Advertisement

“ವಾತಾವರಣ’ದಿಂದ ದೂರ

07:00 PM Aug 26, 2019 | mahesh |

ವಾಟ್ಸಾಪ್‌ಗ್ರೂಪ್‌- ವಾತಾವರಣ
ಅಡ್ಮಿನ್‌- ಭಾರತೀ ಮಧುಸೂದನ, ಕುಮಾರ್‌, ಸುನೀಲ್‌ಶಾಸ್ತ್ರಿ, ಕೌಶಿಕ್‌

Advertisement

ಮಳೆ ಬರಲಿ, ಬಿಸಿಲು ಹೆಚ್ಚಾಗಲಿ, ಇದರ ಜೊತೆಗೆ ಮಂಜು ಸುರಿದರಂತೂ ನನ್ನ ದೊಡ್ಡಮ್ಮನ ಮಗ ಮಧುಸೂಧನನಿಗೆ ಒಳ್ಳೆಯ ಮೂಡ್‌. “ನಡಿರೋ, ಸಕಲೇಶಪುರಕ್ಕೆ ಹೋಗೋಣ’ ಅಂತ ಆಂತರ್ಯದಲ್ಲಿದ್ದ ಅಗಣಿತ ಆಸೆಯನ್ನು ಇನ್ನೊಬ್ಬ ದೊಡ್ಡಮ್ಮನ ಮಗ ಕುಮಾರನಿಗೂ, ಚಿಕ್ಕಮ್ಮನ ಮಗ ಕೌಶಿಕನಿಗೂ ಹಬ್ಬಿಸುತ್ತಿದ್ದ. ನಂತರ ಪದೇ ಪದೆ ಅದಕ್ಕೆ ಆಸೆಯ ಗೊಬ್ಬರ ಹಾಕುತಲಿದ್ದ. ಇಂಥ ಪ್ರಯತ್ನಗಳ ಫ‌ಲವಾಗಿ, ಗೋವಾ, ಕಾರವಾರ, ಕುಕ್ಕೆ ಪ್ರಯಾಣಗಳೆಲ್ಲ ಫ‌ಲಿಸಿತು.

ಈ ರೀತಿ ಪ್ರವಾಸಕ್ಕೆ ಅನುವಾಗಲೆಂದೇ “ವಾತಾವರಣ’ ಅನ್ನುವ ವಾಟ್ಸಾಪ್‌ ಗುಂಪು ಶುರುಮಾಡಿದ. ಇದಕ್ಕೆ ಮಧುಸೂದ‌ನನೇ ಅಡ್ಮಿನ್‌. ವೆಂಕ, ನಾಣಿ, ಸೀನನಂತೆ ನಾವು ನಾಲ್ವರೇ ಇದ್ದದ್ದು.

ಇವನ ಬುದ್ಧಿವಂತಿಕೆ ಎಂದರೆ, ರಜಾದಿನಗಳನ್ನು ಪಟ್ಟಿ ಮಾಡಿ, ಆಯಾ ಕಾಲಘಟ್ಟದ ಹವಾಮಾನದ ಸ್ಥಿತಿಗತಿಗಳನ್ನು ಆ್ಯಪಲ್‌ ಮೊಬೈಲ್‌ನಲ್ಲಿ ಪರಿಶೀಲಿಸಿ, “ನೋಡ್ರೋ, ಇಂತಿಂಥ ಸಂದರ್ಭದಲ್ಲಿ ಮಳೆ ಇಲ್ಲ. ಇಲ್ಲಿಗೆಲ್ಲಾ ಹೋಗಬಹುದು. ವಾತಾವರಣ ಚೆನ್ನಾಗಿರುತ್ತೆ’ ಅಂತ ಪಟ್ಟಿ ಮಾಡಿ ಕಳುಹಿಸುತ್ತಿದ್ದ. ಎರಡು ತಿಂಗಳ ಹಿಂದೆ ಮತ್ತೆ ಮೂಡಿಗೆರೆಗೆ ಹೋಗುವ ಹುಚ್ಚು ಏರಿ,ಅದನ್ನು ಕುಮಾರನಿಗೆ ರವಾನಿಸಿದ, ತಿಂಗಳ ಮೊದಲೇ ಶುಕ್ರವಾರ ರಜೆ ಹಾಕಿ, ಅದಕ್ಕೆ ಶನಿವಾರ ಭಾನುವಾರವನ್ನು ಜೋಡಿಸಿ, ವರಮಹಾಲಕ್ಷ್ಮೀ ಹಬ್ಬದ ರಜವನ್ನೂ ಸೇರಿಸಿ ಹೊರಟು ಬಿಡೋಣ ಅಂತ ತೀರ್ಮಾನಿಸಿದ್ದ.

ಈ ಬಗ್ಗೆ ಆಗಾಗ “ಎಲ್ರೂ ರೆಡಿನೇನ್ರಪ್ಪಾ’ ಅಂತ ಗ್ರೂಪ್‌ನಲ್ಲಿ ಎಚ್ಚರಿಸುತ್ತಿದ್ದ. ಅವನು ಲೆಕ್ಕ ಹಾಕಿದ್ದ ಶನಿವಾರವೇ ನನಗೆ ಆಫೀಸಲ್ಲಿ ಮೀಟಿಂಗ್‌ ಬಿತ್ತು. ಹೀಗಾಗಿ, ನಾನು ಅನುಮಾನ ಎಂದೆ. ಗ್ರೂಪಲ್ಲಿದ್ದ ಅಷ್ಟೂ ಜನ ನನ್ನ ಮೇಲೆ ಮುಗಿ ಬಿದ್ದರು. ಅದೃಷ್ಟ ಎನ್ನುವಂತೆ, ಅಷ್ಟರಲ್ಲಿ ಉತ್ತರ ಕರ್ನಾಟಕದಲ್ಲಿ ನೆರೆ ಶುರುವಾಯ್ತು. ಇದನ್ನು ಲೆಕ್ಕಿಸದೆ ಮಧು, “ಈ ಸಲ ಹೋಗಲೇ ಬೇಕ್‌. ಏನಾದ್ರು ಆಗ್ಲಿ ‘ ಅಂತೆಲ್ಲ ಕ್ರಾಂತಿ ಕಾರಿ ಮೆಸೇಜುಗಳನ್ನು ಹಾಕಿದ. ಇದಕ್ಕೆ ಇನ್ನಿಬ್ಬರು ಕೂಡ ಪೂರಕವಾಗಿದ್ದರು. ಮಳೆ ಮೂಡಿಗೆರೆಯನ್ನು ಆವರಿಸಿ, ಗಂಡಾಗುಂಡಿ ಮಾಡಿತು. ಆದರೂ ಇವನ ಬಯಕೆ ಇಳಿಯಲಿಲ್ಲ.. ನೋಡ್ರೋ, ಮಳೆ ಪಾಡಿಗೆ ಮಳೆ ಬರ್ಲಿ.

Advertisement

ನಾವು ಸಕಲೇಶಪುರ ಬಸ್ಟಾಂಡ್‌ನ‌ಲ್ಲಾದರೂ ನಿಂತು ವಾತಾವರಣನ ಸವೀಬೇಕು’ ಅಂದ. ಎಲ್ರೂ “ಹೌದೌದು’ ಗೋಣು ಹಾಕಿದರು. ಕೊನೆಗೆ, ಗುರುವಾರ ಬಂತು. ಸಕಲೇಶಪುರಕ್ಕೆ ಹೋಗುವ ಎಲ್ಲಾ ಹಾದಿಯೂ ಬಂದ್‌ ಆಗಿತ್ತು. ಮೂಡಿಗೆರೆಗ ಕಾಲಿಟ್ಟರೆ ಕೊಚ್ಚಿಹೋಗುವ ಪರಿಸ್ಥಿತಿ. ಮಧುಗೆ ನಿರಾಸೆ. ಮನೆಯಲ್ಲಿ, “ಎಲ್ಲ ಕಡೆ ಮಳೆ ಬೀಳ್ತಿದೆ, ಸುಮ್ಮನೆ ಮನೇಲಿ ಬಿದ್ದಿರಿ’ ಅನ್ನೋ ಒತ್ತಡ ಜಾಸ್ತಿಯಾಯ್ತು. ಬೇಸರದ ಪರಾಕಾಷ್ಠೆಗೆ ತಲುಪಿದ ಮಧು,” ಥೂ ಇಷ್ಟೇ ನಮ್ಮ ಜನ್ಮ ‘ ಅಂತ ಹೇಳಿ ಗ್ರೂಪ್‌ನಿಂದ ಎಕ್ಸಿಟ್‌ ಆದ. ಉಳಿದವರೂ ಎಕ್ಸಿಟ್‌ ಆದರು. ಕೊನೆಗೆ ನಾನು ಕೂಡ ಎಕ್ಸಿಟ್‌ ಆಗೋದೆ.

ಸುನೀಲ್‌ಶಾಸ್ತ್ರಿ, ಸೋಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next