Advertisement

IT, ED ದಾಳಿ ಹಿಂದಿನ ಅಸಲಿ ಕಾರಣ ಏನು?ಡಿಕೆಶಿ ಹೇಳೋದೇನು

06:46 PM Sep 19, 2018 | Team Udayavani |

ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ನಾನು ಒಬ್ಬನೇ ಅಡ್ಡಿಯಾಗಿದ್ದೆ. ಅದಕ್ಕಾಗಿ ನನ್ನನ್ನು ರಾಜಕೀಯವಾಗಿ ಹಣಿಯಲು ಬಿಜೆಪಿ ಷಡ್ಯಂತ್ರ ನಡೆಸಿದೆ. ನಾನೇನು ಹವಾಲಾ ಹಗರಣದಲ್ಲಿ ಭಾಗಿಯಾಗಿಲ್ಲ. ಬಿಜೆಪಿ ಒತ್ತಡದಿಂದ ಐಟಿ, ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನನ್ನ ಬಳಿ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಸಚಿವ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಅಣ್ಣ ಡಿಕೆಶಿಯನ್ನು ಜೈಲಿಗೆ ಹಾಕಿಸುವ ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ನಾಯಕರೇ ನನ್ನ ತಮ್ಮ ಡಿಕೆ ಸುರೇಶ್ ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ನಾನೇನು ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ, ದರೋಡೆ ಮಾಡಿಲ್ಲ. ನಾನು ಹೇಡಿಯೂ ಅಲ್ಲ. ಜೈಲಿಗೆ ಹೋಗಲು ಸಿದ್ಧ. ಈ ನೆಲದ ಕಾನೂನು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ. ವಿಚಾರಣೆ ಎದುರಿಸಲು ಸಿದ್ಧ ಎಂದರು.

ನಾನು ಇಂದು ಹೊರಬಂದು ಮಾತನಾಡಲು ಬಿಜೆಪಿ ನಾಯಕರ ನಡೆಯೇ ಕಾರಣ. ಐಟಿಯವರು ಎಷ್ಟು ಹಿಂಸೆ ಕೊಟ್ಟರು ಗೊತ್ತಾ? ನನಗೆ, ನಮ್ಮ ಕುಟುಂಬದವರಿಗೆ, ನನ್ನ ಆಪ್ತರಿಗೆ ಅದೆಷ್ಟು ಹಿಂಸೆ ಕೊಟ್ಟರು..ಒತ್ತಾಯಪೂರ್ವಕವಾಗಿ ನಮ್ಮಿಂದ ಹೇಳಿಕೆ ಪಡೆದುಕೊಂಡು, ಸಹಿ ಹಾಕಿಸಿಕೊಂಡು ಹವಾಲಾ ದಂಧೆ ಎಂದು ಬಿಂಬಿಸುತ್ತಿದ್ದಾರೆ.

ಜೈಲಿಗೆ ಹೋದವರೆಲ್ಲಾ ರಾಷ್ಟ್ರೀಯ ಪಕ್ಷದ ಅಧ್ಯಕ್ಷರುಗಳಾಗಿದ್ದಾರೆ. ನಾನು ನಾಲ್ಕು ಎಂಎಲ್ ಎಗಳನ್ನು ಬಿಜೆಪಿಗೆ ಕಳುಹಿಸಬೇಕಿತ್ತು. ಆದರೆ ಅದಕ್ಕೆ ನಾನು ಸೊಪ್ಪು ಹಾಕಿಲ್ಲ. ಹೀಗಾಗಿ ಬಿಜೆಪಿ ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ. ನಾನೇನು ತಪ್ಪು ಮಾಡಿಲ್ಲ. ರಾಜೀನಾಮೆ ನಾನ್ಯಾಕೆ ಕೊಡಲಿ. ನಿಮ್ಮ ಆಪರೇಶನ್ ಕಮಲದ ಇಂಚಿಂಚು ಮಾಹಿತಿಯನ್ನು ಬಯಲಿಗೆಳೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನವದೆಹಲಿಯ ನನ್ನ ಮನೆಯಲ್ಲಿ ಸಿಕ್ಕಿದ್ದು ಕೇವಲ 41 ಲಕ್ಷ ರೂಪಾಯಿ ಮಾತ್ರ. ಡೈರಿಯಲ್ಲಿ ಆರ್ ಜಿ, ಎಸ್ ಜಿ ಎಂದು ನಮೂದಾಗಿರುವುದು ಬರೇ ಸುಳ್ಳು. ನನ್ನ ಹಣಿಯಲು ತಂತ್ರಗಾರಿಕೆ ರೂಪಿಸುತ್ತಿದ್ದು, ಐಟಿ ಜೊತೆ ಬಿಜೆಪಿಗೆ ನಂಟಿರುವುದನ್ನು ಬಿಜೆಪಿ ಮುಖಂಡ ಸಂಬಿತ್ ಪಾತ್ರ ಸುದ್ದಿಗೋಷ್ಠಿ ಮಾಡುವ ಮೂಲಕ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next