Advertisement

ಹೃದಯ ಸೇವೆಗೆ ವಾಟ್ಸ್‌ ಆ್ಯಪ್‌ ಚಿಕಿತ್ಸೆ!

10:26 AM Feb 08, 2019 | |

ಹೊನ್ನಾವರ: ಮೊಬೈಲ್‌, ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಬಳಸುವುದು ವೈಯಕ್ತಿಕ. ಇದನ್ನು ಸಮಾಜಕ್ಕೆ ಉಪಯೋಗಿಯಾಗಿ, ಜೀವ ಉಳಿಸುವ ಸಾಧನವಾಗಿ ಬಳಸಬಹುದು ಎಂಬುದಕ್ಕೆ ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ ಬಳಗದ ಸೇವೆಯೊಂದು ಉದಾಹರಣೆಯಾಗಿದೆ.

Advertisement

ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಉಚಿತ ಇಸಿಜಿ ಮಷಿನ್‌ ಒದಗಿಸಿ ಅವರಿಗೆ ಸ್ವಲ್ಪ ತರಬೇತಿ ಕೊಟ್ಟು ಎದೆನೋವು ಎಂದು ಬಂದವರ ಇಸಿಜಿ ಪಡೆದು ಅದನ್ನು ವಾಟ್ಸ್‌ ಆ್ಯಪ್‌ ಮುಖಾಂತರ ವೈದ್ಯರಿಗೆ ಕಳಿಸಿ ತುರ್ತು ಚಿಕಿತ್ಸೆ ಕೊಡಿಸುವುದು, ಅಗತ್ಯವಿದ್ದರೆ ದೊಡ್ಡ ಆಸ್ಪತ್ರೆಗೆ ಕೂಡಲೇ ಹೋಗುವಂತೆ ಸೂಚನೆ ನೀಡುವುದು ಮನೆಬಾಗಿಲಿಗೆ ಹೃದಯ ವೈದ್ಯರು ಎಂಬ ಯೋಜನೆಯ ಗುರಿ.

ಕಳೆದ ವರ್ಷ ಫೆಬ್ರವರಿಯಲ್ಲಿ ಆರಂಭವಾದ ಯೋಜನೆ ಈಗ ಎಂಟು ಜಿಲ್ಲೆಯ ವಿವಿಧೆಡೆ ಸರಕಾರಿ ಆಸ್ಪತ್ರೆ, ಗ್ರಾಮೀಣ, ಕ್ಲಿನಿಕ್‌, ಜನೌಷಧಿ ಕೇಂದ್ರಗಳಿಗೆ 110 ಉಚಿತ ಇಸಿಜಿ ಯಂತ್ರ ಒದಗಿಸಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಆರಂಭಿಸುವಾಗ 150 ಸದಸ್ಯರಿದ್ದರು. ಈಗ 422 ಸದಸ್ಯರಿದ್ದಾರೆ. ದ.ಕ., ಉಡುಪಿ, ಚಿಕ್ಕಮಗಳೂರು, ಮಡಿಕೇರಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕಾಸರಗೋಡು ಸೇರಿ ಎಂಟು ಜಿಲ್ಲೆಗಳನ್ನು ವ್ಯಾಪಿಸಿದೆ. ಸರಿಸುಮಾರು 15 ಲಕ್ಷ ಜನರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದೆ.

ಯಕ್ಷಗಾನ ಪ್ರಿಯರಾದ ಕಾಮತ್‌ ರಾತ್ರಿ ಆಟ ನೋಡಲು ಹಳ್ಳಿಗೆ ಹೋದಾಗ ಯಾವ ಚಿಕಿತ್ಸೆಯೂ ಇಲ್ಲದೇ ಹೃದಯಾಘಾತದಿಂದ ಸಾಯುವವರನ್ನು ಕಂಡು ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ನಿರೀಕ್ಷೆ ಮೀರಿ ಯೋಜನೆ ಯಶಸ್ವಿಯಾಗಿದ್ದು, ಕಾಮತರ ಬಳಗ ವಿಸ್ತರಿಸುತ್ತಿದೆ. ಕಾಮತರ ಈ ಯೋಜನೆಯನ್ನು ಮೆಚ್ಚಿ ಕೇಂದ್ರ ಸಚಿವ ಸದಾನಂದ ಗೌಡ ಕೇಂದ್ರ ಸರ್ಕಾರದ ಮುಂದಿಡುವುದಾಗಿ ಹೇಳಿದ್ದು, ಇಂಗ್ಲಿಷ್‌ ಪತ್ರಿಕೆಗಳು ವಿಶೇಷ ಲೇಖನ ಬರೆದಿವೆ. ಈ ಯೋಜನೆಗೆ ನೆರವಾಗ ಬಯಸುವವರು, ಅಭಿನಂದಿಸ ಬಯಸುವವರಿಗೆ ಮೊ. 9448107770 ಸಂಪರ್ಕಿಸಬಹುದು.

ಸಕಾಲದಲ್ಲಿ ಸಿಗುತ್ತಿದೆ ಚಿಕಿತ್ಸೆ
ಈವರೆಗೆ ವಿತರಿಸಿದ ಇಸಿಜಿ ಯಂತ್ರಗಳ ಸಂಖ್ಯೆ 110. ಜನೌಷಧಿ ಕೇಂದ್ರ- 5, ಸರ್ಕಾರಿ ಆಸ್ಪತ್ರೆ-76, ಖಾಸಗಿ ಕ್ಲಿನಿಕ್‌-29 ಯಂತ್ರಗಳನ್ನು ನೀಡಲಾಗಿದೆ. ವರ್ಷಾಂತ್ಯದೊಳಗೆ ಅಳವಡಿಸಲು ಯೋಜಿಸಿದ ಇಸಿಜಿ ಯಂತ್ರಗಳ ಸಂಖ್ಯೆ 250. ಈವರೆಗೆ ವಾಟ್ಸ್‌ಆ್ಯಪ್‌ ಮೂಲಕ ಕೊಡುಗೆಯಾಗಿ ನೀಡಿದ ಇಸಿಜಿಯಲ್ಲಿ ಬಂದ ವರದಿಗಳ ಸಂಖ್ಯೆ 3500. ಗ್ರೂಪ್‌ನಲ್ಲಿ ಇಸಿಜಿ ವರದಿ ಹಾಕಿ ಸರಿಯಾದ ಹೃದ್ರೋಗ ಚಿಕಿತ್ಸೆ ಪಡೆದವರ ಸಂಖ್ಯೆ 1,100. ಇದರಲ್ಲಿ ಹೃದ್ರೋಗಿಗಳೆಂದು ಗುರುತಿಸಲ್ಪಟ್ಟವರ ಸಂಖ್ಯೆ 985. ಹೃದಯಾಘಾತದ ಆರಂಭಿಕ ಹಂತದಲ್ಲಿ ಪತ್ತೆಯಾದವರು 345 ಮಂದಿ. ಸಕಾಲದಲ್ಲಿ ಚಿಕಿತ್ಸೆ ದೊರೆತು ಬದುಕುಳಿದವರು 124 ಮಂದಿ. ಆಂಜಿಯೋಪ್ಲಾಸ್ಟ್‌ ಪಡೆದವರ ಸಂಖ್ಯೆ 95, ಸಿಎಡಿ(ಕಾರ್ಡಿಯೋಲೋಜಿಸ್ಟ್‌ ಎಟ್ ಡೋರ್‌ ಸ್ಟೆಪ್‌) ಗ್ರೂಪ್‌ ಮೂಲಕ ಜೀವ ಉಳಿದದ್ದು ಬಹಳ. 2020ರ ವೇಳೆಗೆ 250 ಇಸಿಜಿ ಯಂತ್ರ ವಿತರಿಸುವ ಗುರಿ ಹೊಂದಲಾಗಿದೆ. ಇನ್ನೂ ಮೂರು ಜಿಲ್ಲೆಗಳಿಗೆ ವಿಸ್ತರಿಸುವ ಯೋಚನೆಯಿದೆ. 50 ಲಕ್ಷ ಜನಸಂಖ್ಯೆ ಪ್ರದೇಶಕ್ಕೆ ತಲುಪುವ ಹುಮ್ಮಸ್ಸಿದೆ ಎಂದು ಡಾ| ಪದ್ಮನಾಭ ಕಾಮತ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next