ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುವ ನಮಗೆ ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸಿ ಯೋಚನೆ ಮಾಡುವಷ್ಟರಲ್ಲಿ, ಜೀವನ ಮುಗಿದೇ ಹೋಗಿರುತ್ತದೆ. ಅಷ್ಟೊಂದು ಮೆಸೇಜ್‌ಗಳು. ಅದರಲ್ಲೂ ನಾನು ವ್ಯಾಟ್ಸಾಪ್ ಓಪನ್ ಮಾಡಿದ ಮೇಲೆ ಬೇರೆಯವರು ಹಾಕುವ ಸ್ಟೇಟಸ್‌ಗಳನ್ನು ನೋಡುತ್ತೇನೆಯೇ ಹೊರತು ನಾನು ಯಾವುದೇ ಮೆಸೇಜ್ ಹಾಕುವ ಗೋಜಿಗೆ ಹೋಗುವುದಿಲ್ಲ. ಅದು ನನಗೂ ಇಷ್ಟವಿಲ್ಲ.
ಇದೇ ನನಗೆ ಶಾಪ ಆಗುತ್ತದೆ ಅಂತ ತಿಳಿದದ್ದು ಈ ಘಟನೆ ನಡೆದ ಮೇಲೆ. ನಾನು ವ್ಯಾಟ್ಸಾಪ್ ನಲ್ಲಿ ಸಂದೇಶ ಕಳುಹಿಸುವುದೇ ಅಪರೂಪ, ಅದರಲ್ಲೂ ಗ್ರೂಪ್ ನಲ್ಲಿ ಬರುವ ಸಂದೇಶವನ್ನು ನೋಡಿಯೂ ನೋಡದಂತೆ ಕ್ಲಿಯರ್ ಚಾಟ್ ಮಾಡುತ್ತೇನೆ. ಹಾಗಾಗಿ, ನನ್ನ ವ್ಯಾಟ್ಸಾಪ್‌ನಲ್ಲಿ ಇರುವ ಗ್ರೂಪ್‌ಗ್ಳ ಹೆಸರೂ ನನಗೆ ಗೊತ್ತಿಲ್ಲ,
ಏಕೆಂದರೆ, ಇತ್ತೀಚೆಗೆ ದಿನಕ್ಕೊಂದು ಗ್ರೂಪ್ ಹುಟ್ಟು ಕೊಳ್ಳುತ್ತಿವೆ. ನಾನು ರಂಗಭೂಮಿ ಕಲಾವಿದೆಯಾದ್ದರಿಂದಲೂ, ನಟನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಹಲವು ಆಡಿಷನ್ ಗಳನ್ನು ಕೊಡುತ್ತಿರುವುದರಿಂದಲೂ, ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೋ ಒಂದು ಗ್ರೂಪ್ ಹುಟ್ಟಿಕೊಂಡಿತು. ಸರಿಯಾಗಿ ಗಮನಿಸಿ ನೋಡಿದ ಮೇಲೆ, ಗ್ರೂಪ್ ನಲ್ಲಿ ಅದರ ಉದ್ದೇಶದ ಬಗ್ಗೆ ಗ್ರೂಪ್ ಅಡ್ಮಿನ್ ತಿಳಿಸಿದರು. ಕೇಳಿ ಸಂತೋಷವಾಯಿತು. ಮೆಸೇಜ್ ಬಂದಾಗೆಲ್ಲ ಗ್ರೂಪ್‌ನ ಸದಸ್ಯರು ಸ್ಪಂದಿಸುತ್ತಿದ್ದರು. ಆ ಸ್ಟೋರಿ ಬಹಳ ಚೆನ್ನಾಗಿದೆ, ಆ ವಿಷಯದ ಪ್ರಸ್ತಾಪ ಚೆನ್ನಾಗಿದೆ. ಇದು ನನ್ನ ಅಭಿಪ್ರಾಯ ಅಂತೆಲ್ಲ ಹಾಕುತ್ತಿದ್ದರು. ನನ್ನ ಜಿಜ್ಞಾಸೆ ಏನೆಂದರೆ, ಅವರು ಕೊಡುತ್ತಿದ್ದರಲ್ಲ; ಅದೇ ನನ್ನ ಉತ್ತರವೂ ಆಗಿತ್ತು. ಹೀಗಾಗಿ, ಮತ್ತೆ ನಾನೇಕೆ ಅದೇ ಉತ್ತರವನ್ನು ಹಾಕಬೇಕು ಅಂತ ನಾನು ಸ್ಪಂದಿಸಿಲಿಲ್ಲ. ಸುಮ್ಮನಾಗಿದ್ದೆ.
ಆದರೆ, ಗ್ರೂಪಿನಲ್ಲಿ ನಡೆಯುತ್ತಿದ್ದ ಚರ್ಚೆ ಬಹಳ ಚೆನ್ನಾಗಿತ್ತು. ನನ್ನ ಪಾಲಿಗೆ ಅಮೂಲ್ಯವೂ ಆಗಿತ್ತು. ಹೀಗಾಗಿ, ಖುಷಿ ಪಟ್ಟೆ. ಹಾಗಂತ, ಈ ಖುಷಿ ಬಹಳ ದಿನಗಳ ಕಾಲ ಇರಲಿಲ್ಲ. ಗ್ರೂಪಿಗೆ ಸೇರಿಸಿದ ಮೂರೇ ದಿನಗಳಲ್ಲಿ ನನ್ನನ್ನು ತೆಗೆದು ಹಾಕಿದರು. ಕಾರಣ ತಿಳಿಯಲಿಲ್ಲ. ನಾನು ಹಳೇ ಮೆಸೇಜ್‌ಗಳನ್ನು ನೋಡಿದೆ. ಎಲ್ಲಿಯೂ ನನ್ನ ಸಂದೇಶ ಇರಲಿಲ್ಲ. ಏಕೆಂದರೆ, ನಾನು ಅಭಿಪ್ರಾಯವನ್ನೇ ವ್ಯಕ್ತಪಡಿಸಿರಲಿಲ್ಲ. ಸುಮ್ಮನೆ ಸಂದೇಶವನ್ನು ಹಾಕಿ ಯಡವಟ್ಟು ಮಾಡಿಕೊಳ್ಳುವವರ ಮಧ್ಯೆ, ಸಂದೇಶ ಮಾಡುವುದಕ್ಕೇ ಹೆದರಿ ಕೂತಿದ್ದರ ಫಲ ಇದು ಎಂದು ತಿಳಿದದ್ದು ಆಮೇಲೆ.
ಈ ಗ್ರೂಪ್‌ನಿಂದ ಏನಾದರೂ ತಿಳಿದು ಕೊಳ್ಳಬಹುದಲ್ಲಾ ಅಂದು ಕೊಳ್ಳುವ ಹೊತ್ತಿಗೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಯಿತು. ಈಗ ವ್ಯಾಟ್ಸಾಪ್ ಗ್ರೂಪ್‌ಗ್ಳ ಮೇಲೆ ಅದೇನೋ ದ್ವೇಷ ಆರಂಭವಾಗಿದೆ. ಅದರ ಉಸಾಬರಿಯೋ ಬೇಡ ಎಂದು ದೂರ ಸರಿದಿದ್ದೇನೆ.
ಭಾಗ್ಯಶ್ರೀ ಎಸ್. ಶಿವಮೊಗ್ಗ