ಮನುಷ್ಯನಿಗೆ ತನ್ನನ್ನು ತಾನು ವಿಮರ್ಶಿಸಿಕೊಳ್ಳುವ ಶಕ್ತಿಯಿದೆ, ಅವಕಾಶಗಳಿವೆ. ಇವು ಬೇರೆ ಪ್ರಾಣಿಗಳಿಗೆ ಇಲ್ಲ. ಇವುಗಳಿಂದ ತನ್ನ ಅಜ್ಞಾನವನ್ನು ಮನುಷ್ಯ ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲ. ಪ್ರಯತ್ನ ಪಟ್ಟರೆ ತನ್ನ ಅಜ್ಞಾನದ ಮಿತಿಯಿಂದ ಹೊರಬರಬಲ್ಲ.
ಅಜ್ಞಾನವೆಂದರೆ, “ಜ್ಞಾನವಿಲ್ಲದಿರುವಿಕೆ’ ಎಂದರ್ಥವಲ್ಲ. “ಜ್ಞಾನಕ್ಕೊಂದು ಮಿತಿಯುಂಟಾಗಿದೆ’ ಎಂದರ್ಥ. ಸಂಕುಚಿತ ಜ್ಞಾನವೇ ಅಜ್ಞಾನ ಎನ್ನಬಹುದು. ಮನುಷ್ಯನ ಸಂಸ್ಕಾರದಿಂದಲೋ, ಆಗ್ರಹದಿಂದಲೋ, ಯಾವುದೋ ಸೂಕ್ಷ್ಮ ಕಾರಣಗಳಿಂದಲೋ ಜ್ಞಾನಕ್ಕೆ ಸಂಕೋಚವುಂಟಾಗಿದೆ, ತಪ್ಪು ಗ್ರಹಿಕೆಯಾಗುತ್ತಿದೆ. ಇದೇ ಅಜ್ಞಾನ. ತಪ್ಪುಗ್ರಹಿಕೆಯೇ ಅಜ್ಞಾನ.
ಅಜ್ಞಾನ ಮತ್ತೆ ಮತ್ತೆ ನಮ್ಮನ್ನು ಕಟ್ಟಿ ಹಾಕುತ್ತಿದೆ. ಸ್ವಪ್ನ ನೋಡುತ್ತಿರುವಾಗ ಎಂಥ ವಿದ್ವಾಂಸನೂ, ವಿಜ್ಞಾನಿಯೂ, ಸ್ವಪ್ನವನ್ನು ಸತ್ಯವೆಂದೇ ಗ್ರಹಿಸುತ್ತಾನಲ್ಲ! ನಿದ್ದೆಗೆ ಹೋಗುವ ಮುನ್ನ ಇನ್ನು ಮೇಲೆ ಬೀಳುವ ಎಲ್ಲ ಸ್ವಪ್ನಗಳೂ ಮಿಥ್ಯ ಎಂದು ಹೇಳಿಕೊಳ್ಳುತ್ತಲೇ ನಿದ್ದೆಗೆ ಹೋದರೂ ಕಾಣುವ ಸ್ವಪ್ನಗಳೆಲ್ಲ ಸತ್ಯವಾಗಿಯೇ ಅನುಭವಕ್ಕೆ ಬರುತ್ತವೆಯಲ್ಲ! ಪುನಃ ಜಾಗೃತಾವಸ್ಥೆಗೆ ಬರದ ವಿನಃ ಸ್ವಪ್ನದ ಅಜ್ಞಾನಕ್ಕೆ ಬೇರೆ ಪರಿಹಾರವೇ ಇಲ್ಲ. ನೋಡಿ, ಸ್ವಪ್ನದ ಅಜ್ಞಾನ ಹೇಗೆ ನಮ್ಮನ್ನು ಪ್ರತಿದಿನ ಕಟ್ಟಿಹಾಕುತ್ತಿದೆ!
ಪ್ರತಿವರ್ಷ, ಅಷ್ಟೇಕೆ ಪ್ರತಿನಿತ್ಯ, ಪ್ರತೀಕ್ಷಣ ನಮ್ಮ ಆಯುಷ್ಯ ಕ್ಷೀಣಿಸುತ್ತಿದೆ. ನಾವು ಮರಣಕ್ಕೆ ಹತ್ತಿರ ಆಗುತ್ತಿದ್ದೇವೆ. ಆದರೆ, ವಿಷಯ ಜೀವನದಲ್ಲಿ ಎಷ್ಟು ಸಲಕ್ಕೆ ನಮಗೆ ನೆನಪಿಗೆ ಬರುತ್ತದೆ? ಓಹೋ, ಬೆಳಗಾಯಿತು… ಒಳ್ಳೆಯ ದಿನ ಬಂತು… ಆಹಾ! ಸಂಜೆಯಾಯಯಿತು, ಇವತ್ತಿನ ಕಷ್ಟಗಳು ಕಳೆಯಿತು ಎಂದು ಸಂತೋಷಪಡುತ್ತಿರುತ್ತಾರೆ. ಆದರೆ, ಸೂರ್ಯೋದಯ, ಸೂರ್ಯಾಸ್ಥದಿಂದ ತನ್ನ ಆಯುಷ್ಯದ ಒಂದೊಂದು ದಿನಗಳೂ ಕಡಿಮೆ ಆಗುತ್ತಿರುವುದನ್ನು ಮಾತ್ರ ಅರ್ಥ ಮಾಡಿಕೊಳ್ಳುವುದಿಲ್ಲ.
ಸಂಬಂಧವಿಲ್ಲದವರು ಸಾಯುತ್ತಾರೆ ಎಂದರೆ, ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮವರೇ ಸಾಯುತ್ತಿದ್ದಾರೆ ಎಂದರೆ ಸ್ವಲ್ಪ ಚಿಂತಿಸುತ್ತಾನೆ. ಅದರಲ್ಲೂ ತಾನೇ ಸಾಯುತ್ತಿದ್ದೇನೆಂದು ಗೊತ್ತಾದರೆ, ತುಂಬಾ ಗಾಬರಿಗೊಳಗಾಗುತ್ತಾನೆ. ಇದೇ ಗಾಬರಿ ಇನ್ನೊಬ್ಬರ ಮರಣದ ಸಂದರ್ಭದಲ್ಲಿ ಯಾಕಿಲ್ಲ? ಇದೇ ನೋಡಿ ಅಜ್ಞಾನ.
ವೃದ್ಧನಿಗೆ, ಮಹಾರೋಗಿಗೆ ಮರಣದ ಬಗ್ಗೆ ಇರುವ ಗಂಭೀರ ಚಿಂತೆ ಆರೋಗ್ಯವಂತನಿಗೆ, ಯುವಕನಿಗೆ ಹೇಗಾದರೂ ಬರುತ್ತದೆಯೇ? ಸಾಧ್ಯವಿಲ್ಲ. ಇದೇ ಅಜ್ಞಾನ. ತನ್ನ ತಿಳಿವಳಿಕೆ, ಕ್ರಿಯಾಶಕ್ತಿ ಮುಂತಾದವುಗಳ ಪರಿಮಿತಿ ಗೊತ್ತಿದ್ದರೂ ಎಷ್ಟೋ ಸಲ ತಾನೇ ದೊಡ್ಡವನೆಂದು ದುರಹಂಕಾರ ಪಡುತ್ತಾನಲ್ಲ, ಇದು ಮಾಯೆಯಲ್ಲದೇ ಮತ್ತೇನು?
ಇಂಥ ಅದೆಷ್ಟು ಅವಿವೇಕಗಳು ನಮ್ಮಲ್ಲಿವೆಯೋ ದೇವರಿಗೇ ಇತ್ತು. ವಿವೇಕಿಗಳಾದ ಜ್ಞಾನಿಗಳಿಗೇ ಗೊತ್ತು. ಇವುಗಳನ್ನು ಮೊದಲು ಪತ್ತೆ ಹಚ್ಚಿಕೊಳ್ಳಬೇಕು. ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳದೇ ಹಠ ಮಾಡಿದರೆ, ಇವುಗಳನ್ನು ದಾಟಲು ಸಾಧ್ಯವಿಲ್ಲ. ದಾಟುವ ಪ್ರಯತ್ನಗಳು ಅನೇಕ. ಎಲ್ಲ ಪ್ರಯತ್ನಗಳ ಪೈಕಿ ಭಗವಂತನ ಧ್ಯಾನ ಲೋಕದಲ್ಲಿ ಒಳ ಪ್ರವೇಶಿಸಿ ಮುಂದುವರಿಯುವದು ಅತ್ಯಂತ ಶ್ರೇಷ್ಠ.
– ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ, ಸೋಂದಾ, ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ