Advertisement

ಕಲಾ ವಿಭಾಗ: ಇಷ್ಟಪಟ್ಟು ಕಲಿತರೆ ಅಪರಿಮಿತ ಅವಕಾಶ

12:51 AM May 05, 2019 | Sriram |

ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಮುಂದಿನ ಶಿಕ್ಷಣ ಅವಕಾಶಗಳ ಆಯ್ಕೆಯಲ್ಲಿರುವವಿದ್ಯಾರ್ಥಿಗಳಿಗೆ ಕೆರಿಯರ್‌ ಮಾರ್ಗದರ್ಶನ ನೀಡುವ ಸದುದ್ದೇಶದಿಂದ “ಉದಯವಾಣಿ’ ಪತ್ರಿಕೆಯು ಶನಿವಾರ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ “ಶ್ರೀ ಭುವನೇಂದ್ರ’ ಸಭಾಭವನದಲ್ಲಿ “ಪಿಯುಸಿ ಬಳಿಕ ಮುಂದೇನು’ ಎಂಬ ವಿಷಯವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ತಮ್ಮ ಪ್ರಶ್ನೆ, ಗೊಂದಲಗಳನ್ನು ಪರಿಣತರ
ಬಳಿ ಕೇಳಿ ಬಗೆಹರಿಸಿಕೊಂಡರು.

Advertisement

ಶೇ. 75ರಷ್ಟು ಉದ್ಯೋಗಾವಕಾಶಗಳಿಗೆ ಮಾನವ ಕೌಶಲ, ಸಂವಹನ ಸಾಮರ್ಥ್ಯ, ಸಂಘಟನಾ ಚತುರತೆ ಇದ್ದರೆ ಸಾಕು. ಕಲಾ ವಿಭಾಗದಲ್ಲಿ ಅವಕಾಶವಿಲ್ಲ. ಬಿ.ಎ. ಕೋರ್ಸ್‌ಗೆ ಭವಿಷ್ಯ ಇಲ್ಲ ಎಂಬ ಮಾತುಗಳು ಸರಿಯಲ್ಲ. ಕಲಾ ವಿಷಯದಲ್ಲಿ ಅಪರಿಮಿತ ಅವಕಾಶಗಳಿವೆ. ಅದನ್ನು ಇಷ್ಟಪಟ್ಟು ಕಲಿಯಬೇಕು. ಇರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸು ಸಾಧಿಸಬೇಕು.

ಅವಕಾಶಗಳ ಬಗ್ಗೆ ಅರಿವಿರಲಿ
ಕಲಾ ವಿಭಾಗದಲ್ಲಿ ದೇಶದಲ್ಲಿ 30ಕ್ಕೂ ಅಧಿಕವಿಷಯಗಳಲ್ಲಿ ಅಧ್ಯಯನ ಮಾಡಲು ಅವಕಾಶ ವಿದೆ. ಮಂಗಳೂರು ವಿಶ್ವವಿದ್ಯಾನಿಯಲದಲ್ಲಿ 54 ಬೇರೆ, ಬೇರೆ ಕಾಂಬಿನೇಶನ್‌ಗಳಿವೆ. ಪಿಯುಸಿ ಮಾಡಿದ ಬಳಿಕ 5 ವರ್ಷಗಳ ಎಲ್‌ಎಲ್‌ಬಿ ಶಿಕ್ಷಣ ಪಡೆದರೆ ನ್ಯಾಯವಾದಿ, ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಕ್ಷೇತ್ರವನ್ನು ಸೇರಬಹುದು. ಕಂಪೆನಿಗಳಿಗೆ ಕಾನೂನು ಸಲಹೆಗಾರರಾಗಬಹುದು. ಬಿಎ ಪದವಿ ಬಿಎಡ್‌ ಮಾಡಿ ಶಿಕ್ಷಕ ವೃತ್ತಿ ಅಥವಾ ಎಂಎ ಪದವಿ ಪೂರೈಸಿ ಕಾಲೇಜು ಉಪನ್ಯಾಸಕ
ರಾಗಬಹುದು, ಯುಪಿಎಸ್‌ಸಿ, ಕೆಎಎಸ್‌, ಕೆಪಿಎಸ್‌ ಸಹಿತ ಸರಕಾರಿ ಸೇವೆಗೆ ಸೇರ್ಪಡೆಯಾಗಬಹುದು. ಬಿಎಸ್‌ಡಡಬ್ಲ್ಯೂ ಎಂಎಸ್‌ಡಡಬ್ಲ್ಯೂ ಬಿಬಿಎ, ಬಿಎಚ್‌ಎಂ,ಬಿಎ ಎಚ್‌ಆರ್‌ಡಿ ಸೇರಿದಂತೆ ಉದ್ಯೋಗಾವಕಾಶಗಳನ್ನು ಹೊಂದಿರುವ ವಿವಿಧ ಕೋರ್ಸುಗಳಿವೆ. ಬಿ.ವಿಒಸಿ ಎಂಬ ಹೊಸ ಕೋರ್ಸ್‌ ಪರಿಚಯಿಸಲಾಗಿದೆ.

ಬೇಡಿಕೆಗಳು
ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಅದರಲ್ಲಿರುವ ಅವಕಾಶಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕು. ಇದು ಮುಂದಕ್ಕೆ ಆಯ್ಕೆ ಮತ್ತು ಭವಿಷ್ಯದ ಬಗ್ಗೆ ನಿರ್ಧರಿಸಲು ಅನು ಕೂಲವಾಗುತ್ತದೆ. ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಪತ್ರಿಕೋದ್ಯಮ, ಶಿಕ್ಷಣ ಕ್ಷೇತ್ರ, ಆಪ್ತ ಸಮಾಲೋಚನೆ, ವಕೀಲಿ ವೃತ್ತಿ, ನ್ಯಾಯಾಂಗ, ಮಾನವ ಸಂಪನ್ಮೂಲ ಕ್ಷೇತ್ರ, ಹೊಟೇಲ್‌ ಮ್ಯಾನೇಜ್‌ಮೆಂಟ್‌, ಸರಕಾರಿ ಸೇವೆ, ಗ್ರಂಥಾಲಯ ವಿಜ್ಞಾನ,ಮತ್ತಿತರ ಕ್ಷೇತ್ರಗಳಲ್ಲಿ ಕಲಾ ವಿಭಾಗದ ಪದವೀಧರರಿಗೆ ವಿಪುಲ ಅವಕಾಶಗಳಿವೆ. ತಮಿಳುನಾಡು ಮತ್ತು ಹೊಸದಿಲ್ಲಿ, ಕೇರಳ ರಾಜ್ಯಗಳಲ್ಲಿ ಕಲಾವಿಭಾಗದ ಪದವಿ ತರಗತಿಗಳಿಗೆ ಪ್ರವೇಶ ಪಡೆಯಲು ಕನಿಷ್ಠ ಶೇ.93 ಅಂಕಗಳು ಬೇಕು. ಇದು ಕಲಾವಿಭಾಗಕ್ಕಿರುವ ಪ್ರಾಮುಖ್ಯವನ್ನು ಹೇಳುತ್ತದೆ.

ಸ್ಪಷ್ಟ ಗುರಿ ಇರಲಿ
ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ಪಷ್ಟ ಗುರಿ ಇರಬೇಕು. ಏನು ಕಲಿಯಬೇಕು, ಯಾಕೆ ಕಲಿಯಬೇಕು, ಹೇಗೆ ಕಲಿಯಬೇಕು ಮತ್ತು ಎಷ್ಟು ಕಲಿಯಬೇಕು ಎಂಬುದರ ಅರಿವು ಇರಬೇಕು. ಬಲ್ಲವರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು.ಆಗ ಮುಂದಿನ ದಾರಿ ಸುಲಲಿತವಾಗುತ್ತದೆ.

Advertisement

–ಡಾ| ನೋರ್ಬರ್ಟ್‌ ಲೋಬೋ
ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ,. ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next