ಗ್ರೂಪ್-“ಎಂ.ಎ ಫಸ್ಟ್ ಇಯರ್ ಜರ್ನಲಿಸಂ’
ಸದಸ್ಯರು- ಮೇಘನಾ ಇತರರು
ಇವತ್ತಿನ ದಿವಸ ನಾವೆಲ್ಲಾ ಇರೋದ ಹಿಂಗ. ಒಂದು ಹೊತ್ತಿನ ಊಟ ಬಿಟ್ಟರೂ ಫೋನ್ ಬಿಟ್ಟು ಇರಲ್ಲ. ಹಿಂಗಾಗಿ ಹೆಚ್ಚುಕಮ್ಮಿ ಎಲ್ಲಾ ಮಾಹಿತಿ ನಮಗ ಗೊತ್ತಿರತೇತಿ , ಫೋನ್ ಮಾಡಿ ಮಾತಾಡೋಕಿಂತ ಹೆಚ್ಚಾಗಿ ಮೆಸೇಜ್ ಮಾಡ್ತೀವಿ. ಹೀಗಾಗಿ, ಹಿಂಗ ಕುಂತ ಮಾತಾಡುವಾಗ ನಮ್ಮ ಕ್ಲಾಸಿಂದ ಒಂದ ವಾಟ್ಸಪ್ ಗ್ರೂಪ್ ಮಾಡೋಣ ಅಂತ ಯೋಚನೆ ಬಂತು. ನನ್ನ ಗೆಳತಿ ನನಗ ನೀನ ಒಂದ ಗ್ರೂಪ್ ಕ್ರಿಯೇಟ್ ಮಾಡಿಬಿಡು ಅಂದ್ಲು, ನಾನು ಹುಂ ಅಂತಾ ಒಪ್ಕೊಂಡೆ.
ಅದಕ್ಕೆ “ಎಂ.ಎ ಫಸ್ಟ್ ಇಯರ್ ಜರ್ನಲಿಸಂ’ ಅಂತ ಹೆಸರು ಕೊಟ್ಟು , ನನ್ನೆಲ್ಲಾ ಸಹಪಾಠಿಗಳನ್ನು ಮತ್ತು ಶಿಕ್ಷಕರನ್ನು ಅದರೊಳಗೆ ಸೇರಿಸಿದೆ. ವಿಚಾರವಂತರಾದ ಸ್ನೇಹಿತರಿಂದ ಆಗಾಗ ಉಪಯುಕ್ತ ಸಂದೇಶಗಳು ಬರ್ತಿದ್ಲು. ಎಲ್ಲಾ ಶಾಂತವಾಗಿ ನಡೆದೈತಿ ಅಂತಾ ಆಗಾಗ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರ್ತಾ ಆರಾಮ ಇದ್ವಿ, ಒಂದು ದಿನ ಆ ಗ್ರೂಪ್ ಇಂದಾ ಒಬ್ರು ಲೆಫ್ಟ್ ಆದ್ರು, ಯಾಕೊ ಏನೋ ಯಾರಿಗೂ ಗೊತ್ತಿಲ್ಲ. ಆದ್ರ ಅದು ಗ್ರೂಪ್ ಒಳಗಿರೋ ಒಬ್ಬ ಮಹಾಶಯನಿಗೆ ನುಂಗಲಾರದ ತುತ್ತಾಯಿತು.
ಅವನು ಗ್ರೂಪ್ ಒಳಗ ಮೆಸೇಜ್ ಮಾಡಿ, “ಅವರನ್ನ ಯಾರು ಗ್ರೂಪಿಂದ ತೆಗದ್ರಿ. ಎಷ್ಟು ಸಂಕುಚಿತ ಮನೋಭಾವ ನಿಮಗೆಲ್ಲಾ’ ಅಂತ ಬೈಯಾಕ ಚಾಲು ಮಾಡಿದ. ನನಗೂ ತಡಕೋಕ ಆಗ್ಲಿಲ್ಲ, “ಬೇರೆದೋರು ತೆಗೆದ್ರೆ ರಿಮೂವ್ ಅಂತಾ ತೋರಸ್ತೆತಿ, ಅವರಾಗಿನ ಹೊರಗ ಹೋಗ್ಯಾರ. ಹಿಂಗಾಗಿ ಲೇಫ್ಟ್ ಅಂತ ತೋರಸೆತಿ ನೋಡ್ರಪ್ಪಾ’ ಅಂದೆ. ಆ ಪುಣ್ಯಾತ್ಮನಿಗೆ ಅದು ಎಷ್ಟರ ಮಟ್ಟಿಗೆ ಅರ್ಥ ಆತೋ, ಏನೋ. ಮತ್ತ ಅದೇ ರಾಗಾ ಹಾಡಾಕತ್ತಾ. ನೋಡೋವರ್ಗು ನೋಡಿ, ನನ್ನ ಗೆಳತಿ ಅವನನ್ನ ಗ್ರೂಪ್ ನಿಂದಾ ರಿಮೂವ್ ಮಾಡಿದ್ಲು.
ರಪ ರಪ ಅಂತಾ ಮಳಿ ಬಂದ ಒಮ್ಮೆ ನಿಂತಂಗ ಆತು. ಯಾಕ ಅವನನ್ನ ಹೊರಗ ಹಾಕಿದಿ? ಅಂತಾ ಕೇಳಿದಾಗ ಆಕಿ ಅಂದ್ಲು – “ರಿಮೂವ್ ಮತ್ತ ಲೆಫ್ಟಗೆ ಇರೋ ವ್ಯತ್ಯಾಸ ಏನು ಅಂತಾ ಗೊತ್ತಾಗ್ಲಿ ಅವನಿಗೆ ಅಂತಾ’.
ಅಷ್ಟೂ ಗೊತ್ತ ಆಗಲಾರದಷ್ಟು ದಡ್ಡಾ ಏನೂ ಇರಲಿಲ್ಲಾಅವ, ಆದರೆ ಬೇರೆದೋರ ಹೇಳ್ಳೋದನ್ನ ಯಾಕ ಕೇಳಬೇಕು ಅನ್ನೊ ಮನೋಭಾವ ಆತನದು. ಇಷ್ಟೆಲ್ಲಾ ಆದ ಮೇಲೂ ನಮ್ಮ ಗುರುಗಳ ಕರದ ಬುದ್ಧಿ ಹೇಳಿದ್ದ ಮಾತ್ರ ನನಗೆ ಮತ್ತ ನನ್ನ ಗೆಳತೀಗೆ. ಅವ ಮಾತ್ರ ಆರಾಮಕ್ಕೆ ಇದಾನ.
ಮೇಘನಾ. ಪ್ರ.ಪಾಟೀಲ