ನನ್ನ ತಂಗಿಯ ಮಗಳು ರುಚಿತಾ ಹರೆಯದ ಯುವತಿ. ಉತ್ಸಾಹದ ಬುಗ್ಗೆ. ಎಲ್ಲದರಲ್ಲಿಯೂ ಮುಂದೆ. ತನ್ನದೇ ವಾರಗೆಯ ಹುಡುಗಿಯರನ್ನು ಸೇರಿಸಿ ವಾಟ್ಸ್ಯಾಪ್ ಗ್ರೂಪ್ ಮಾಡಿದ್ದಳು. “ಯುವ ಅಡ್ಡಾ’ ಎಂದು ಆ ಗ್ರೂಪ್‌ಗೆ ಹೆಸರನ್ನೂ ಇಟ್ಟಿದ್ದಳು. ಈಕೆ ಅಪ್ಪಟ ಕನ್ನಡ ಪ್ರೇಮಿಯಾಗಿದ್ದರಿಂದ, ಆದಷ್ಟು ಕನ್ನಡದಲ್ಲಿಯೇ ಸಂದೇಶಗಳನ್ನು ಹಾಕಬೇಕೆಂದು ನಿಬಂಧನೆ ಹಾಕಿದ್ದಳು.
ಒಂದು ದಿನ ಬೆಳಗ್ಗೆ. ರುಚಿತಾ ತನ್ನ ಮೊಬೈಲನ್ನು ಕೈಗೆತ್ತಿಕೊಂಡು, ಯುವ ಅಡ್ಡಾದಲ್ಲಿನ ಮೆಸೇಜುಗಳ ಮೇಲೆ ಕಣ್ಣಾಡಿಸುತ್ತಿದ್ದಳು. ಎಲ್ಲವೂ ವಿಚಿತ್ರ ಮೆಸೇಜುಗಳೇ! “ರುಚಿತಾಗೆ ವಾಂತಿ ಆಯ್ತಂತೆ, ಹೌದೇನೇ?’, “ಏನೇ ರುಚಿ, ಕಾರಿಕೊಂಡೆಯಂತಲ್ಲ ಯಾಕೇ..?’, “ಆnಂ, ಒಂದೇ ಬಾರಿ ಆಗಿದ್ದೇನೇ? ಬಿಸಿ ನೀರಿಗೆ ನಿಂಬೆರಸ ಕಲಸಿ ಕುಡಿ, ಪಿತ್ತ ಆಗಿರಬೇಕು…’.
ರುಚಿತಾಗೆ ಭಯವಾಯಿತು. “ನನಗೇನೂ ಆಗಿಲ್ಲ… ಏನಿದರ ಅರ್ಥ?’ ಎಂದು ಮೆಸೇಜು ಕಳುಹಿಸಿ, ಮೇಲಿನಿಂದ ಕೆಳಕ್ಕೆ ಎಲ್ಲಾ ಸಂದೇಶಗಳನ್ನೂ ನೋಡುತ್ತಾ ಹೋದಳು. ಪಕ್ಕದ ಮನೆಯ ಶ್ರಾವಣಿ ಕಳಿಸಿದ ಸಂದೇಶ ಹೀಗಿತ್ತು…. “ನಿನ್ನೆ ಸಂಜೆ ರುಚಿತಾ ಕಾರಿಕೊಂಡಿದ್ದಾಳೆ’ ಅಂತ. ಅದಕ್ಕೇ ಇವರೆಲ್ಲರ ಪ್ರತಿಕ್ರಿಯೆ! ಆಗ ರುಚಿತಾಳಿಗೆ ಎಲ್ಲವೂ ಮನದಟ್ಟಾಯಿತು…
“ಅಮ್ಮಾ ತಾಯಂದಿರಾ, ನಾನೇನೂ ಕಾರಿಕೊಂಡಿಲ್ಲ, ನಿನ್ನೆ ಸಂಜೆ ಹೊಸಾ ಫೋರ್ಡ್ ಕಾರು ಕೊಂಡಿದ್ದೇನೆ. ಈ ಮಹಾತಾಯಿ ಶ್ರಾವಣಿ ಕಾರ್, ಬದಲು ಕಾರಿ ಎಂದು ಟೈಪ್ ಮಾಡಿ ಸಂದೇಶ ಹಾಕಿದ್ದಾಳೆ’ ಎಂದು ಗ್ರೂಪ್‌ನಲ್ಲಿ ಗೀಚಿದಳು. ಮತ್ತರ್ಧ ಗಂಟೆಯಲ್ಲಿ ನಗುವ, ಹಂಗಿಸುವ ಇಮೇಜುಗಳಿಂದ ಅಡ್ಡಾ ಹೌಸ್‌ಫುಲ್ ಆಗಿತ್ತು!
ವಾಟ್ಸ್ಯಾಪ್ ಗ್ರೂಪ್ : ಎಸ್ಸೆಸ್ಸೆಲ್ಸಿ 2005 ಬ್ಯಾಚ್
ಗ್ರೂಪ್ ಅಡ್ಮಿನ್ : ಚಿದಾನಂದ
ನೀವು ವಾಟ್ಸ್ಯಾಪ್ ಗ್ರೂಪ್‌ನ ಅಡ್ಮಿನ್ ಆಗಿದ್ದರೆ, ನಿಮ್ಮ ಗುಂಪಿನಲ್ಲಿ ನಡೆದ ಪ್ರಸಂಗ, ನೀವು ಪಟ್ಟ ಫಜೀತಿಗಳನ್ನು ಸ್ವಾರಸ್ಯವಾಗಿ ನಮಗೆ ಬರೆದು ಕಳುಹಿಸಿ. ಪದಗಳ ಮಿತಿ 120-150 ಪದಗಳು.
ನಮ್ಮ ವಿಳಾಸ: uvani.josh@gmail.com
– ಕೆ. ಲೀಲಾ ಶ್ರೀನಿವಾಸ, ಹರಪನಹಳ್ಳಿ