ಮಂಗಳೂರು: ದ.ಕ. ಜಿಲ್ಲೆಯ ಕಲಾವಿದರಿಗೆ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾಗಬೇಕೆನ್ನುವುದು ಜಿಲ್ಲೆಯ ಕಲಾವಿದರು, ಕಲಾಭಿಮಾನಿಗಳ ಮೂರೂವರೆ ದಶಕಗಳಿಗೂ ಹಿಂದಿನ ಬೇಡಿಕೆ. ಪ್ರತೀ ಬಾರಿ ಹೊಸ ಸರಕಾರ ಆಡಳಿತಕ್ಕೆ ಬಂದಾಗ ಆರಂಭದಲ್ಲಿ ಈ ಬಗ್ಗೆ ಚರ್ಚೆ, ಸಭೆ ನಡೆಸಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.
ರಂಗ ಮಂದಿರಕ್ಕಾಗಿ ಐದಕ್ಕೂ ಅಧಿಕ ಬಾರಿ ಶಿಲಾನ್ಯಾಸವನ್ನೂ ನಡೆಸಲಾಗಿದೆ. ಆದರೆ ರಂಗ ಮಂದಿರ ಕಟ್ಟಡ ಮಾತ್ರ ತಲೆ ಎತ್ತಿಲ್ಲ! ತುಳು ಭಾಷೆಸೇರಿದಂತೆ ನಾಟಕ ಪ್ರದರ್ಶನ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಸುಸಜ್ಜಿತ ರಂಗ ಮಂದಿರ ಬೇಕೆಂದು ಕಲಾವಿದರು ಹಾಗೂ ಕಲಾಭಿಮಾನಿಗಳು ಜಿಲ್ಲಾಡಳಿತ, ರಾಜಕಾರಣಿಗಳನ್ನು ಒತ್ತಾಯಿಸುತ್ತಾ ಬಂದರು. ಕೊನೆಗೆ ಹೋರಾಟ 2019ರಲ್ಲಿ ಹೊಸ ಸ್ವರೂಪ ಪಡೆದುಕೊಂಡು ಟ್ವಿಟರ್ ಅಭಿಯಾನದ ಮೂಲಕವೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು.
ಹೀಗೆ ರಂಗ ಮಂದಿರ ನಿರ್ಮಾಣದ ಪ್ರಸ್ತಾವ ಆರಂಭಗೊಂಡಾಗ 4 ಕೋಟಿ ರೂ. ಗಳಿದ್ದ ಯೋಜನಾ ವೆಚ್ಚ 24 ಕೋಟಿ ರೂ. ಗಳಿಗೇರಿತ್ತು. ಹಲವು ಜಾಗಗಳನ್ನು ಗುರುತಿಸಿ ಕೈಬಿಟ್ಟು ಕೊನೆಯದಾಗಿ 2010ರಲ್ಲಿ ಬೊಂದೇಲ್ ನ ಮಹಿಳಾ ಪಾಲಿಟೆಕ್ನಿಕ್‌ನ ಜಾಗವನ್ನು ಅಂತಿಮಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿಲಾನ್ಯಾಸ ಮಾಡಿದ್ದರು.
24 ಕೋಟಿ ರೂ. ವೆಚ್ಚದ ಯೋಜನೆಯನ್ನು ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಠಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ಸ್ಕೀಂನಡಿ ಶೇ. 60ರಷ್ಟು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಉಳಿದ 9.6 ಕೋಟಿ ರೂ. ರಾಜ್ಯ ಸರಕಾರದ ಪಾಲು ಎಂದು ಅಂದಾಜಿಸಲಾಗಿತ್ತು. ಆದರೆ ಕೇಂದ್ರದ ಅನುದಾನ ದೊರೆಯದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ನಿರ್ಮಿಸಲು ಉದ್ದೇಶಿಸಲಾಯಿತು.
ಇವೆಲ್ಲವೂ ಆಗಿ, ಸ್ವಲ್ಪ ಸಮಯದ ಹಿಂದೆ ಕಲಾವಿದರ ಹೋರಾಟ, ಒತ್ತಡದ ಪರಿಣಾಮವಾಗಿ ಈ ಹಿಂದಿನ ಆಡ ಳಿತದ ಡಿಪಿಆರ್ ಬದಲಾವಣೆ ಮಾಡಿ ಅಂದಾಜು 9.9 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ತಾಂತ್ರಿಕ ಅನುಮೋದನೆಗಾಗಿ ಪೌರಾಡಳಿತ ಸಚಿವಾಲಯಕ್ಕೆ ಸಲ್ಲಿಕೆಯಾಯಿತು. ಇನ್ನೂ ಆಡಳಿತಾತ್ಮಕ ಅನುಮೋದನೆ ದೊರಕಿಲ್ಲ. ಕಲಾವಿದರು ಮತ ದಾರರಾಗಿ ಪರಿಗಣಿಸಲ್ಪಡದ ಕಾರಣವೇನೋ, ಸರಕಾರ ರಂಗ ಮಂದಿರ ಮನಸ್ಸು ಮಾಡುತ್ತಿಲ್ಲ ಎನ್ನುವುದು ಕಲಾವಿದರ ಅಳಲು.
-ಸತ್ಯ