ಬೆಂಗಳೂರು: ‘ಮುಖ್ಯಮಂತ್ರಿ ಹುದ್ದೆ’ ಕುರಿತ ಮುಸುಕಿನ ಗುದ್ದಾಟ ಮುಂದುವರಿಯುತ್ತಿರುವಂತೆಯೇ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿದ್ದ ಕೆಲವು ಸಚಿವರು ಹಾಗೂ ಆಪ್ತ ಶಾಸಕರು ಗುರುವಾರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿರುವ ಎಂಟಕ್ಕೂ ಹೆಚ್ಚು ಸಚಿವರು ಹಾಗೂ ಆಪ್ತ ಶಾಸಕರು ಸದ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಎಂ.ಬಿ. ಪಾಟೀಲ್, ಸಚಿವರಾದ ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್, ಪುಟ್ಟರಂಗ ಶೆಟ್ಟಿ ಸೇರಿದಂತೆ ಎಂಟಕ್ಕೂ ಹೆಚ್ಚು ಸಚಿವರು ಹಾಗೂ ಅನೇಕ ಸಿದ್ದರಾಮಯ್ಯ ಆಪ್ತ ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ಕ್ಷೇತ್ರಗಳ ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿ ಜೋರಾಗಿ ನಡೆಯುತ್ತಿದ್ದು, ಅದೇ ಆಧಾರದಲ್ಲಿಯೇ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಅವರ ಆಪ್ತ ಸಚಿವರು ಹಾಗೂ ಶಾಸಕರು ಮೇಲಿಂದ ಮೇಲೆ ಹೇಳುತ್ತಿರುವುದು ಮೈತ್ರಿ ಪಕ್ಷದ ನಾಯಕರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸುತ್ತಿರುವಾಗಲೇ ಸಿದ್ದರಾಮಯ್ಯ ಅವರು ಆಪ್ತರ ಜೊತೆ ಮಾತುಕತೆ ನಡೆಸಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಗೃಹ ಸಚಿವ ಎಂ.ಬಿ ಪಾಟೀಲ್ರ ಹೇಳಿಕೆಯಿಂದ ಮುಜುಗರ ಅನುಭವಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಎದುರು ತಮ್ಮ ಅಸಮಾಧಾನ ಹೊರ ಹಾಕಿದ್ದರು. ವಿವಾದ ತಣ್ಣಗಾಗಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರೊಂದಿಗೆ ಸಚಿವರು ಮಾತುಕತೆ ನಡೆಸಿರುವುದು ಗೊಂದಲಕ್ಕೆ ಕಾರಣವಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿಲಾಗಿದೆ.
ಅಧಿಕಾರ ಪಡೆಯಿರಿ ಇಲ್ಲವೇ ಬೆಂಬಲ ವಾಪಸ್ ಪಡೆಯಿರಿ: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರಿಗೆ ಯಾವುದೇ ರೀತಿಯ ಬೆಲೆ ಇಲ್ಲದಂತಾಗಿದೆ. ಇದರಿಂದ ಪಕ್ಷಕ್ಕೆ ಯಾವುದೇ ರೀತಿಯ ಲಾಭವಿಲ್ಲ. ಹೀಗಾಗಿ ಮೈತ್ರಿಯಲ್ಲಿ ಮುಂದುವರಿಯಬೇಕೆಂದರೆ, ಮುಖ್ಯಮಂತ್ರಿಯಾಗಬೇಕು ಎಂಬ ಅಭಿಪ್ರಾಯವನ್ನು ಕೆಲವು ಸಚಿವರು ಹಾಗೂ ಶಾಸಕರು ಸಿದ್ದರಾಮಯ್ಯ ಅವರ ಮುಂದೆ ನೇರವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿಗಮ ಮಂಡಳಿ ಅಧ್ಯಕ್ಷರು, ಉಸ್ತುವಾರಿ ಸಚಿವರುಗಳಿಗೂ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಅಧಿಕಾರ ಇಲ್ಲದಂತಾಗಿದೆ. 80 ಜನ ಶಾಸಕರನ್ನು ಇಟ್ಟುಕೊಂಡು 37 ಶಾಸಕರ ಕೈಗೆ ಅಧಿಕಾರ ಕೊಟ್ಟು ಕೈ ಕಟ್ಟಿಕೊಂಡು ನಿಲ್ಲುವುದಕ್ಕಿಂತ ಮತ್ತೆ ಚುನಾವಣೆ ಎದುರಿಸುವುದೇ ಲೇಸು ಎಂಬ ವಾದವನ್ನು ಬಹುತೇಕ ಕಾಂಗ್ರೆಸ್ ಶಾಸಕರು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಶಾಸಕರಾದ ಚಲುವರಾಯಸ್ವಾಮಿ, ಕೆ.ಎನ್. ರಾಜಣ್ಣ ಹಾಗೂ ಸಂಸದ ಮುದ್ದಹನುಮೇಗೌಡ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.