Advertisement

ಭರವಸೆಯ ಬೆಳಕಾದೀತೇ ಹೊಸ ವರ್ಷ?

11:59 AM Jan 01, 2019 | Team Udayavani |

ಚಿತ್ರದುರ್ಗ: 2018ರಲ್ಲಿ ಸತತ ಬರ, ಕೆಟ್ಟ, ಅಹಿತಕರ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚು ಸಂಭವಿಸಿದ್ದವು. ಹಿಂದುಳಿದ ಹಾಗೂ ಬರಪೀಡಿತ ಜಿಲ್ಲೆಗೆ 2019ನೇ ಇಸ್ವಿಯಾದರೂ ಶುಭದಾಯಕವಾಗಲಿ ಎಂದು ಜನರು ಹೊಸ ವರ್ಷದತ್ತ ಕಾತರದ ನೋಟ ನೆಟ್ಟಿದ್ದಾರೆ.

Advertisement

ಕಳೆದ ವರ್ಷ ಮುಂಗಾರು-ಹಿಂಗಾರು ಎರಡೂ ಕೈ ಕೊಟ್ಟಿದ್ದರಿಂದ ಬೆಳೆಗಳು ಸಂಪೂರ್ಣ ಒಣಗಿ ರೈತರ ಬದುಕು ಬರ್ಬಾದ್‌ ಆಗಿದೆ. ಈ ಬಾರಿ ಉತ್ತಮ ಮಳೆ-ಬೆಳೆಯಾದರೆ ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ಭದ್ರಾ ನೀರು ಹರಿಯುವ ಕನಸು ನನಸಾಗಲೇ ಇಲ್ಲ. ನೇರ ರೈಲು ಮಾರ್ಗ ಕಂಬಿ ಬಿಟ್ಟು ಮೇಲೇಳಲಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ಕಾರ್ಯಾರಂಭ ಮಾತ್ರ ಆಗಲೇ ಇಲ್ಲ.

ಗಣಿಗಾರಿಕೆ ನಿಷೇಧವಾಗಲಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಕಲ್ಲು ಗಣಿಗಾರಿಕೆ, ಮಣ್ಣು ಗಣಿಗಾರಿಕೆ ಅವ್ಯಾಹತವಾಗಿದೆ. ಎಲ್ಲ ರೀತಿಯ ಗಣಿಗಾರಿಕೆಗೆ ನಿಷೇಧ ಹೇರಬೇಕು. ಕೆರೆ, ಕಟ್ಟೆಗಳ ಒತ್ತುವರಿ ತೆರವಾಗಬೇಕು. ವೇದಾವತಿ ಮತ್ತು ಸುವರ್ಣಮುಖೀ ನದಿಗಳನ್ನು ಪುನಶ್ಚೇತನಗೊಳಿಸಿ ಅಂತರ್ಜಲ ವೃದ್ಧಿಗೆ ಒತ್ತು ನೀಡಬೇಕು. ಪಶುಪಾಲನೆ ಮಾಡುವ ಕುಟುಂಬಗಳ ಸ್ಥಿತಿಗತಿ ಸುಧಾರಣೆ, ಶುದ್ಧ ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಸರ್ಕಾರ ಗಮನ ನೀಡಬೇಕಿದೆ.
 
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯಬೇಕು. ಜಿಲ್ಲೆ ಹಾಗೂ ನಗರದ ಹೊರವಲಯಗಳಲ್ಲಿನ ಬಡಾವಣೆಗಳು
ಅತ್ಯಂತ ದುಸ್ಥಿತಿಯಲ್ಲಿವೆ. ರಸ್ತೆಯಿಂದ ಏಳುವ ಧೂಳು ಆರೋಗ್ಯ ಸಮಸ್ಯೆ ತಂದೊಡ್ಡಿದ್ದು ಈ ಸಮಸ್ಯೆ ನಿವಾರಣೆಯತ್ತ ಜನಪ್ರತಿನಿಧಿಗಳು
ಹಾಗೂ ಅಧಿಕಾರಿಗಳು ಲಕ್ಷé ವಹಿಸಬೇಕಿದೆ.

ವಿದರ್ಭ ಮಾದರಿ ಪ್ಯಾಕೇಜ್‌ ಸಿಗಲಿ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯಕ್ಕೂ ಚಿತ್ರದುರ್ಗ ಜಿಲ್ಲೆಗೂ ಏನೇನೂ ವ್ಯತ್ಯಾಸವಿಲ್ಲ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುಳೆ ಹೋಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾಗಾಗಿ ಜಿಲ್ಲೆಗೂ ವಿದರ್ಭ ಮಾದರಿ ಪ್ಯಾಕೇಜ್‌ ಅವಶ್ಯಕತೆ
ಇದೆ.

ಜಿಲ್ಲೆಯ ಜನ ಇಂದಿಗೂ ಫ್ಲೋರೈಡ್‌ ಅಂಶವುಳ್ಳ ನೀರನ್ನೇ ಸೇವನೆ ಮಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲದೆ ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾರೆ. ಸಣ್ಣ ಮತ್ತು ದೊಡ್ಡ ಕಾರ್ಖಾನೆಗಳು ಜಿಲ್ಲೆಯಲ್ಲಿ ಸ್ಥಗಿತಗೊಂಡ ಮೇಲೆ ಉದ್ಯೋಗ ಇಲ್ಲದ್ದರಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿದ್ದ ಏಕೈಕ ಬೃಹತ್‌ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳಾದ 4, 13 ಮತ್ತು 17 ಜಿಲ್ಲೆಯಲ್ಲಿ ಹಾದು ಹೋಗಿದ್ದು ಅಪಘಾತಗಳ ಸರ ಮಾಲೆಯೇ ನಡೆಯುತ್ತಿದೆ.

Advertisement

ಪ್ರವಾಸೋದ್ಯಮ ಬೆಳವಣಿಗೆ ಆಗಲಿ: ಮಳೆಯಾಶ್ರಿತ ಒಣಭೂಮಿಯಲ್ಲಿ ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಿದ ರೈತರು ವಾರ್ಷಿಕ ಸಾವಿರಾರು ಕೋಟಿ ರೂ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಪ್ರಕೃತಿ ವಿಕೋಪ ಉಪಶಮನ ನಿಧಿ ವ್ಯಾಪ್ತಿಗೆ ಶೇಂಗಾ ಬೆಳೆ ತರಬೇಕು. ಜಿಲ್ಲೆಯ ಗುಡಿ ಗೋಪುರಗಳನ್ನು ರಕ್ಷಣೆ ಮಾಡಿ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಮಾಡಬೇಕು. ಜಿಲ್ಲೆಯನ್ನು ಪ್ರವಾಸೋದ್ಯಮ
ಕೇಂದ್ರವನ್ನಾಗಿಸಲು ಪ್ರಯತ್ನ ಆಗಬೇಕಿದೆ.

“ಕರ್ನಾಟಕದ ಊಟಿ’ ಎಂದೇ ಖ್ಯಾತಿ ಪಡೆದಿರುವ ಜೋಗಿಮಟ್ಟಿ, ಚಂದ್ರವಳ್ಳಿ, ಕೋಟೆಯಲ್ಲಿನ ಐತಿಹಾಸಿಕ ತಾಣಗಳು, ಭಾರತ ಭೂಪಟವನ್ನು ಹೋಲುವ ವಾಣಿವಿಲಾಸ ಸಾಗರ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ತಾಣಗಳಿವೆ. ಅವೆಲ್ಲವನ್ನೂ ಅಭಿವೃದ್ಧಿಪಡಿಸಿ
ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯ ಆಗಬೇಕಿದೆ.

ಒಟ್ಟಿನಲ್ಲಿ ಸ್ವಾತಂತ್ರ್ಯನಂತರ ಇದುವರೆಗೂ ಬರದ ಬವಣೆಯಲ್ಲಿ ಬೆಂದುಹೋಗಿರುವ ಜಿಲ್ಲೆಯ ಜನರ ಮೊಗದಲ್ಲಿ ಹೊಸ ವರ್ಷ ನಗು ಮೂಡಿಸುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next