು ಕನಸು ಕಂಡಿದ್ದೆವು. ಈಗ ಎಲ್ಲವೂ ನುಚ್ಚು ನೂರಾಯಿತು. ಕಾಲೇಜಿನಲ್ಲೇ ಕೊಲೆ ಆಗುತ್ತದೆ ಎಂದರೆ ಕಾಲೇಜಿನ ಆಡಳಿತ ಮಂಡಳಿ ಏನು ಮಾಡುತ್ತಿದೆ?
– ಮೇರಿ, ಮೃತ ದಯಾಸಾಗರ್‌ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next