Advertisement

ಏನಾಯ್ತೋ, ದೋಸೆ ಚೆನ್ನಾಗಿಲ್ವಾ?

07:49 PM Oct 08, 2019 | Lakshmi GovindaRaju |

ಪಕ್ಕದ ತಟ್ಟೆಗೆ ಕೈ ಹಾಕಿ, ತಲೆಯೆತ್ತದೇ ಎರಡು ದೊಡ್ಡ ತುಂಡು ಬಾಯಿಗಿಳಿಸಿ, ಮಗನ ಅಭಿಪ್ರಾಯ ಕೇಳಲು ತಲೆ ಎತ್ತಿ ನೋಡಿದೆ. ಮಗ ಗರ ಬಡಿದವನಂತೆ ಅವಾಕ್ಕು! “ಏನಾಯ್ತೋ? ಚೆನ್ನಾಗಿಲ್ಲವಾ ದೋಸೆ?’ ಅನ್ನುತ್ತಾ, ಪತಿದೇವರೆಡೆ ತಿರುಗಿದರೆ, ಅಲ್ಲಿದ್ದವ ಬೇರೆ ಗಂಡಸು! ಆತನ ತಟ್ಟೆಯಲ್ಲಿ ನಾನು ತಿಂದು ಬಿಟ್ಟ ದೋಸೆ!

Advertisement

ಸಾಮಾನ್ಯವಾಗಿ ರಜೆ ದಿನಗಳಲ್ಲಿ, ಸಂಗೀತದ ಕಾರ್ಯಕ್ರಮಗಳಿಗೆ ಬೆಳಗ್ಗೆಯೇ ಓಡಬೇಕಾದ ಧಾವಂತದಲ್ಲಿ ಬೆಳಗಿನ ಉಪಾಹಾರಕ್ಕಾಗಿ ಪತಿ ಮತ್ತು ಮಗನೊಂದಿಗೆ ಯಾವುದಾದರೊಂದು ಒಳ್ಳೆಯ ದರ್ಶಿನಿಗೆ ದೌಡಾಯಿಸುವ ಸಂಪ್ರದಾಯವುಂಟು. ಉಪಾಹಾರವೆಂದರೆ ಬೆಳಗಿನದ್ದೇ ಕಾರ್ಯಕ್ರಮ. ಸಂಜೆಯಾದರೆ ನಮ್ಮಲ್ಲಿ ಫ‌ಲಾಹಾರವೆನ್ನುವುದು ರೂಢಿ. ಸಂಜೆಯ ತಿಂಡಿ ನಿಜಾರ್ಥದಲ್ಲಿ ಫ‌ಲಾಹಾರವಾಗಿರದೆ ಫ‌ಳಾರವೆಂದಾಗಿದ್ದಲ್ಲಿ ಅದು ಸಮಕಾಲೀನ ಸ್ನ್ಯಾಕ್ಸ್‌) ಮೊನ್ನೆ ಹೀಗೇ ದೋಸೆ ಕ್ಯಾಂಪಿಗೆ ಸವಾರಿ ನಡೆದಿತ್ತು.

ಗಿಜಿಗುಡುವ ಜನರ ನಡುವೆ, ಕೌಂಟರಿನಲ್ಲಿ ಮೂರು ವಿವಿಧ ರೀತಿಯ ದೋಸೆಗಳಿಗೆ ಮತ್ತು ಶುಗರ್‌ಲೆಸ್‌ ಕಾಫಿಗೆ ಬಿಲ್ಲು ಮಾಡಿಸಿ, ಸಾಲಿನಲ್ಲಿ ನಿಂತು, ದೋಸೆ ಹಾಕುವವನ ಕೈಚಳಕಕ್ಕೆ ಕಣ್ಣರಳಿಸಿ, ಆತ ಬಟ್ಟಲೊಳಗೆ ಚುಚ್ಚುಕವನ್ನದ್ದಿ ಅದೇನೋ ಉದಾರತೆಯಿಂದ ದೋಸೆಯ ಸುರುಳಿ ತಗ್ಗಿನಲ್ಲಿ ಇನ್ನೇನು ತುಪ್ಪ ಸುರಿದು ಬಿಡಬೇಕು! ಅಷ್ಟರಲ್ಲಿ ಗಟ್ಟಿಯಾಗಿ “ತುಪ್ಪ ಬೇಡಾ…’ ಎಂದು ಕೂಗಿ, ಆತ ಕೇವಲ ಜಿಡ್ಡನ್ನು ಹನಿಸುವಂತೆ ಮಾಡಿ, ಸಾರ್ಥಕ್ಯದ ಉಸಿರು ಬಿಟ್ಟು, ಈರುಳ್ಳಿ- ಆಲೂಗಡ್ಡೆಯ ಪರಿಮಳದ ಪಲ್ಯವನ್ನು ಒಡಲಲ್ಲಿ ಬಚ್ಚಿಟ್ಟುಕೊಂಡ ಘಮ್ಮೆನ್ನುವ ದೋಸೆಯ ತಟ್ಟೆಯನ್ನು ಭದ್ರವಾಗಿ ಹಿಡಿದು, ಜನಸಂದಣಿಯಿಂದ ಕೂಡಿದ ಟೇಬಲ್ಲೊಂದರ ಮುಂದೆ ನುಸುಳಿ ತಟ್ಟೆ ಇಟ್ಟು, ಹಕ್ಕು ಸ್ಥಾಪಿಸುವುದೆಂದರೆ ಯಾವ ಸಾಧನೆಗಿಂತಲೂ ಕಡಿಮೆ ಇಲ್ಲ. ಇಷ್ಟಕ್ಕೆ, ಧಾರೆಯಂತಹ ಏಕಾಗ್ರತೆ, ಅವಧಾನ ಬೇಡವೇ?

ಈ ಅವಧಾನದ ಮಾತಾಡುತ್ತಿದ್ದಂತೆ, ನಮ್ಮ ಮನೆಯ ಸಂಪ್ರದಾಯವೊಂದನ್ನು ಹೇಳಿಯೇ ಬಿಡಬೇಕು. ನಾನು, ನನ್ನ ಪತಿದೇವರು ಪರಸ್ಪರರ ದೋಸೆ ತಟ್ಟೆಗೆ ಕೈ ಹಾಕಿ, ಒಂದು ತುಂಡನ್ನಾದರೂ ಕಬಳಿಸಿ ಇನ್ನೊಬ್ಬರ ದೋಸೆ ತನಗಿಂತ ಎಷ್ಟು ಗರಿ ಗರಿ, ಸ್ವಾದ ಹೇಗೆ ಎಂದು ಪರೀಕ್ಷಿಸಿಕೊಳ್ಳುವ ಚಟಕ್ಕೆ (ಹಠಕ್ಕೆ) ಬಿದ್ದವರು. ಇದು ಮದುವೆಯಾದ ಲಾಗಾಯ್ತಿನಿಂದ ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿ. ಒಂದು ರೀತಿಯ ಲಿಖೀತವೂ ಅಲ್ಲದ, ಮೌಖೀಕವೂ ಅಲ್ಲದ, ಕಣ್ಣೆತ್ತಿಯೂ ನೋಡದೆ ಕಬಳಿಸುವ, ಕೇವಲ ಕೈಗಳ ಮತ್ತು ಬಾಯಳ ಒಪ್ಪಂದ. (ಮಗ ಗುರ್ರೆನ್ನುವ ಕಾರಣ ಅವನ ತಟ್ಟೆಗೆ ಕೈ ಹಾಕುವುದು ನಿಷಿದ್ಧ.

ಅದು ದೇವರಿಗೆಂದು ಬಿಟ್ಟ ನೈವೇದ್ಯ. ಎಂಜಲು ಮಾಡುವಂತಿಲ್ಲ. ಮೂಸಿ ನೋಡುವಂತಿಲ್ಲ. ತಿಂದು ಬಿಟ್ಟ ಪ್ರಸಾದವಷ್ಟೇ ನಮ್ಮ ಪಾಲಿಗೆ. ಇದು ಅವನ ಬಾಲ್ಯಾರಭ್ಯ ನಡೆದು ಬಂದ ಸಂಪ್ರದಾಯ, ಪದ್ಧತಿ, ಶಿಷ್ಟಾಚಾರ) ಅಂತೂ, ಟೇಬಲ್ಲೊಂದರ ಮುಂದೆ ಜಾಗ ಹಿಡಿದು ನಿಂತೆ. ಕೆಲ ಕ್ಷಣಗಳಲ್ಲಿ ಮಗ ತಟ್ಟೆಯೊಂದಿಗೆ ಹಾಜರಾಗಿ ಎದುರು ಬಂದು ನಿಂತ. ಪಕ್ಕದ ಜಾಗದಲ್ಲಿ ಯಜಮಾನರ ತಟ್ಟೆ ಬಂದಿತೆಂದುಕೊಂಡು, ಒಂದೆರಡು ತುಂಡು ದೋಸೆ ರಸನಾಗ್ರಕ್ಕೆ ತಂದುಕೊಂಡು, ಜಗಿದು, ಗರಿಯನ್ನನುಭವಿಸಿ, ಚಟ್ನಿಯ ಬಗ್ಗೆ ಮನಸ್ಸಿನಲ್ಲೇ ವಿಮರ್ಶೆ ಮಾಡಿಕೊಳ್ಳುತ್ತ, ಪಕ್ಕದ ತಟ್ಟೆಗೂ ಕೈ ಹಾಕಿ, ತಲೆಯೆತ್ತದೇ ಎರಡು ದೊಡ್ಡ ತುಂಡು ಬಾಯಿಗಿಳಿಸಿ ಮಗನ ಅಭಿಪ್ರಾಯ ಕೇಳಲು ತಲೆ ಎತ್ತಿ ಎದುರು ನೋಡಿದೆ.

Advertisement

ಮಗ ಗರ ಬಡಿದವನಂತೆ ಅವಾಕ್ಕು! ಬಿಟ್ಟ ಬಾಯಿ, ಪಿಳಿಪಿಳಿ ಕಣ್ಣು! “ಏನಾಯ್ತೋ? ಚೆನ್ನಾಗಿಲ್ಲವಾ ದೋಸೆ?’ ಅಂದೆ. ಅವನು ದೃಷ್ಟಿ ಹೊರಳಿಸಿ ಪಕ್ಕ ನೋಡಿದ. ಅಭಿಪ್ರಾಯ ಕೇಳಲು ಪತಿದೇವರೆಡೆ ತಿರುಗಿದರೆ, ಪಾಪ! ಅದಾರೋ ಬೇರೆ ಗಂಡಸು! ಆತನ ತಟ್ಟೆಯಲ್ಲಿ ನಾನು ತಿಂದು ಬಿಟ್ಟ ದೋಸೆ! ಪೇಲವವಾಗಿ ಏನನ್ನೂ ಹೇಳದೆ, ಆಗ ತಾನೇ ಹೆಂಚಿನಿಂದಿಳಿಸಿದ ದೋಸೆ ತಂದು ನನಗೆ ನೈವೇದ್ಯ ಮಾಡಿ ದೋಸೆಯಲ್ಲಿನ ಡೊಗರು ನೋಡುತ್ತ ನಿಂತಿತ್ತು ಆಸಾಮಿ! ನನಗೋ ದೊಡ್ಡ ಶಾಕ್‌! ಮುಖ ಕೆಂಪಗಾಗಿ, ಬಿಳಿಚಿ ಹೋಗಿ, ಮುಜುಗರಕ್ಕೆ ಪ್ರಯಾಸದಿಂದ ಸಾ…..ರಿ.. ಅಂದವಳೇ, “ಕ್ಷಮಿಸಿ, ಗೊತ್ತಾಗಲಿಲ್ಲ, ನಿಮಗೆ ಬೇರೆ ದೋಸೆ ತಂದುಕೊಡುವೆ ತಾಳಿ. ಪಕ್ಕದಲ್ಲಿ ಬಂದು ನಿಂತಿದ್ದು ನನ್ನ ಪತಿಯೆಂದುಕೊಂಡುಬಿಟ್ಟೆ!

ಗೊತ್ತಾಗಲಿಲ್ಲ’… ಅಂತೇನೋ ತೋಚಿದ್ದು ಬಡಬಡಿಸಿ ಉತ್ತರಕ್ಕೂ ಕಾಯದೇ ಬೇರೆ ದೋಸೆ ಮಾಡಿಸಿ ತಂದು ಆತನ ಮುಂದಿಟ್ಟು ದೊಡ್ಡದೊಂದು ಉಸಿರು ಬಿಟ್ಟು, ನನ್ನ ಪತಿಯೆಲ್ಲೆಂದು ಹುಡುಕಿದರೆ… ಇನ್ಯಾವುದೋ ಟೇಬಲ್ಲಿನ ಮುಂದೆ ನಿಂತು ಕಣ್ಣಲ್ಲಿ ನೀರು ಬರುವಷ್ಟು ಒದ್ದಾಡಿ ನಗುತ್ತಿದ್ದರು. ನಾನು ಕದ್ದ ದೋಸೆಯೊಡೆಯ ಧನ್ಯವಾದ ಹೇಳಿದರೆ, ನಾನು ಪೆಚ್ಚು ನಗೆ ಬೀರಿದ್ದೆ. ತರಾತುರಿಯಲ್ಲಿ ಗಂಟಲಲ್ಲಿಳಿಯದ ಕಾಫಿ ಮುಗಿಸಿ ಹೊರಬಿದ್ದಾಗ, ಅರೆಕ್ಷಣ ಮೌನದ ನಂತರ ಮೂವರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು. “ನನ್ನ ತಟ್ಟೆಗೆ ಕೈ ಹಾಕುವ ಮೊದಲು ಮುಖವನ್ನಾದರೂ ನೋಡಬೇಡವೇ?’ ಎಂಬ ಪತಿಯ ಹಾಸ್ಯಭರಿತ ನಗು ಹೊಸದೊಂದು ಒಪ್ಪಂದಕ್ಕೆ ನಾಂದಿ ಯಾಯ್ತು ಎಂಬಲ್ಲಿಗೆ ನಮ್ಮ ದರ್ಶಿನಿಯ ದೋಸೆ ಪುರಾಣವು ಪರಿಸಮಾಪ್ತಿ.

* ವಿದ್ಯಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next