Advertisement

ಸುಳ್ಳು ಸುದ್ದಿಗೆ ವಾಟ್ಸ್‌ ಆ್ಯಪ್‌ ಹೊಣೆಯೇ?

05:51 AM Aug 13, 2018 | Harsha Rao |

ಎರಡು ವರ್ಷಗಳ ಹಿಂದೆ ಸೆಲ್ಫಿ ಕ್ರೇಜ್‌ ಕೂಡ ಇದೇ ರೀತಿ ಇತ್ತು. ಓಡುತ್ತಿರುವ ರೈಲಿನ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವ ಸಾಹಸಕ್ಕೆ ಪಕ್ಕಾಗಿ ಹಳಿ ಮೇಲೆ ಬಿದ್ದವರು… ಜಲಪಾತದಲ್ಲಿ ಬೀಳುವ ನೀರನ್ನು ಮುಟ್ಟುವಂತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಿದ್ದವರು… ಗುಡ್ಡದ ತುದಿಯ ಮೇಲೆ ಶಾರುಖ್‌ ಖಾನ್‌ನಂತೆ ಕೈ ಅಗಲಿಸಿ ನಿಂತು ಸೆಲ್ಫಿ ತೆಗೆಯಲು ಹೋಗಿ ಆಯ ತಪ್ಪಿ ಬಿದ್ದವರು… ಹೀಗೆ ಸಾಲು ಸಾಲು “ಸೆಲ್ಫ್ಹತ್ಯೆ’ ಪ್ರಕರಣಗಳು ವರದಿಯಾದವು. ಆದರೆ ಮೊಬೈಲ್‌ ಮೇಲೆ ಆರೋಪ ಹೊರಿಸಿಲ್ಲವಲ್ಲ!

Advertisement

ಸ್ಮಾರ್ಟ್‌ಫೋನ್‌ ಇರುವುದೇ ವಾಟ್ಸ್‌ಆ್ಯಪ್‌ ಮಾಡುವುದಕ್ಕೆ. ಬಹುಶಃ ಸ್ಮಾರ್ಟ್‌ಫೋನ್‌ ಹೊಂದಿರುವ ಬಹುತೇಕರ ಹೋಮ್‌ಸ್ಕ್ರೀನ್‌ನಲ್ಲೇ ವಾಟ್ಸ್‌ಆ್ಯಪ್‌ ಐಕಾನ್‌ ಇರುತ್ತದೆ. ಸ್ಮಾರ್ಟ್‌ಫೋನ್‌ ಅನ್‌ಲಾಕ್‌ ಮಾಡಿದ ತಕ್ಷಣ ನಮಗೆ ವಾಟ್ಸ್‌ಆ್ಯಪ್‌ನ ಹಸಿರು ವೃತ್ತಾಕೃತಿಯ ಚಿತ್ರ ಕಾಣಿಸದಿದ್ದರೆ ತಳಮಳವಾಗುತ್ತದೆ. ಒಂದು ದಿನ ಫೇಸ್‌ಬುಕ್‌ ನೋಡದೇ ನಾವು ಬದುಕಬಲ್ಲೆವು. ಇನ್‌ಸ್ಟಾಗ್ರಾಮ್‌ ಅಂತೂ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನ ಸುತ್ತ ತಿರುಗಾಡುವ ಅನ್ಯಗ್ರಹ ಜೀವಿಗಳದ್ದು ಎಂದೇ ಭಾಸವಾಗುತ್ತದೆ. ಟ್ವಿಟರ್‌ ಇನ್ನೂ ಬಹಳಷ್ಟು ಭಾರತೀಯರಿಗೆ ಏನೆಂದೇ ಅರ್ಥವಾಗಿಲ್ಲ. ಆದರೆ ವಾಟ್ಸ್‌ಆ್ಯಪ್‌ ಹಾಗಲ್ಲ. ಅದೊಂದು ಅಡಿಕ್ಷನ್‌. ಹಾಗಂತ ವಾಟ್ಸ್‌ಆ್ಯಪೇ ಆಗಬೇಕೆಂದೇನಿಲ್ಲ. ಹಿಂದೆ ಮೊಬೈಲ್‌ ಹೊಸದಾಗಿ ಬಂದಾಗ ಮೆಸೇಜ್‌ಗಳೂ ಹೀಗೆಯೇ ನಮ್ಮನ್ನು ಪ್ರಚೋದಿಸುತ್ತಿದ್ದವು.

ಒಬ್ಬ ಸಕ್ರಿಯ ವಾಟ್ಸ್‌ಆ್ಯಪಿಗನ ಪ್ರೊಫೈಲ್‌ನಲ್ಲಿ ಕನಿಷ್ಠ ಒಂದು ಡಜನ್‌ ಗ್ರೂಪ್‌ಗ್ಳು ಇರುತ್ತವೆ. ಹೈಸ್ಕೂಲ್‌ ಸಹಪಾಠಿಗಳದ್ದೊಂದು ಗ್ರೂಪ್‌, ಕಾಲೇಜು, ಊರು, ಸಂಬಂಧಿಗಳು, ದೂರದ ಸಂಬಂಧಿಗಳು, ನಾಲ್ಕಾರು ಕಂಪನಿಯಲ್ಲಿ ಕೆಲಸ ಮಾಡಿದ್ದರೆ ಆ ಎಲ್ಲ ಕಂಪನಿಗಳ ಉದ್ಯೋಗಿಗಳು ಕಂ ಸ್ನೇಹಿತರ ಗ್ರೂಪ್‌… ಇಲ್ಲೆಲ್ಲ ವಿವಿಧ ವಿಷಯಗಳ ಬಗ್ಗೆ ಚರ್ಚೆ. ಅದರಲ್ಲಿ ರಾಜಕೀಯ ಚರ್ಚೆಗೇ ಮೇಲುಗೈ. ಕಿಲೋಮೀಟರುಗಳಷ್ಟು ಉದ್ದದ ಮೆಸೇಜುಗಳನ್ನು ಕೆಲವು ಬಾರಿ ಓದಿ, ಇನ್ನೂ ಕೆಲವು ಬಾರಿ ಗ್ರೂಪ್‌ಗ್ಳಲ್ಲಿ ನಮ್ಮ ಅಸ್ತಿತ್ವ ಸಾರಲು ಓದದೆಯೇ ಫಾರ್ವರ್ಡ್‌ ಮಾಡುತ್ತೇವೆ. ಹೆಂಗೆಂಗೋ ಇರುವ ಜೋಕುಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುತ್ತೇವೆ. ಬೆಳಗ್ಗೆ ಎದ್ದಾಕ್ಷಣ ಒಂದು ಗುಡ್‌ ಮಾರ್ನಿಂಗ್‌ ಸಂದೇಶವನ್ನು ವಾಟ್ಸಾಪ್‌ನಲ್ಲಿ ಆತ್ಮೀಯ ಗ್ರೂಪ್‌ಗೆ ಕಳುಹಿಸದಿದ್ದರೆ ನಮಗೆ ಬೆಳಗಾಗುವುದೇ ಇಲ್ಲ. ಇದು ಕೇವಲ ಜನಸಾಮಾನ್ಯರನ್ನಲ್ಲ. ಪ್ರಧಾನಿ ನರೇಂದ್ರ ಮೋದಿಯನ್ನೂ ಕಾಡಿದ ಸಂಗತಿ.

ಎರಡು ವರ್ಷದ ಹಿಂದೆ ತನ್ನ ಬೆಳಗಿನ ಗುಡ್‌ ಮಾರ್ನಿಂಗ್‌ ಸಂದೇಶಕ್ಕೂ ಗ್ರೂಪ್‌ನಲ್ಲಿ ಸಂಸದರು ಪ್ರತಿಕ್ರಿಯಿ ಸುವುದಿಲ್ಲ ಎಂದು ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು ಮೋದಿ.

ಇವೆಲ್ಲವೂ ನಮ್ಮ ಅಡಿಕ್ಷನ್‌ಗಳಾದರೆ, ವಾಟ್ಸ್‌ಆ್ಯಪ್‌ ಎಂಬ ನಿತ್ಯ ಸಂಗಾತಿಯನ್ನು ನಾವು ಏನೇನಕ್ಕೋ ಬಳಸಿಕೊಂಡಿದ್ದೇವೆ. ಕಳೆದ ಕೆಲವು ತಿಂಗಳುಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ವಾಟ್ಸ್‌ ಆ್ಯಪನ್ನು ವಿಲನ್‌ ಮಾಡಿವೆ. ಸುಳ್ಳು ಸುದ್ದಿಗಳು ಹಬ್ಬಿದ್ದಷ್ಟೇ ಅಲ್ಲ, ಅದನ್ನು ನಿಜವೆಂದು ನಂಬಿಕೊಂಡು ಜನರು ಸ್ಮಾರ್ಟ್‌ ಫೋನ್‌ ಬದಿಗಿಟ್ಟು ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಜನರನ್ನು ಸಾಯಿಸುವಷ್ಟರ ಮಟ್ಟಿಗೆ ಪರಿಣಾಮವಾಗಿದೆ.

Advertisement

ಮಕ್ಕಳ ಕಳ್ಳತನ ಸುಳ್ಳು ಸುದ್ದಿಯಂತೂ ಈಗಿನದ್ದಲ್ಲ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಕಾಲಕಾಲಕ್ಕೆ ಅಲ್ಲಲ್ಲಿ ಇದು ಉದ್ಭವಿಸುತ್ತಲೇ ಇರುತ್ತದೆ. ಆದರೆ ಈ ಬಾರಿ ಇದು ವಾಟ್ಸ್‌ಆ್ಯಪ್‌ ಜೊತೆಗೆ ತಳಕುಹಾಕಿಕೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ 15ಕ್ಕೂ ಹೆಚ್ಚು ಜನರನ್ನು ಮಕ್ಕಳ ಕಳ್ಳರು ಎಂದು ಆರೋಪ ಹೊರಿಸಿ ಥಳಿಸಿ ಹತ್ಯೆಗೈಯಲಾಗಿದೆ. ಇದಕ್ಕೆ ವಾಟ್ಸ್‌ಆ್ಯಪ್‌ ಕಾರಣ ಎಂಬುದು ಸರ್ಕಾರದ ವಾದ. ಸರ್ಕಾರಕ್ಕೆ ಈ ಒಟ್ಟು ಘಟನೆಯ ಹೊಣೆಯನ್ನು ವರ್ಗಾಯಿಸಬೇಕಿತ್ತು. ಅದನ್ನು ನೇರವಾಗಿ ವಾಟ್ಸ್‌ ಆ್ಯಪ್‌ಗೆ ಕಟ್ಟಿತು. ನಾವೇ ಅಭಿವೃದ್ಧಿಪಡಿಸಿದ ಟೆಕ್ನಾಲಜಿಯ ಮೇಲೆ ಇಂಥ ಆರೋಪ ಮಾಡುವುದು ಹೊಸತೇನಲ್ಲ.

ಎರಡು ವರ್ಷಗಳ ಹಿಂದೆ ಸೆಲ್ಫಿ ಕ್ರೇಜ್‌ ಕೂಡ ಇದೇ ರೀತಿ ಇತ್ತು. ಓಡುತ್ತಿರುವ ರೈಲಿನ ಎದುರು ನಿಂತು ಸೆಲ್ಫಿ ತೆಗೆದು
ಕೊಳ್ಳುವ ಸಾಹಸಕ್ಕೆ ಪಕ್ಕಾಗಿ ಹಳಿ ಮೇಲೆ ಬಿದ್ದವರು… ಜಲಪಾತದಲ್ಲಿ ಬೀಳುವ ನೀರನ್ನು ಮುಟ್ಟುವಂತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಿದ್ದವರು… ಗುಡ್ಡದ ತುದಿಯ ಮೇಲೆ ಶಾರುಖ್‌ ಖಾನ್‌ನಂತೆ ಕೈ ಅಗಲಿಸಿ ನಿಂತು ಸೆಲ್ಫಿ ತೆಗೆಯಲು ಹೋಗಿ ಆಯ ತಪ್ಪಿ ಬಿದ್ದವರು… ಹೀಗೆ ಸಾಲು ಸಾಲು ಸೆಲ್ಫ್ಹತ್ಯೆ ಪ್ರಕರಣಗಳು ವರದಿಯಾದವು. ಆದರೆ ಇಲ್ಲಿ ಮೊಬೈಲ್‌ ಮೇಲೆ ಜನರ ಆರೋಪ ಹರಿಯಲಿಲ್ಲ. ಬದಲಿಗೆ ಸೆಲ್ಫಿ ಎಂಬ ಹುಚನ್ನು ನಿಯಂತ್ರಿಸಬೇಕು ಎಂದಷ್ಟೇ ಕೂಗು ಕೇಳಿಬಂತು. ಇದಕ್ಕೆ ಪೂರಕವಾಗಿ ಜಲಪಾತಗಳ ಬುಡದಲ್ಲಿ, ಪರ್ವತಗಳ ಮೇಲೆ, ರೈಲ್ವೆ ನಿಲ್ದಾಣಗಳಲ್ಲಿ ನೋ ಸೆಲ್ಫಿ ಜೋನ್‌ ಫ‌ಲಕಗಳು ಬಂದವು. ಅಷ್ಟೇ ಏಕೆ, ಕಾಲೇಜಿನ ಕಾರಿಡಾರ್‌ಗಳಲ್ಲಿ, ಹಲವು ಸಾರ್ವಜನಿಕ ಸ್ಥಳಗಳಲ್ಲೂ ಇಂತಹ ಫ‌ಲಕಗಳು ನೇತಾಡಲು ಆರಂಭಿಸಿದವು.

ಆದರೆ ವಾಟ್ಸಾಪ್‌ನಲ್ಲಿ ಗ್ರೂಪ್‌ಗ್ಳಲ್ಲಿ ಹರಿದಾಡುವ ಹಸಿ ಸುಳ್ಳು, ಅರೆ ಸುಳ್ಳು ಸುದ್ದಿಗಳನ್ನು ಹೇಗೆ ಒರೆಗೆ ಹಚ್ಚಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಇದು ಹರಿದಾಡಲು ಕಾರಣವಾದ ವಾಟ್ಸ್‌ಆ್ಯಪ್‌ ಮೇಲೆ ಎಲ್ಲರ ಸಿಟ್ಟು ತಿರುಗಿತು. ಸರ್ಕಾರವಂತೂ ವಾಟ್ಸ್‌ಆ್ಯಪ್‌ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೊಬ್ಬಿರಿಯಿತು.

ವಾಸ್ತವ ಸಂಗತಿಯೆಂದರೆ ವಾಟ್ಸ್‌ಆ್ಯಪ್‌ ಕೇವಲ ಇಲ್ಲೊಂದು ವೇದಿಕೆಯಷ್ಟೇ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಸಂದೇಶಗಳು ಪ್ರಚೋದಿಸುತ್ತವೆ. ಹಾಗೆ ಪ್ರಚೋದನೆಗೆ ಒಳಗಾದವರು ಕಾನೂನು ಕೈಗೆತ್ತಿಕೊಳ್ಳುವುದು ವರ್ಚುವಲ್‌ ವೇದಿಕೆಯಲ್ಲಲ್ಲ. ಬದಲಿಗೆ ವಾಸ್ತವದಲ್ಲಿ. ಅಂದರೆ ವಾಟ್ಸ್‌ಆ್ಯಪ್‌ನ ಯಾವುದೋ ಗ್ರೂಪ್‌ಗ್ಳಲ್ಲಿ ಹರಿದಾಡಿದ ಸಂದೇಶಗಳು ವ್ಯಕ್ತಿಯ ಮನಸಿನಲ್ಲಿ ಅನುಮಾನದ ಬೀಜ ಬಿತ್ತುತ್ತವೆ. ಅವು ಮೊಳಕೆಯೊಡೆದು ಹೆಮ್ಮರವಾಗಿ ಬೀದಿಯಲ್ಲಿ ನರ್ತಿಸುತ್ತವೆ. ಜನರು ವಿವೇಚನೆಯ ಕೀ ಕಳೆದುಕೊಂಡಾಗ ಹೀಗಾಗುತ್ತವೆ. ವಾಟ್ಸ್‌ಆ್ಯಪ್‌ನಲ್ಲಿ ಬಂದಿರುವುದು ಸುಳ್ಳೋ ಸತ್ಯವೋ ಎಂಬುದನ್ನು ಜನರು ಯೋಚಿಸುವುದಿಲ್ಲ. ಇದಕ್ಕೆ ಮೂಲ ಕಾರಣ ಜನರ ವಿವೇಚನಾ ಶಕ್ತಿಯೇ ಹೊರತು ಆಧುನಿಕ ತಂತ್ರಜ್ಞಾನವಲ್ಲ.

ವಾಟ್ಸ್‌ಆ್ಯಪ್‌ಗ್ೂ ಸರ್ಕಾರಕ್ಕೂ ಇರುವ ಯುದ್ಧ ಎನ್‌ಕ್ರಿಪ್ಷನ್‌ನದ್ದು. ಒಂದು ಸಂದೇಶ ನೂರಾರು ಜನರ ಕೈ ಬದಲಿಸಿದರೆ ಅದನ್ನು ಮೊದಲು ಕಳುಹಿಸಿದ್ದು ಯಾರು ಎಂಬ ಮೂಲ ಹುಡುಕಲು ಎನ್‌ಕ್ರಿಪ್ಷನ್‌ನಿಂದ ಸಾಧ್ಯವಾಗುವುದಿಲ್ಲ. ಯಾಕೆಂದರೆ ನಮ್ಮ ಮೊಬೈಲ್‌ನಲ್ಲೇ ಸಂದೇಶ ಎನ್‌ಕ್ರಿಪ್ಷನ್‌ ಆಗುವುದರಿಂದ ವಾಟ್ಸ್‌ಆ್ಯಪ್‌ ಸರ್ವರ್‌ಗೆ ನಮ್ಮ ಸಂದೇಶ ತೆರಳುವಾಗ ನಾವು ಕಳುಹಿಸಿದ ಪಠ್ಯ ಕೋಡ್‌ಗಳಾಗಿ ಬದಲಾಗುತ್ತವೆ ಮತ್ತು ಅವುಗಳನ್ನು ಓದಲಾಗದು. ಅಷ್ಟೇ ಅಲ್ಲ, ಇದನ್ನು ಇಂತಹ ವ್ಯಕ್ತಿಯೇ ಕಳುಹಿಸಿದ್ದು ಎಂಬುದನ್ನು ಕಂಡುಹಿಡಿಯುವುದು ವಾಟ್ಸ್‌ಆ್ಯಪ್‌ ಸರ್ವರ್‌ಗೂ ಅಸಾಧ್ಯ. ಇದೇ ಕಾರಣಕ್ಕೆ ವಾಟ್ಸ್‌ಆ್ಯಪ್‌ ಮತ್ತು ಸರ್ಕಾರದ ಮಧ್ಯೆ ತಿಕ್ಕಾಟ ನಡೆಯುತ್ತಿದೆ. ಸಂದೇಶವನ್ನು ಮೂಲದಲ್ಲಿ ಕಳುಹಿಸಿದವರು ಯಾರು ಎಂಬುದನ್ನು ಪತ್ತೆಮಾಡಿ ಎಂದು ವಾಟ್ಸ್‌ಆ್ಯಪ್‌ಗೆ ಸರ್ಕಾರ ಹೇಳಿದರೆ, ಹೀಗೆ ಮಾಡಿದರೆ ನಾವು ಗ್ರಾಹಕರ ವಿಶ್ವಾಸ ಕಳೆದುಕೊಳ್ಳುತ್ತೇವೆ 
ಎಂದು ವಾಟ್ಸ್‌ಆ್ಯಪ್‌ ಹೇಳುತ್ತಿದೆ. ಎರಡೂ ಕಡೆಯ ವಾದವೂ ಸರಿಯೇ ಎಂದು ಮೂರನೆಯವರಿಗೆ ಭಾಸವಾಗುತ್ತದೆ. ಯಾಕೆಂದರೆ ನಾವು ವಾಟ್ಸ್‌ ಆ್ಯಪ್‌ ನಮ್ಮ ಮೇಲೆ ಕಣ್ಗಾವಲು ಇಡುವುದಿಲ್ಲ ಎಂಬ ಕಾರಣಕ್ಕೇ ವಾಟ್ಸ್‌ಆ್ಯಪ್‌ ಮೇಲೆ ನಮಗೆ ವಿಶ್ವಾಸ ಮೂಡುತ್ತದೆ. ಒಂದು ವೇಳೆ ಹಾಗಿಲ್ಲ ಎಂದಾದರೆ ನಾವು ವಿಪರೀತ ಎಚ್ಚರದಿಂದ ಮಾತನಾಡು ತ್ತೇವೆ. ವಾಟ್ಸ್‌ ಆ್ಯಪ್‌ ಹೆಚ್ಚು ಹೆಚ್ಚು ಕಠಿಣವಾದಷ್ಟೂ ಅದರಲ್ಲಿರುವ ಆಪ್ತತೆ ಹೊರಟು ಹೋಗುತ್ತದೆ.

ಮೂಲ ಹುಡುಕುವುದರಾಚೆಗೆ ಸರ್ಕಾರವಾಗಲೀ, ವಾಟ್ಸ್‌ ಆ್ಯಪ್‌ ಆಗಲೀ ಮಾಡಬಹುದಾದ ಕ್ರಮಗಳು ಹಲವಾರಿವೆ. ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಕಠಿಣವಾಗಿಸುವುದು ಮೊದಲ ಆದ್ಯತೆಯಾಗಬೇಕು.

ಬೀದಿಯಲ್ಲಿ ಹೋಗುವವನ್ನು ಅನುಮಾನಿಸಿ ಹೊಡೆಯುವುದನ್ನು ಹಲವು ಬಾರಿ ಪೊಲೀಸರೇ ಪ್ರಚೋದಿಸುತ್ತಾರೆ. ಅಷ್ಟೇ ಯಾಕೆ, ಕಳ್ಳನನ್ನು ಹಿಡಿದು ಪೊಲೀಸರೇ ಬೀದಿಯಲ್ಲಿ ಹೊಡೆಯುವುದು ನಮಗೆ ಹೊಸತೂ ಅಲ್ಲ.

ಇವೆಲ್ಲವೂ ಜನರನ್ನು ಪ್ರಚೋದಿಸುತ್ತವೆ. ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕಿದೆ. ಅಷ್ಟೇ ಅಲ್ಲ, ಬೀದಿಯಲ್ಲಿ ಹೋಗುವವನನ್ನು ಹೊಡೆದು ತಲೆ ತಪ್ಪಿಸಿಕೊಳ್ಳಲಾಗದು ಎಂಬ ಭೀತಿಯೂ ಹುಟ್ಟಬೇಕು. ಆದರೆ ಸದ್ಯಕ್ಕಂತೂ ಸಾಮೂಹಿಕ ಥಳಿತ, ಗಲಭೆ ಪ್ರಕರಣಗಳಲ್ಲಿ ತೊಡಗಿಸಿಕೊಂಡವರಿಗೆ ಕಠಿಣ ಶಿಕ್ಷೆಯಾದ ಉದಾಹರಣೆಗಳು ತುಂಬಾ ಕಡಿಮೆ. ಬದಲಿಗೆ ಇದಕ್ಕೆ ಕಾರಣವಾದ ವಿಷಯ, ವಾಹಕಗಳನ್ನೇ ಹೊಣೆ ಮಾಡಿ ಸರ್ಕಾರಗಳು ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತವೆ.

ಇನ್ನು ವಾಟ್ಸ್‌ಆ್ಯಪ್‌, ಘಟನೆಗೆ ಹೊಣೆ ಹೊತ್ತುಕೊಳ್ಳದಿದ್ದರೂ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. ಸರ್ಕಾರದ ಜೊತೆ ಕೆಲಸ ಮಾಡುವುದು ಹಾಗೂ ಜನರಿಗೆ ಸಂದೇಶಗಳನ್ನು ಕಳುಹಿಸಲು ಇನ್ನಷ್ಟು ಆಯ್ಕೆಗಳನ್ನು ನೀಡುವುದು ಆದ್ಯತೆಯಾಗ ಬೇಕು. ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಫಿಲ್ಟರ್‌ ಇಲ್ಲದೇ ಸಂದೇಶ ಗಳನ್ನು ಕಳುಹಿಸಲು ಅವಕಾಶ ಮಾಡಿಕೊಡುವುದರ ಬದಲಿಗೆ, ಟೆಲಿಗ್ರಾಮ್‌ ಅಪ್ಲಿಕೇಶನ್‌ನಲ್ಲಿದ್ದಂತೆಯೇ ಆಯ್ದ ಜನರಿಗಷ್ಟೇ ಸಂದೇಶಗಳನ್ನು ಕಳುಹಿಸುವ ಆಯ್ಕೆಗಳನ್ನು ಹಿಂದೆಯೇ ಕಲ್ಪಿಸ ಬಹುದಿತ್ತು. ಸದ್ಯಕ್ಕಂತೂ ಗ್ರೂಪ್‌ಗ್ಳಲ್ಲಿ ಸಂದೇಶ ಕಳುಹಿಸದಂತೆ ಸದಸ್ಯರನ್ನು ನಿರ್ಬಂಧಿಸುವ ಆಯ್ಕೆ, ಫಾರ್ವರ್ಡ್‌ ಮಾಡಿದ ಸಂದೇಶಗಳಿಗೆ ಫಾರ್ವರ್ಡ್‌ ಎಂಬ ಟ್ಯಾಗ್‌ ಪ್ರದರ್ಶಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇನ್ನು ಸುದ್ದಿಗಳ ಸತ್ಯಾಸತ್ಯತೆ ಪತ್ತೆ ಮಾಡುವ ಪ್ರಯತ್ನವನ್ನೂ ಮಾಡುತ್ತಿದ್ದೇವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇಷ್ಟಾಗಿಯೂ ವಾಟ್ಸ್‌ಆ್ಯಪ್‌ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿತ್ತೇ ಎಂದು ನಮಗೆ ಅನಿಸುವುದು ಸಹಜ. ಆದರೆ ಸರ್ಕಾರವಂತೂ ವಾಟ್ಸ್‌ಆ್ಯಪ್‌ ಮೇಲೆ ಹೊಣೆ ಹೊರಿಸಿದ್ದನ್ನು ಹೊರತುಪಡಿಸಿದರೆ ತಳಮಟ್ಟದಲ್ಲಿ ಬದಲಾವಣೆಗೆ ಕಾರಣವಾಗಬಹುದಾದ ಯಾವ ಕ್ರಮಗಳನ್ನೂ ಇನ್ನೂ ಕೈಗೊಂಡಿಲ್ಲ. ಹೀಗಾಗಿ ಜನರು ಇನ್ನೂ ವಾಟ್ಸಾಪ್‌ ಸಂದೇಶಗಳನ್ನು ನಂಬುತ್ತಲೂ ಇದ್ದಾರೆ. ಸದ್ಯ ಮಕ್ಕಳ ಕಳ್ಳರ ವಿಚಾರ ಹರಡುತ್ತಿದೆ. ಮುಂದೊಂದು ದಿನ ಇನ್ನೊಂದು ವಿಷಯ ಹರಡಿ ಜನರು ಮತ್ತೂಂದೇನೋ ಮಾಡಲು ಮುಂದಾಗುವುದಂತೂ ತಪ್ಪದು ಎನಿಸುವ ಸ್ಥಿತಿ ಸದ್ಯಕ್ಕಿದೆ.

– ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next