Advertisement

ನಂಬಿಕೆ ಇರಲಿ, ಮೂಢನಂಬಿಕೆ ತೊಲಗಲಿ

11:52 AM Mar 09, 2018 | |

ಬೆಂಗಳೂರು: ಪ್ರತಿಯೊಬ್ಬರಲ್ಲೂ ನಂಬಿಕೆಗಳು ಇರುತ್ತವೆ. ಅವು ಧನಾತ್ಮಕ ಅಥವಾ ಋಣಾತ್ಮಕವಾಗಿರಬಹುದು. ಆದರೆ, ಅಪನಂಬಿಕೆ ಹಾಗೂ ಮೂಢನಂಬಿಕೆಗಳು ತೊಲಗಬೇಕಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನವು ಭಾರತೀಯ ವಿದ್ಯಾಭವನದ ಸಹಯೋಗದೊಂದಿಗೆ ನಗರದಲ್ಲಿ ಗುರುವಾರ ಆಯೋಜಿಸಿದ್ದ “ನಂಬಿಕೆ ಮತ್ತು ಅದರಾಚೆಗೆ’ ಕುರಿತ ಜಾಗತಿಕ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರಿಗೆ ನಂಬಿಕೆ, ಅಪನಂಬಿಕೆ ಹಾಗೂ ಮೂಢನಂಬಿಕೆಗಳನ್ನು ಗುರುತಿಸುವಲ್ಲಿ ಗೊಂದಲಗಳಿವೆ ಎಂದರು.

ಮೂಢನಂಬಿಕೆಗಳು ಸೂರ್ಯನಿಗೆ ಕವಿದ ಮೋಡಗಳಂತೆ. ಅಪನಂಬಿಕೆ ಎಂದರೆ ಸೂರ್ಯನೂ ಇಲ್ಲ, ಮೋಡವೂ ಇಲ್ಲದಂತೆ. ಈ ಮೂರರ ನಡುವೆ ನಂಬಿಕೆಗಳನ್ನು ಮೇಲಕ್ಕೆ ಎತ್ತಬೇಕಿದೆ. ಪ್ರಸ್ತುತ ಸಂದರ್ಭದಲ್ಲಿ ನಂಬಿಕೆಗಳಲ್ಲಿ ಜೊಳ್ಳುಗಳ ಪ್ರಮಾಣ ಹೆಚ್ಚುತ್ತಿದ್ದು, ಗಟ್ಟಿ ನಂಬಿಕೆಗಳನ್ನು ಹೆಕ್ಕಿ ತೆಗೆಯಬೇಕಿದೆ ಎಂದರು. 

ನಂಬಿಕೆ ಇಲ್ಲದೆ ನಮ್ಮ ಬದುಕಿಲ್ಲ. ನಂಬಿಕೆಗಳು ಸಂದರ್ಭ ಹಾಗೂ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತವೆ. ಅವು ಹೀಗೇ ಇರುತ್ತವೆ, ನಂಬಿಕೆ ಎಂದರೆ ಇದೇ ಎಂದು ವ್ಯಾಖ್ಯಾನಿಸಲಾಗದು. ಎಲ್ಲ ಧರ್ಮಗಳಲ್ಲೂ ನಂಬಿಕೆಗಳ ಕುರಿತು ಗೊಂದಲಗಳಿದ್ದು, ಅಂತಹ ಗೊಂದಲಗಳಿಂದ ನಮ್ಮನ್ನು ಹೊರಬರುವಂತೆ ಮಾಡಿ ಸರಿಮಾರ್ಗದಲ್ಲಿ ಸಾಗಲು ಮಾರ್ಗದರ್ಶನ ನೀಡುವ ಗುರುವೊಬ್ಬರು ಪ್ರತಿ ಶತಮಾನದಲ್ಲಿಯೂ ಇರುತ್ತಾರೆ ಎಂದರು.

ಜ್ಯೋತಿಷ್ಯ ವಾಸ್ತು ಮುಂತಾದ ವೈಜ್ಞಾನಿಕ ಅಂಶಗಳನ್ನು ನಾವು ತಪ್ಪಾಗಿ ಬಳಸಿಕೊಳ್ಳುತ್ತಿದ್ದೇವೆ ಎಂಬ ಮಾತಿದೆ. ಆದರೆ, ನಿಜವಾಗಿಯೂ ಅವು ನಮ್ಮ ಜೀವನ ಮತ್ತು ಒಗ್ಗಟ್ಟು ಬಲಗೊಳಿಸಿ, ಸರಿದಾರಿಯಲ್ಲಿ ಕೊಂಡೊಯ್ಯುತ್ತವೆ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು. ಕಾರ್ಯಕ್ರಮದಲ್ಲಿ ಆಫ್ರಿಕಾದ ನೈರೋಬಿ ಮಾಸೈ ತಂಡದ ಮುಖ್ಯಸ್ಥ ಸಾಲಾಟನ್‌ ಒಲೆ ನಟುಟು, ವರ್ಜಿನೀಯಾದ ವಿದ್ವಾಂಸ ಡಾ.ಆಂಡ್ರೂé ಫಾಸ್‌, ಭಾರತೀಯ ವಿದ್ಯಾಭವನ ಬೆಂಗಳೂರು ನಿರ್ದೇಶಕ ಎಚ್‌.ಎನ್‌.ಸುರೇಶ್‌ ಇದ್ದರು.

Advertisement

ಪ್ರಾರ್ಥನೆಗೆ ಪ್ಯಾನಲ್‌ಗ‌ಳು ತೆರೆದುಕೊಂಡವು: “ಸುಮಾರು 25 ವರ್ಷಗಳ ಹಿಂದೆ ಮೊದಲ ಬಾರಿ ಉಪಗ್ರಹ ಉಡಾವಣೆ ಮಾಡಿದಾಗ ಸೋಲಾರ್‌ ಪ್ಯಾನೆಲ್‌ಗ‌ಳು ತೆರೆದುಕೊಂಡಿರಲಿಲ್ಲ. ಆಗ ಹಾಸನದ ವಿಜ್ಞಾನಿಗಳು ಧರ್ಮಸ್ಥಳಕ್ಕೆ ಬಂದು ಏನಾದರೂ ಸಹಾಯ ಮಾಡುವಿರಾ ಎಂದು ಕೇಳಿದ್ದರು. ಅದರಂತೆ ದೇವರಲ್ಲಿ ಪ್ರಾರ್ಥನೆ ಮಾಡಿದಾಗ ಪ್ಯಾನೆಲ್‌ಗ‌ಳು ತೆರೆದುಕೊಂಡಿದ್ದವು. ಬಹುಶಃ ವಿಜ್ಞಾನಿಗಳು ಸಹ ಅದಕ್ಕೆ ನಿರಂತರ ಪ್ರಯತ್ನ ಮಾಡಿರಬಹುದು. ಆದರೆ, ಒತ್ತಡದಲ್ಲಿದ್ದ ವಿಜ್ಞಾನಿಗಳು ನಂಬಿಕೆಯಿಂದ ಧರ್ಮಸ್ಥಳಕ್ಕೆ ಬಂದಿದ್ದರು,’ ಎಂದು ವೀರೇಂದ್ರ ಹೆಗ್ಗಡೆಯವರು ಸ್ಮರಿಸಿದರು.

ನಾವು ಭಯಗೊಂಡಾಗ, ವಿಶ್ವಾಸ ಕಳೆದುಕೊಂಡಾಗ ನಮಗಿಂತ ಶಕ್ತಿಶಾಲಿಯ ಮೇಲೆ ಅವಲಂಬನೆಯಾಗುತ್ತೇವೆ. ಆಗ ನಮಗೆ ನಂಬಿಕೆ ಬರುತ್ತದೆ. ನಂಬಿಕೆ ಇಲ್ಲದಿದ್ದರೆ ಜೀವನ ನಾಶವಾಗುತ್ತದೆ.
-ಎಂ.ಎನ್‌.ವೆಂಕಟಾಚಲಯ್ಯ, ನಿವೃತ್ತ ಮುಖ್ಯ ನ್ಯಾಯಮೂರ್ತಿ

ವಿಜ್ಞಾನಿಯೊಬ್ಬ ಭೌತಶಾಸ್ತ್ರದ ಕನಸು ಕಾಣುತ್ತಾನೆ. ಪ್ರಯೋಗದ ಮೂಲಕ ಅದನ್ನು ಸಾಧಿಸುತ್ತಾನೆ. ಕನಸಿನ ಮೇಲಿನ ನಂಬಿಕೆಯಿಂದಲೇ ಪ್ರಯೋಗಕ್ಕೆ ಮುಂದಾದರು. ಮೊಬೈಲ್‌, ಕಂಪ್ಯೂಟರ್‌ ಆವಿಷ್ಕಾರದ ಹಿಂದೆಯೂ ಇಂತಹ ನಂಬಿಕೆಯಿದೆ. ಹೀಗಾಗಿ ನಂಬಿಕೆಗಳ ಮೇಲೂ ಅಧ್ಯಯನಗಳು ನಡೆಯಬೇಕು.
-ಮಧು ಪಂಡಿತ್‌ ದಾಸ್‌, ಇಸ್ಕಾನ್‌ ಅಧ್ಯಕ್ಷರು

ಒಂದು ವಿಚಾರವನ್ನು ಹಲವು ದೃಷ್ಟಿಕೋನಗಳಿಂದ ನೋಡಬೇಕು. ನಂಬಿಕೆಯನ್ನು ಸಹ ಹಲವು ಆಯಾಮಗಳಲ್ಲಿ ಪರಿಶೀಲಿಸಬೇಕು. ಚಿಂತನೆಗಳು ವಿಶಾಲವಾಗಿರಬೇಕು. ವಿಚಾರಗಳನ್ನು ತಿಳಿಯಲು ತೆರೆದ ಮನಸ್ಸು ಬೇಕು. 
-ಮಮ್ತಾಜ್‌ ಆಲಿ (ಶ್ರೀ.ಎಂ), ಆಧ್ಯಾತ್ಮಿಕ ನಾಯಕ 

ನಮ್ಮ ಹಿರಿಯರು ಸಾವಿರಾರು ವರ್ಷಗಳ ಹಿಂದೆಯೇ ಬ್ರಹ್ಮಾಂಡದ ಬಗ್ಗೆ ಹೇಳಿದ್ದಾರೆ. ಇದೀಗ ವಿಜ್ಞಾನದ ಮೂಲಕ ಅದನ್ನು ಹುಡುಕುವ ಪ್ರಯತ್ನ ನಡೆದಿದೆ. ಮನಸ್ಸು ಜತೆ ನೀಡದಿದ್ದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ನಂಬಿಕೆಗೂ ಒಂದು ಕಾರಣವಿರುತ್ತದೆ. 
-ಡಾ.ಕೆ.ರಾಧಾಕೃಷ್ಣನ್‌, ಮಾಜಿ ಅಧ್ಯಕ್ಷರು, ಇಸ್ರೋ

Advertisement

Udayavani is now on Telegram. Click here to join our channel and stay updated with the latest news.

Next