Advertisement

ಅಧಿಕಾರಿಗಳಿಲ್ಲದೇ ಏತಕ್ಕೆ ಸಭೆ?

03:38 PM Jul 07, 2018 | Team Udayavani |

ಹೊನ್ನಾಳಿ: ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣಾ ಜಾಗೃತಿ ಸಮಿತಿ ಸಭೆಗೆ ಪದೇ ಪದೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗುತ್ತಿರುವುದರಿಂದ ಸಮಸ್ಯೆಗಳು ಇತ್ಯರ್ಥವಾಗುತ್ತಲೇ ಇಲ್ಲ. ಮತ್ತೆ ಏತಕ್ಕಾಗಿ ಸಭೆ ನಡೆಸುತ್ತೀರಿ ಎಂದು ದಲಿತ ಮುಖಂಡರಾದ ರುದ್ರೇಶ್‌ ಕೊಡತಾಳ್‌, ದಿಡಗೂರು ತಮ್ಮಣ್ಣ, ಎ.ಡಿ. ಈಶ್ವರಪ್ಪ, ಮಾರಿಕೊಪ್ಪ ಮಂಜಪ್ಪ ಏರು ಧ್ವನಿಯಲ್ಲಿ ಪ್ರಶ್ನಿಸಿದ ಘಟನೆ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪಂಗಡ ಜನಾಂಗದ ಹಿತರಕ್ಷಣಾ ಜಾಗೃತಿ ಸಮಿತಿ ಸಭೆಯಲ್ಲಿ ಜರುಗಿತು.

Advertisement

ಹಿಂದಿನ ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಮುಂದೆ ಏನು ಕ್ರಮ ಕೈಗೊಳ್ಳಲಾಗಿದೆ ಎನ್ನುವುದನ್ನು ಸಭೆಗೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.  ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಡಾ| ನಾಗಮಣಿ ಮಾತನಾಡಿ, ವಿಧಾನಸಭಾ ಚುನಾವಣೆ ನಂತರ ತಾವು ನಿಯುಕ್ತಿಗೊಂಡಿರುವುದರಿಂದ ಹಿಂದಿನ
ವಿಷಯ ಗೊತ್ತಿಲ್ಲ. ಈ ಮುಂದು ಸಭೆಗಳಿಗೆ ಕಡ್ಡಾಯವಾಗಿ ಹಾಜರಿರಲು ಸೂಚಿಸುತ್ತೇನೆ. ಸಭೆಗೆ ಬಾರದ ಅಧಿ ಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ದಲಿತ ಮುಖಂಡ ರಾಜಪ್ಪ ಮಾತನಾಡಿ, ಬೆಳಗುತ್ತಿ ಹೋಬಳಿಯ ಮಲ್ಲಿಗೇನಹಳ್ಳಿಯಲ್ಲಿ ದಲಿತರಿಗೆ ಸ್ಮಶಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ದುರ್ಗಿಗುಡಿ ಬಡಾವಣೆಯ ಅಂಬೇಡ್ಕರ್‌ಭವನ ಕಟ್ಟಡ ಕಾಮಗಾರಿ ಕಳಪೆಯಾಗಿದೆ. ತಕ್ಷಣ ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬೇಕು ಎಂದು ರುದ್ರೇಶ್‌ ಕೊಡತಾಳ್‌ ಒತ್ತಾಯಿಸಿದಾಗ, ಸಭೆ ಮುಗಿದ ಕೂಡಲೇ ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದು ತಹಶೀಲ್ದಾರ್‌ ಭರವಸೆ ನೀಡಿದರು.

ದಲಿತ ಮುಖಂಡ ಎ.ಡಿ. ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಬೇಡ ಜಂಗಮ ಜಾತಿ ಹೆಸರಿನಲ್ಲಿ ವೀರಶೈವ ಜಂಗಮರು ಎಸ್ಸಿ ಪ್ರಮಾಣ ಪತ್ರ ಪಡೆಯುವ ತಂತ್ರ ನಡೆಯುತ್ತಿದೆ. ಜಿಲ್ಲೆಯಲ್ಲಿ ವೀರಶೈವ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣ ಪತ್ರ ಕೊಡಲಾಗಿದೆಯೇ ಎಂದು ಪ್ರಶ್ನಿಸಿದರು.. ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌, ದಾವಣಗೆರೆ ಜಿಲ್ಲೆಯಲ್ಲಿ ವೀರಶೈವ ಜಂಗಮರಿಗೆ ಎಸ್ಸಿ ಜಾತಿ ಪ್ರಮಾಣ ಪತ್ರ ಕೊಟ್ಟಿರುವುದಿಲ್ಲ. ಜಿಲ್ಲೆಯಲ್ಲಿ ಬೇಡ ಜಂಗಮರಿಲ್ಲ ಎಂದು
ಹೇಳಿದರು.

ಬಂಜಾರ ಸಂಘದ ತಾಲೂಕು ಅಧ್ಯಕ್ಷ ದುದ್ಯಾನಾಯ್ಕ ಮಾತನಾಡಿ, ಬಸ್‌ ಸಂಚಾರ ಇಲ್ಲದ ಹಳ್ಳಿಗಳಿಗೆ ಬಸ್‌ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಜಿಪಂ ಸದಸ್ಯ ಸುರೇಂದ್ರ ನಾಯ್ಕ, ತಾಪಂ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಎಲ್‌. ರಂಗಪ್ಪ, ಮುಖಂಡರಾದ ದಿಡಗೂರು ತಮ್ಮಣ್ಣ, ಮಾರಿಕೊಪ್ಪ ಮಂಜಪ್ಪ, ಶೇಖರಪ್ಪ, ಪ್ರಭಾಕರ್‌ ಮಾತನಾಡಿದರು. 

ಸಭೆಯಲ್ಲಿಯೇ ಅಸ್ಪೃಶ್ಯತೆ: ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇರುತ್ತದೆ. ಆದರೆ ಈ ಸಭೆಯಲ್ಲಿಯೂ ಅದು ವ್ಯಕ್ತವಾಗಿದೆ. ತಹಶೀಲ್ದಾರ್‌, ಇಒ, ಪಿಎಸ್‌ಐ ಅವರಿಗೆ ಸ್ಟೀಲ್‌ ಲೋಟದಲ್ಲಿ ಚಹಾ ಕೊಟ್ಟರೆ ಉಳಿದವರಿಗೆ ಪ್ಲಾಸ್ಟಿಕ್‌ ಲೋಟದಲ್ಲಿ ಚಹಾ ವಿತರಿಸಲಾಯಿತು ಎಂದು ದಲಿತ ಮುಖಂಡ ರುದ್ರೇಶ್‌ ಸಭೆಯಲ್ಲಿ ನುಡಿದರು. ಇದಕ್ಕೆ ಅಧಿಕಾರಿಗಳು ಮುಗುಳ್ನಕ್ಕರೇ ಹೊರತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತಾಪಂ ಇಒ ಶಿವಪ್ಪ, ಪಿಎಸ್‌ಐ ಕಾಡದೇವರಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next