ಅತ್ಯಂತ ಬಿಗುವಿನ ಪರಿಸ್ಥಿತಿಗೆ ಕಾರಣವಾಗಿದ್ದ ಬಿಕ್ಕಟ್ಟೊಂದು ರಕ್ತಪಾತವಿಲ್ಲದೆ ಅಂತ್ಯ ಆಗಿದೆ ಎನ್ನುವುದು ಸಮಾಧಾನದ ಸಂಗತಿ. ಅಪೂರ್ವ ಸಂಯಮ ಕಾಯ್ದುಕೊಂಡ ಭಾರತೀಯ ಸೇನೆಯೂ ಅಭಿನಂದನಾರ್ಹ
ಇಡೀ ಜಗತ್ತು ಕುತೂಹಲ ಮತ್ತು ಆತಂಕದಿಂದ ಗಮನಿಸುತ್ತಿದ್ದ ಡೋಕ್ಲಾಂ ಬಿಕ್ಕಟ್ಟು ಶುರುವಾದಷ್ಟೇ ದಿಢೀರ್ ಆಗಿ ಮುಕ್ತಾಯವಾಗಿದೆ. ಬರೋಬ್ಬರಿ 72 ದಿನಗಳ ಕಾಲ ಮೂರು ದೇಶಗಳು ಸೇರುವ ಗಡಿಯಲ್ಲಿ ಮುಖಾಮುಖೀಯಾಗಿ ಕುಳಿತಿದ್ದ ಭಾರತ ಮತ್ತು ಚೀನದ ಸೇನೆಗಳು ಹಿಂದೆಗೆಯುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಕುರಿತು ಭಾರತದ ವಿದೇಶಾಂಗ ಇಲಾಖೆ ಅಧಿಕೃತ ಪ್ರಕಟನೆ ನೀಡಿದೆ. ರಾಜತಾಂತ್ರಿಕ ಸಂವಹನಗಳ ಫಲಶ್ರುತಿಯಾಗಿ ಡೋಕ್ಲಾಂ ಬಿಕ್ಕಟ್ಟು ಶಮನಗೊಂಡಿದೆ, ಸೇನೆ ಹಿಂದೆಗೆಯಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಬಿಕ್ಕಟ್ಟು ಶಮನವಾಗಿರುವ ಕುರಿತು ಚೀನ ನೇರವಾಗಿ ಹೇಳದಿದ್ದರೂ ಭಾರತವೇ ಮೊದಲು ಸೇನೆಯನ್ನು ಹಿಂದೆಗೆಯಲು ಒಪ್ಪಿದ ಕಾರಣ ನಾವು ಸಕಾರಾತ್ಮಕವಾಗಿ ಪ್ರತಿಸ್ಪಂದಿಸಿದ್ದೇವೆ ಎನ್ನುವ ಮೂಲಕ ಬಿಕ್ಕಟ್ಟು ಪರಿಹಾರಗೊಂಡಿರುವುದನ್ನು ಪರೋಕ್ಷವಾಗಿ ಒಪ್ಪಿದೆ.
ಭೂತಾನ್, ಚೀನ ಮತ್ತು ಭಾರತ ಸಂಧಿಸುವ ಡೋಕ್ಲಾಂನಲ್ಲಿ ಚೀನ 2012ರ ತ್ರಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿ ರಸ್ತೆ ನಿರ್ಮಿಸಲು ಹೊರಟದ್ದೇ ವಿವಾದದ ಮೂಲ. ಡೋಕ್ಲಾಂ ತನಗೆ ಸೇರಿದ್ದು ಎಂದು ಏಕಪಕ್ಷೀಯವಾಗಿ ನಿರ್ಧರಿಸಿದ ಚೀನ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿರುವ ಈ ಪ್ರದೇಶದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸುವ ಮೂಲಕ ಭಾರತದ ಮೇಲೆ ಸವಾರಿ ಮಾಡಲು ಮುಂದಾಗಿತ್ತು. ಸಕಾಲದಲ್ಲಿ ಎಚ್ಚೆತ್ತ ಭಾರತ ಇಲ್ಲಿ ಸೇನೆ ನಿಯೋಜನೆ ಮಾಡಿದ ಬಳಿಕ ಎರಡೂ ದೇಶಗಳ ನಡುವೆ ಯುದ್ಧ ನಡೆದು ಬಿಡಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಚೀನ ಪದೇ ಪದೇ ಯುದ್ಧದ ಮಾತನ್ನಾಡಿದರೂ ಭಾರತ ಅದ್ಭುತವಾದ ಸಂಯಮ ಪ್ರದರ್ಶಿಸಿ ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳುವಲ್ಲಿ ಸಫಲವಾಗಿತ್ತು. ಆದರೂ ಯಾವ ಕಾರಣಕ್ಕೂ ಡೋಕ್ಲಾಂ ಬಿಟ್ಟುಕೊಡುವುದಿಲ್ಲ ಎಂದಿದ್ದ ಚೀನ ಮೆತ್ತಗಾಗಲು ಕಾರಣವೇನು? ಮುಖ್ಯವಾಗಿ ಕಾಣಿಸುವುದು ಸೆ. 3ರಿಂದ 5ರ ತನಕ ಕ್ಸಿಯಾಮೆನ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಸಮಾವೇಶ. ಕಳೆದ ವರ್ಷ ಭಾರತ ಬ್ರಿಕ್ಸ್ ಆತಿಥ್ಯ ವಹಿಸಿ ಗೋವಾದಲ್ಲಿ ಅದನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟಿದೆ. ಆದರೆ ಡೋಕ್ಲಾಂ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನದ ಆತಿಥ್ಯದಲ್ಲಿ ನಡೆಯುವ ಸಮಾವೇಶ ಯಶಸ್ವಿಯಾಗುವ ಕುರಿತು ಅನುಮಾನಗಳಿದ್ದವು. ಮಾತ್ರವಲ್ಲ, ಪ್ರಧಾನಿ ಮೋದಿ ಸಮಾವೇಶದಲ್ಲಿ ಭಾಗವಹಿಸುವ ಕುರಿತು ಅನಿಶ್ಚಿತತೆಗಳಿದ್ದವು. ಚೀನಕ್ಕೆ ಡೋಕ್ಲಾಂಗಿಂತಲೂ ಬ್ರಿಕ್ಸ್ ಹೆಚ್ಚು ಮುಖ್ಯ. 2009ರಲ್ಲಿ ಸ್ಥಾಪನೆಯಾಗಿರುವ ಬ್ರಿಕ್ಸ್‌ನ್ನು ಚೀನ, ಅಮೆರಿಕ- ಐರೋಪ್ಯ ರಾಷ್ಟ್ರಗಳ ಆರ್ಥಿಕ ಪ್ರಾಬಲ್ಯಕ್ಕೆ ಸಡ್ಡು ಹೊಡೆಯುವ ಪರ್ಯಾಯ ವ್ಯವಸ್ಥೆ ಎಂದು ಭಾವಿಸಿದೆ. ಡೋಕ್ಲಾಂ ಬಿಕ್ಕಟ್ಟಿನಿಂದ ಬ್ರಿಕ್ಸ್ ಗೆ ಹಿನ್ನಡೆಯಾಗುವುದೆಂದರೆ ಚೀನದ ಆರ್ಥಿಕ ಹಿತಾಸಕ್ತಿಗೆ ಆಗುವ ಹಿನ್ನಡೆಯೆಂದೇ ಅರ್ಥ. ಭಾರತವಿಲ್ಲದ ಬ್ರಿಕ್ಸ್ ಅಪೂರ್ಣ ಎಂಬುದು ಚೀನಕ್ಕೆ ಚೆನ್ನಾಗಿ ಗೊತ್ತಿದೆ!
ಇನ್ನೊಂದು ಕಾರಣ- ಡೋಕ್ಲಾಂ ವಿಚಾರದಲ್ಲಿ ಚೀನ ಅಂತಾರಾಷ್ಟ್ರೀಯವಾಗಿ ಏಕಾಂಗಿಯಾದದ್ದು. ನೆರೆಯ ದೇಶಗಳು ಮಾತ್ರವಲ್ಲದೆ ಅಮೆರಿಕ, ಬ್ರಿಟನ್, ಜಪಾನ್ ಸೇರಿದಂತೆ ದೂರದ ದೇಶಗಳು ಕೂಡ ಚೀನ ವಾದವನ್ನು ಒಪ್ಪಿಕೊಳ್ಳಲಿಲ್ಲ. ನೇಪಾಳವನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನವೂ ವಿಫಲವಾಯಿತು. ಅಮೆರಿಕ, ಬ್ರಿಟನ್ ಬಿಕ್ಕಟ್ಟನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿ ಎಂದು ಚೀನಕ್ಕೆ ಸ್ಪಷ್ಟವಾಗಿ ಹೇಳಿದ್ದವು. ಜಪಾನ್ ಕೂಡ ಚೀನದ ಭೂದಾಹವನ್ನು ಖಂಡಿಸಿ ಬಿಕ್ಕಟ್ಟು ಬಗೆಹರಿಯದೆ ಯಥಾಸ್ಥಿತಿಯನ್ನು ಬದಲಾಯಿಸುವುದು ಸರಿಯಲ್ಲ ಎಂದಿತ್ತು. ಭೂತಾನ್ ಆರಂಭದಲ್ಲೇ ತಾನು ಭಾರತದ ಪರ ಎಂದ ಮೇಲೆ ಡೋಕ್ಲಂ ಮೇಲೆ ಹಕ್ಕು ಸಾಧಿಸುವುದು ಸುಲಭವಲ್ಲ ಎಂಬ ವಾಸ್ತವ ಅರಿವಾಗಿ ಚೀನ ಹಿಂದೆ ಸರಿಯಲು ಒಪ್ಪಿರುವ ಸಾಧ್ಯತೆಯಿದೆ. ಏನೇ ಆದರೂ ಅತ್ಯಂತ ಬಿಗುವಿನ ಪರಿಸ್ಥಿತಿಗೆ ಕಾರಣವಾಗಿದ್ದ ಬಿಕ್ಕಟ್ಟೊಂದು ರಕ್ತಪಾತವಿಲ್ಲದೆ ಅಂತ್ಯವಾಗಿದೆ ಎನ್ನುವುದು ಸಮಾಧಾನದ ಸಂಗತಿ. ಅಪೂರ್ವ ಸಂಯಮವನ್ನು ಕಾಯ್ದುಕೊಂಡು ಸನ್ನಿವೇಶಗಳನ್ನು ನಿಭಾಯಿಸಿದ ಭಾರತೀಯ ಸೇನೆ ಅಭಿನಂದನಾರ್ಹ. ಹಾಗೆಂದು ಗಡಿ ವಿವಾದ ಇಲ್ಲಿಗೆ ಮುಗಿಯಿತು ಎಂದು ಮೈಮರೆಯುವಂತಿಲ್ಲ. ಚೀನದ ಜತೆಗೆ ಭಾರತ ಸುದೀರ್ಘ ಗಡಿ ಹಂಚಿಕೊಂಡಿದೆ. ಈ ಪೈಕಿ ಅರುಣಾಚಲ ಪ್ರದೇಶವೂ ಸೇರಿದಂತೆ ಹಲವು ಆಯಕಟ್ಟಿನ ಪ್ರದೇಶಗಳನ್ನು ಚೀನ ತನ್ನದೆಂದು ಹೇಳುತ್ತಿದೆ. ಹೀಗಾಗಿ ಯಾವ ಸಮಯದಲ್ಲೂ ಚೀನ ಮತ್ತೂಮ್ಮೆ ಮೇಲೇರಿ ಬರಬಹುದು. ಇನ್ನೊಂದು ಗಮನಾರ್ಹ ಅಂಶವೆಂದರೆ ಡೋಕ್ಲಾಂ ವಿವಾದ ಯಾವುದೇ ಒಪ್ಪಂದವಿಲ್ಲದೆ ಬಗೆಹರಿದಿದೆ. ಹೀಗಾಗಿ ಇನ್ನೊಮ್ಮೆ ಚೀನ ಡೋಕ್ಲಾಂ ಮೇಲೆ ಕಣ್ಣು ಹಾಕುವುದಿಲ್ಲ ಎಂದು ಖಾತರಿ ನೀಡಲು ಸಾಧ್ಯವಿಲ್ಲ.