ಒಂದು ಕುಟುಂಬ ಒಂದು ಊರಿಗೆ ಟ್ರಾನ್ಸ್‌ಫರ್ ಆಗಿ ಬರುತ್ತದೆ, ಒಂದು ಮನೆಯಲ್ಲಿ ವಾಸ್ತವ್ಯ ಹೂಡುತ್ತದೆ, ಕ್ರಮೇಣ ಏನೇನೋ ಘಟನೆಗಳು ನಡೆಯುವುದಕ್ಕೆ ಶುರುವಾಗುತ್ತದೆ …
ಮುಂದೇನಾಗುತ್ತದೆ ಅಂತ ಕೇಳುವ ಅವಶ್ಯಕತೆಯೇ ಇಲ್ಲ. ಆ ಮನೆಯಲ್ಲಿ ದೆವ್ವವಿರುತ್ತದೆ. ಅದು ಆ ಮನೆಯವರನ್ನು ಎರ್ರಾಬಿರ್ರಿಯಾಗಿ ಕಾಡುತ್ತದೆ ಎಂದು ಯಾರಾದರೂ ಥಟ್ಟಂತ ಹೇಳುತ್ತಾರೆ. ಆದರೆ, ಬೆನ್ನಟ್ಟೋಕೆ ದೆವ್ವ ಮಾತ್ರ ಆಗಬೇಕಿಲ್ಲ, ಕರ್ಮ ಸಹ ಆ ಕೆಲಸ ಮಾಡುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಹರ್ಷ ಎನ್ನುವವರು ಚಿತ್ರ ಮಾಡಿದ್ದಾರೆ. ಈಗಾಗಲೇ ಚಿತ್ರ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರದ ಬಗ್ಗೆ ಮಾತನಾಡುವುದಕ್ಕೆಂದೇ ಹರ್ಷ ತಮ್ಮ ತಂಡವನ್ನು ಕಟ್ಟಿಕೊಂಡು ಬಂದಿದ್ದರು.
ಅಂದಹಾಗೆ, “ಸಾಲಿಗ್ರಾಮ’ ಚಿತ್ರದಲ್ಲಿ ಸಿದ್ಧಾರ್ಥ್ ಮಾಧ್ಯಮಿಕ ನಾಯಕನಾಗಿ ನಟಿಸಿದರೆ, ಪಲ್ಲವಿ ಮತ್ತು ದಿಶಾ ಪೂವಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಯಶವಂತ್ ಶೆಟ್ಟಿ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸನ್ನಿ ರಾಜ್ ಸಂಗೀತ ಸಂಯೋಜಿಸಿದರೆ, ಹರ್ಷ ಅವರೇ ಛಾಯಾಗ್ರಹಣವನ್ನು ಮಾಡಿದ್ದಾರೆ. ಚಿತ್ರದ ಕುರಿತು ಮಾತನಾಡುವ ನಿರ್ದೇಶಕರು, “ಇದೊಂದು ಹಾರರ್, ಥ್ರಿಲ್ಲರ್, ಫ್ಯಾಮಿಲಿ ಡ್ರಾಮ. ಸಾಲಿಗ್ರಾಮ ಎಂಬ ಊರಿಗೆ, ಕುಟುಂಬವೊಂದು ಬಂದು ಒಂದು ಮನೆಯಲ್ಲಿ ನೆಲೆಗೊಂಡಾಗ, ಆ ಮನೆಯಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಸಮಸ್ಯೆ ಆ ಮನೆಯಿಂದ ಉದ್ಭವಿಸುತ್ತದಾ ಅಥವಾ ಅದು ಅವರ ಕರ್ಮವಾ ಎಂಬ ವಿಷಯನ್ನಿಟ್ಟುಕೊಂಡು ಚಿತ್ರ ಮಾಡಿದ್ದೇವೆ. ಪ್ರಮುಖವಾಗಿ ಕರ್ಮ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಬೆಂಗಳೂರು, ತೀರ್ಥಹಳ್ಳಿ, ಶಿವಮೊಗ್ಗ, ಮನಾಲಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ’ ಎಂದು ವಿವರ ನೀಡುತ್ತಾರೆ ಹರ್ಷ. “ಕೆಂಪಮ್ಮನ ಕೋರ್ಟ್ ಕೇಸ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಸಿದ್ಧಾರ್ಥ್ ಮಾಧ್ಯಮಿಕ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರು ಹೇಳುವಂತೆ, ಇಲ್ಲಿ ಹಾರರ್ ಎನ್ನುವುದು ಒಂದೆಳೆ ಅಷ್ಟೇ ಅಂತೆ. “ಇದು ಒಂದು ಫ್ಯಾಮಿಲಿಯ ಕಥೆ. ಇಲ್ಲಿ ಹಾರರ್ ಎನ್ನುವುದು ಒಂದೆಳೆ ಅಷ್ಟೇ’ ಎನ್ನುತ್ತಾರೆ ಸಿದ್ಧಾರ್ಥ್. ಇನ್ನು ಯಶವಂತ್ ಶೆಟ್ಟಿ ವಿಲನ್ ಆಗಿರಬಹುದು ಎಂದುಕೊಂಡರೆ ಅದು ತಪ್ಪು. “ಇಲ್ಲಿ ನನ್ನದು ಗುಂಜಪ್ಪ ಎಂಬ ಪಾತ್ರ ವಯಸ್ಸಿಗೆ ಮೀರಿದ ಪಾತ್ರ ಅದು. ಮೇಕಪ್ ಸೇರಿದಂತೆ ಸಾಕಷ್ಟು ತಯಾರಿ ಮಾಡಿಕೊಳ್ಳುವ ಅವಶ್ಯಕತೆ ಇತ್ತು. ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಚಿತ್ರಕ್ಕೆ ಎಲ್ಲರ ಸಹಕಾರವಿರಲಿ’ ಎಂದು ಹೇಳಿದರು.
“ನಾವು ಪ್ರತಿ ದಿನ ಕರ್ಮ ಮಾಡುತ್ತಲೇ ಇರುತ್ತೇವೆ. ಆ ಕರ್ಮ ನಮ್ಮನ್ನು ಹೇಗೆ ಹಿಂಬಾಲಿಸುತ್ತದೆ ಎಂಬುದು ಚಿತ್ರದ ಕಥೆ. ಇಲ್ಲಿ ನಾನು ಎರಡು ಮಕ್ಕಳ ತಾಯಿಯಾಗಿ ಕಾಣಿಸಿಕೊಂಡಿದ್ದೇನೆ. ಮದುವೆಗೂ ಮುನ್ನವೇ ಈ ಚಿತ್ರದಲ್ಲಿ ತಾಯ್ತನದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ’ ಎಂದು ಹೇಳಿಕೊಂಡರು ದಿಶಾ. ಇನ್ನು ಮತ್ತೂಬ್ಬ ನಾಯಕಿ ಪಲ್ಲವಿ ತಮ್ಮದು ಅನಾಥ ಹುಡುಗಿಯ ಪಾತ್ರ ಎಂದು ಹೇಳಿಕೊಂಡರು.
ಚೇತನ್ ನಾಡಿಗೇರ್