Advertisement

ಯಾವ ಜನ್ಮದ ಮೈತ್ರಿ !

06:00 AM Jul 13, 2018 | Team Udayavani |

ನಾನು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದನ್ನು ಓದುತ್ತಿದ್ದೆ. ಸರ್ಕಾರಿ ಶಾಲೆಯೊಂದರಲ್ಲಿ ಅಧ್ಯಾಪಕರ ವರ್ಗಾವಣೆಯಾಗುತ್ತದೆ. ಆಗ ಅತೀ ಪ್ರೀತಿಪಾತ್ರರಾದ ಶಿಕ್ಷಕರನ್ನು ಕಳಿಸಲು ಒಪ್ಪದೆ ಮಕ್ಕಳೆಲ್ಲ ಆ ಶಿಕ್ಷಕರಿಗಾಗಿ ಕಣ್ಣೀರು ಹಾಕುತ್ತಾರೆ. ಅವರು ಶಾಲೆ ಬಿಟ್ಟು ಹೊರಹೋಗದಂತೆ ತಡೆ ಹಿಡಿಯುತ್ತಾರೆ, ಬೇಡಿಕೊಳ್ಳುತ್ತಾರೆ. ಮಕ್ಕಳೊಂದಿಗೆ ಶಿಕ್ಷಕರೂ ಕಣ್ಣೀರಾಗುತ್ತಾರೆ. ಅದು ಆ ಮಕ್ಕಳು ಶಿಕ್ಷಕರ ಮೇಲೆ ಇಟ್ಟಿರುವ ಪ್ರೀತಿ, ಗೌರವ. ಅಬ್ಟಾ! ರಕ್ತ ಸಂಬಂಧವನ್ನೂ ಮೀರಿಸಿದ ಗುರು -ಶಿಷ್ಯರ ಸಂಬಂಧ. ಇದನ್ನು ಕಂಡಾಗ ನನಗೆ ನನ್ನ ಶಾಲಾ-ಕಾಲೇಜು ಜೀವನದಲ್ಲಿ ಸಿಕ್ಕ ಶಿಕ್ಷಕರು, ಅದರಲ್ಲೂ ಅತೀ ಪ್ರೀತಿಪಾತ್ರರಾದ ಶಿಕ್ಷಕರೆಲ್ಲಾ ಒಮ್ಮೆ ಕಣ್ಣ ಮುಂದೆ ಸುಳಿದು ಹೋದರು.

Advertisement

ಈ ವಿದ್ಯಾರ್ಥಿ ಜೀವನ ಅನ್ನುವುದು ಒಂದು ದೀರ್ಘ‌ವಾದ ಪ್ರಯಾಣ. ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದಿರುವುದು ಶಾಲೆಯಲ್ಲಿ, ಕಾಲೇಜಲ್ಲಿ. ಒಂದೊಂದು ಹೆಜ್ಜೆಯಲ್ಲೂ ನಮ್ಮೊಂದಿಗೆ ನಮ್ಮ ಹೆತ್ತವರು ಮಾತ್ರವಲ್ಲದೆ, ನಮ್ಮ ಶಿಕ್ಷಕರೂ ಇರುತ್ತಾರೆ. ಅವರೇ ನಮ್ಮ ರೋಲ್‌ ಮಾಡೆಲ್‌ ಆಗಿರುತ್ತಾರೆ. ನನಗೆ ಮೊದಲು ಬರವಣಿಗೆ ಮತ್ತು ಓದುವುದರಲ್ಲಿ ಆಸಕ್ತಿ ತರಿಸಿದವರು ನನ್ನ ಪ್ರೀತಿಯ ರಾಜು ಮಾಸ್ಟರರು. ಐದನೇ ತರಗತಿಯಿಂದ ಏಳನೇ ತರಗತಿಯವರೆಗೆ ನನಗೆ ಕನ್ನಡ ಪಾಠ ಮಾಡಿದ್ದು ಅವರು. ಅಲ್ಲಿಯ ತನಕ ಕಬ್ಬಿಣದ ಕಡಲೆಯಾಗಿದ್ದ ಕನ್ನಡ ಅದು ಯಾಕೋ ಅವರು ಬಂದ ಮೇಲೆ ಸಿಹಿ ಲಡ್ಡು ಆದಂತಾಯಿತು. ಯಾವತ್ತೂ ನಾನು ಕನ್ನಡವನ್ನು ಅಷ್ಟೊಂದು ಪ್ರೀತಿಸಿರಲಿಲ್ಲ. ಆದರೆ ಅವರು ನನಗೆ ಪಾಠ ಮಾಡಲು ಶುರು ಮಾಡಿದ ಮೇಲೆ ಕನ್ನಡದ ಮೇಲಿನ ಪ್ರೀತಿ ಇಂದಿಗೂ ಕಡಿಮೆಯಾಗಲಿಲ್ಲ. ಕನ್ನಡದಲ್ಲಿಯೇ ಕಥೆ ಬರೆಯಲು, ನಿರೂಪಣೆ ಮಾಡಲು, ಏಕಪಾತ್ರಾಭಿನಯ ಮಾಡಲು, ನಾಟಕಗಳನ್ನು, ಭಾಷಣ ಮಾಡಲು, ನನಗೆ ಸ್ಫೂರ್ತಿ ತುಂಬಿದವರು ಅವರು. ಅವರು ಇಂದಿಗೂ ನನ್ನ ಎಲ್ಲಾ ಚಟುವಟಿಕೆಗಳಿಗೆ ಹಾರೈಸುತ್ತಾರೆ, ಹುರಿದುಂಬಿಸುತ್ತಾರೆ. ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಇಂದಿಗೂ ನನ್ನೊಂದಿಗೆ ಸಂಪರ್ಕದಲ್ಲಿದ್ದು ನನ್ನೆಲ್ಲಾ ಕೆಲಸಗಳನ್ನು ಗಮನಿಸಿ ಶುಭ ಹಾರೈಸಿದಾಗ ನನಗೆ ಅತ್ಯಂತ ಸಂತೋಷವಾಗುತ್ತದೆ. ಅವರು ಬರೀ ಶಿಕ್ಷಕರಷ್ಟೇ ಅಲ್ಲದೆ ನನಗೊಬ್ಬರು ಒಳ್ಳೆಯ ಗೆಳೆಯರಂತೆ ಇದ್ದಾರೆ. ಮುಂದೆ  ನನ್ನ ಭವಿಷ್ಯ ಹೀಗಿರಬೇಕು ಎಂದು ಚಿಂತಿಸಿದವರಲ್ಲಿ ಅವರೂ ಒಬ್ಬರು.

ಏಳನೇ ತರಗತಿ ಕಳೆದು ಎಂಟನೇ ತರಗತಿಗೆ ಸೇರಿದಾಗ ನನಗೆ ಸಿಕ್ಕ ಇನ್ನೊಬ್ಬರು ಅದ್ಭುತ ಅಧ್ಯಾಪಕರೆಂದರೆ ಫಾ| ರೋಲ್ವಿನ್‌. ಅವರು ಗಣಿತವನ್ನು ಅತ್ಯಂತ ಸುಲಭವಾಗಿ ಹೇಳಿ ಕೊಡುತ್ತಿದ್ದವರು. ಅವರ ಮಾತು, ಗಾಂಭಿರ್ಯ, ನಡವಳಿಕೆ ಎಲ್ಲಾ ಪ್ರತಿಯೊಬ್ಬ ವಿದ್ಯಾರ್ಥಿಗೂ ಬಹಳ ಇಷ್ಟವಾಗಿಬಿಟ್ಟಿತ್ತು. ಪ್ರತಿಯೊಂದು ಕಾರ್ಯಕ್ರಮದಲ್ಲೂ ಅತ್ಯಂತ ಉತ್ಸಾಹದಿಂದ ಮಕ್ಕಳೊಂದಿಗೆ ತಾವು ಮಗುವಾಗಿ ನಮ್ಮೊಂದಿಗೆ ಇರುತ್ತಿದ್ದರು. ಅವರು ನಮ್ಮೊಂದಿಗೆ ಇದದ್ದು ಬರೀ ಒಂದೇ ವರುಷ. ಅವರು ನಮ್ಮ ಶಾಲೆಯನ್ನು ಬಿಟ್ಟು ಹೋದಾಗ ನಮಗೂ ಹೀಗೆ ಬೇಸರವಾಗಿತ್ತು. ನಾನು ನನ್ನ ಉನ್ನತ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಹಾಸ್ಟೆಲ್‌ನಲ್ಲಿ ಇದ್ದೆ. ಅವರು ಆಗಾಗ ಬಂದು ನನ್ನನ್ನು ಮಾತನಾಡಿಸಿ ಕೈಗೊಂದು ಚಾಕ್ಲೇಟ್‌ ಕೊಟ್ಟು ಹೋದಾಗ ನನಗೆಷ್ಟು ಸಂತೋಷವಾಗುತ್ತಿತ್ತು ಎಂದರೆ ನನ್ನಂಥ ಅದೃಷ್ಟವಂತೆ ಇನ್ಯಾರೂ ಇಲ್ಲ ಎಂದು ಅನಿಸುತ್ತಿತ್ತು. ಗೆಳತಿಯರೆಲ್ಲ ನನ್ನ ಬಳಿ “ಅವರು ಯಾರು ನಿನ್ನ ಮಾವನ, ಅಣ್ಣನಾ?’ ಎಂದು ಕೇಳಿದಾಗ ನಾನು, “ಅಲ್ಲ, ಅವರು ನನಗೆ ವಿದ್ಯೆ ಹೇಳಿಕೊಟ್ಟ ಶಿಕ್ಷಕರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ.  ನನಗೆ ಅಂತಹ ಅದ್ಭುತವಾದ ಶಿಕ್ಷಕರು ಸಿಕ್ಕರಲ್ಲಾ ಎಂಬ ಹೆಮ್ಮೆ ಖಂಡಿತವಾಗಲೂ ಇದೆ.

ಹತ್ತನೇ ತರಗತಿಯನ್ನು ನಾನು ಕಾಸರಗೋಡಿನ ಶಾಲೆಯಲ್ಲಿ ಮುಗಿಸಿದಾಗ ಮುಂದಿನ ನನ್ನ ಕಾಲೇಜು ಜೀವನ ಎಲ್ಲಿ ಅಂತ ಚಿಂತಿಸುತ್ತಿ¨ªೆ. ಆಗ ನನಗೆ ನನ್ನ ಒಡಹುಟ್ಟಿದ ಅಣ್ಣನಂತೆ ನನ್ನ ಬೆನ್ನಿಗೆ ನಿಂತವರು ಅದೇ ರಾಜು ಮಾಸ್ತರರು. ಇಂತಹ ಕಾಲೇಜು ಸೇರು, ಅಲ್ಲಿ ಇಂತಹ ಅವಕಾಶಗಳಿವೆ, ನಿನ್ನ ಪ್ರತಿಭೆಗೆ ಪ್ರೋತ್ಸಾಹ ಸಿಗುತ್ತದೆ ಎಂದು ಹುರಿದುಂಬಿಸಿದವರು ಅವರೇ. ಹಾಗೆಯೇ ಕೈ ತುಂಬಾ ಅಂಕಗಳನ್ನು ಪಡೆದುಕೊಂಡು ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದನ್ನು ಸೇರಿದೆ. ಕಾಲೇಜು ಹಾಸ್ಟೆಲ್‌ ಒಂದರಲ್ಲಿ ಇದ್ದ ನನಗೆ ಶುರುವಲ್ಲಿ ಕಾಲೇಜು ಕಷ್ಟ ಎನಿಸಿತು. ಹಳ್ಳಿಯಿಂದ ಪಟ್ಟಣ ಸೇರಿದ ನನಗೆ ಪಟ್ಟಣದಲ್ಲಿ ಕಾಲೇಜು, ಹಾಸ್ಟೆಲ್‌ ಎಲ್ಲಾಅಪರಿಚಿತ ಎನಿಸಿತು. ಅಲ್ಲಿಯವರೆಗೂ ಒಂದು ದಿನವೂ ಅಪ್ಪ ಅಮ್ಮನನ್ನು ಬಿಟ್ಟಿರದ ನನಗೆ ಕಾಲೇಜು ಜೀವನ ಬಲು ದುಸ್ತರ ಎನಿಸಿದ್ದು ಸುಳ್ಳಲ್ಲ. ಆಗ ನನಗೆ ಧೈರ್ಯ ತುಂಬಿದವರು ನನ್ನ ಕಾಲೇಜು ಲೆಕ್ಚರರ್‌ ಡಾ| ಉದಯ್‌ ಕುಮಾರ್‌ ಸರ್‌. ಅತ್ಯದ್ಭುತವಾಗಿ ಹಿಂದಿ ಹೇಳಿ ಕೊಡುತ್ತಿದ್ದ ಅವರು ನನಗೆ ನಟನೆಯಲ್ಲಿ ಬಹಳ ಆಸಕ್ತಿ ಇದೆ ಎಂಬುದನ್ನು ಮೊದಲು ಗುರುತಿಸಿದರು. ಅವರಿಂದಾಗಿಯೇ ನನ್ನಂತೆೆ ಇದ್ದ ಕೆಲ ವಿದ್ಯಾರ್ಥಿನಿಯರನ್ನೆಲ್ಲ ಒಂದು ಗುಂಪು ಮಾಡಿ, ನಾಟಕದ ಒಂದು ತಂಡವನ್ನೇ ಕಟ್ಟಿ ಲೆಕ್ಕವಿಲ್ಲದ‌ಷ್ಟು ಸಾಮಾಜಿಕ ನಾಟಕ, ರಂಗ ನಾಟಕ, ಹಾಸ್ಯ ನಾಟಕ, ಬೀದಿ ನಾಟಕಗಳನ್ನು, ನಿರೂಪಣೆಯನ್ನು ಮಾಡಲು ಸಾಧ್ಯವಾದದ್ದು. ಪಿಯುಸಿಯಲ್ಲಿ ಸಿಕ್ಕ ಅವರು ಡಿಗಿ ಮುಗಿಯುವವರೆಗೂ ನಮ್ಮೊಂದಿಗೇ ಇದ್ದರು. ನಮ್ಮ ಎನ್‌ಎಸ್‌ಎಸ್‌ ಮುಖ್ಯಸ್ಥರಾಗಿಯೂ ಇದ್ದರು. ನಿಜ ಹೇಳಬೇಕೆಂದರೆ ಅವರೇ ಮುಖ್ಯಸ್ಥರು ಎಂದು ತಿಳಿದು ನಾವೆಲ್ಲಾ ಎನ್‌ಎಸ್‌ಎಸ್‌ ವಿದ್ಯಾರ್ಥಿನಿಯರಾಗಿ ಸೇರಿಕೊಂಡಿದ್ದೆವು.  ಇಂದಿಗೂ ನಮ್ಮ ಪ್ರತಿಯೊಂದು ಚಟುವಟಿಕೆಗಳಿಗೂ ಬೆನ್ನೆಲುಬಾಗಿ ನಿಲ್ಲುತ್ತಾರೆ. ತಮ್ಮಿಂದ ಆಗುವಷ್ಟು ಸಹಾಯ ನಮಗೆ ಖಂಡಿತ ಮಾಡುತ್ತಾರೆ. ಅವರು ನಮಗೆ ಮಾರ್ಗದರ್ಶಕರು ಮಾತ್ರವಲ್ಲ ಆಪ್ತ ಸಮಾಲೋಚಕರೂ ಹೌದು.

ಡಿಗ್ರಿಯಲ್ಲಿ ನನಗೆ ಸಿಕ್ಕ ಇನ್ನೊಬ್ಬ ಅದ್ಭುತ ಶಿಕ್ಷಕರೆಂದರೆ ಡಾ| ಸಂಪೂರ್ಣಾನಂದ ಬಳ್ಕೂರು ಇವರು. ನಮ್ಮ ನಟನಾಸಕ್ತಿ, ನಮ್ಮ ಪ್ರತಿಭೆಯನ್ನು ಮೆಚ್ಚಿ ಹೆಚ್ಚು ಹೆಚ್ಚು ರಂಗ ನಾಟಕಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡಿದರು. ನನ್ನನ್ನು ಆಕಾಶವಾಣಿ ಕಲಾವಿದೆಯನ್ನಾಗಿ ಮಾಡಲು ನೆರವಾದವರು. “ಆಕರಂ’ ಎಂಬ ನಾಟಕ ತಂಡವನ್ನು ಕಟ್ಟಿ ರಂಗನಾಟಕ ಪ್ರದರ್ಶನಗಳ ಹೆಸರಲ್ಲಿ ನಮ್ಮ ತಂಡವನ್ನು ಇಡೀ ಕರ್ನಾಟಕವನ್ನು ಸುತ್ತಿಸಿದರು. ನೀನು ಬರೆಯುವುದು ಮಾತ್ರವಲ್ಲ ಹೆಚ್ಚೆಚ್ಚು ಓದಬೇಕು ಎಂದು ಅದ್ಭುತ ಬರಹಗಾರರ, ಸಾಹಿತಿಗಳ ಪುಸ್ತಕಗಳನ್ನು ನನ್ನ ಕೈಗಿತ್ತವರು. ವಿದ್ಯಾಭ್ಯಾಸ ಮುಗಿಸಿ ಮುಂದೇನು ಎಂಬ ಯೋಚನೆಯಲ್ಲಿರುವ ನನಗೆ ಒಳ್ಳೆಯ ಮಾರ್ಗದರ್ಶಕರಾಗಿ ನನ್ನೊಂದಿಗಿರುವವರು. ಇಂತಹ ಅದ್ಭುತ ಶಿಕ್ಷಕರನ್ನು ಪಡೆದ ನಾನು ನಿಜವಾಗಿಯೂ ಅದೃಷ್ಟವಂತೆ. ಯಾವ ಜನ್ಮದ ಪುಣ್ಯವೋ ಏನೋ ಈ ಜನ್ಮದಲ್ಲಿ ನನಗೆ ಇಂತಹ ಶಿಕ್ಷಕರು ಸಿಕ್ಕರು.                                                                                                                             
ಪಿನಾಕಿನಿ ಪಿ. ಶೆಟ್ಟಿ
ಸ್ನಾತಕೋತರ ಪದವಿ, ಕೆನರಾ ಕಾಲೇಜು,  ಮಂಗಳೂರು 

Advertisement
Advertisement

Udayavani is now on Telegram. Click here to join our channel and stay updated with the latest news.

Next