ಹುಬ್ಬಳ್ಳಿ: “ಚೆಲುವರಾಯಸ್ವಾಮಿ ಅವರು ಸುಮಲತಾ ಮನೆಯಲ್ಲಿ ಊಟ ಮಾಡಿದ್ದರಲ್ಲಿ ಏನು ತಪ್ಪಿದೆ? ಪರಿಚಿತರ, ಬೇಕಾದವರ ಮನೆಯಲ್ಲಿ ಊಟ ಮಾಡಿದರೆ, ಮಾತನಾಡಿಸಿದರೆ ಅದು ಪಕ್ಷದ ಅಶಿಸ್ತು ಆಗುತ್ತದೆ ಏನ್ರಿ..’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಯಾರು ಯಾರ ಜೊತೆ ಮಾತನಾಡಬಾರದು, ಊಟಕ್ಕೆ ಕುಳಿತುಕೊಳ್ಳಬಾರದು ಎಂದರೆ ಹೇಗೆ? ಈ ವಿಷಯವಾಗಿ ಚೆಲುವರಾಯಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿಗೆ ಯಾರೂ ಪತ್ರ ಬರೆದಿಲ್ಲ’ ಎಂದರು.
ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷವೇ ಗೆಲ್ಲುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಮೈತ್ರಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಚಿವರಾದ ಆರ್.ವಿ. ದೇಶಪಾಂಡೆ,
ಸತೀಶ ಜಾರಕಿಹೊಳಿ, ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರೆಲ್ಲ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ. ನಾನು ಸಹ ಮೇ 14ರಿಂದ 17ರ ವರೆಗೆ ನಾಲ್ಕು ದಿನ ಪ್ರಚಾರ ಮಾಡುತ್ತೇನೆ ಎಂದರು.
ದಿ| ಶಿವಳ್ಳಿ ಪತ್ನಿ ಐದು ಕೋಟಿ ರೂ. ಕೊಟ್ಟು ಪಕ್ಷದ ಟಿಕೆಟ್ ಪಡೆದಿದ್ದಾರೆ ಎಂದು ಆರೋಪ ಮಾಡಿರುವವರ ಮುಖಕ್ಕೆ ಉಗಿಯಬೇಕು. ಪಕ್ಷವೇ ಅವರ ಚುನಾವಣೆ ನಡೆಸುವಂತಹ ಸ್ಥಿತಿ ಇದೆ. ಆ ರೀತಿಯ ಆರೋಪಗಳಲ್ಲಿ ಹುರುಳಿಲ್ಲ ಎಂದರು.
ಶಿವಾನಂದ ಬೆಂತೂರ ಎಂಬಾತ ಕೋಪದಲ್ಲಿ ಆ ರೀತಿ ಆರೋಪ ಮಾಡಿರಬಹುದಷ್ಟೆ. ಕುಂದಗೋಳದಲ್ಲಿ ಯಾವುದೇ ಬಂಡಾಯವಿಲ್ಲ. ಕುಂದಗೋಳದಲ್ಲಿ ಪ್ರಚಾರಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಬಂದರೂ ಅವರ ಆಟ ನಡೆಯಲ್ಲವೆಂದು ಶೆಟ್ಟರ್ ಹೇಳಿದ್ದಾರೆ.
ಶೆಟ್ಟರ್ ಅವರದೇ ಎಲ್ಲೆಡೆ ಆಟ ನಡೆಯಲಿ. ಅವರದಷ್ಟೆ ಎಲ್ಲ ಕಡೆ ನಡೆಯೋದು. ಅವರ ಬುಗುರಿಯೇ ಎಲ್ಲಾ ಕಡೆ ತಿರುಗೋದು. ನಮ್ಮದೇನು ತಿರಗಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಸಚಿವರಾದ ಡಿ.ಕೆ. ಶಿವಕುಮಾರ, ಸತೀಶ ಜಾರಕಿಹೊಳಿ, ಆರ್.ಬಿ. ತಿಮ್ಮಾಪುರ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ ಮೊದಲಾದವರಿದ್ದರು.