ಬೆಂಗಳೂರು: ರಾಜ್ಯದ ರೈತರ ಸುಮಾರು 46 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕುಮಾರಣ್ಣರಿಗೆ ಉತ್ತರ ಕರ್ನಾಟಕದ ನೇಗಿಲಯೋಗಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ. ಆ ರೈತ ನೀಡಿದ ಉಡುಗೊರೆ ಸ್ವೀಕರಿಸಿದ ಮಾಜಿ ಸಿಎಂ ಕುಮಾರಸ್ವಾಮಿಯವರು ಭಾವುಕರಾಗಿದ್ದಾರೆ.
ಏನಿದು ಘಟನೆ ?:
ಧಾರವಾಡ ಜಿಲ್ಲೆ ಹುಬ್ಬಳಿ ತಾಲೂಕ್ ಕಿರೇಸೂರ ಗ್ರಾಮದ ಗೋವಿಂದಪ್ಪ ಶ್ರೀ ಹರಿ ಅನ್ನೋ ರೈತ ಸಾಲಬಾಧೆಯಿಂದ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿ ತಂದುಕೊಂಡಿದ್ದರು. ಈ ಸಂಧರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಸಾಲ ಹೆಚ್ಚಳದಿಂದ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದೇನೆಂದು ಪತ್ರ ಬರೆದಿದ್ದರು. ಆ ರೈತ ಬರೆದಿದ್ದ ಪತ್ರದಲ್ಲಿದ್ದ ಫೋನ್ ನಂಬರ್ ಗೆ ತಕ್ಷಣವೇ ಫೋನಾಯಿಸಿದ್ದ ಅಂದಿನ ಸಿಎಂ ಹೆಚ್ಡಿಕೆ ಸಾಲ ಮನ್ನಾ ಆಗುತ್ತೆ, ಆತ್ಮಹತ್ಯೆಯಂತಹ ನಿರ್ಧಾರ ಮಾಡಬಾರದೆಂದು ರೈತ ಗೋವಿಂದಪ್ಪ ಶ್ರೀ ಹರಿಯವರಿಗೆ ಫೋನ್ ಮೂಲಕವೇ ಸಾಂತ್ವನ ಹೇಳಿದ್ದರು. ನಂತರ ಆ ರೈತರ ಸಾಲ ಮನ್ನ ಆಯಿತು.
ಅಷ್ಟರಲ್ಲಿ ಕುಮಾರಸ್ವಾಮಿಯವರು ರಾಜಕೀಯ ಸ್ಥಿತ್ಯಂತರಗಳ ನಡುವೆ ಅಧಿಕಾರ ಕಳೆದುಕೊಂಡರು. ಆದರೆ ಕುಮಾರಸ್ವಾಮಿಯವರು ಹೇಳಿದ ಸಾಂತ್ವನ ಮತ್ತು ಸಾಲ ಮನ್ನಾ ಮಾಡಿದ್ದನ್ನ ಸ್ಮರಣೆ ಮಾಡಿದ ರೈತ ತನ್ನ ಹೊಲದಲ್ಲಿ ಜೋಳಾ, ಶೇಂಗಾ ಬೆಳೆದು ಬದುಕು ಕಟ್ಟಿಕೊಂಡರು. ತಮ್ಮ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಜೋಳದ ರೊಟ್ಟಿ , ಶೇಂಗಾ ಚಟ್ನಿ ಪುಡಿ, ಡ್ರೈ ಪಲ್ಯಾವನ್ನ ತಯಾರು ಮಾಡಿ ಒಂದೊ ದೊಡ್ಡ ಬಾಕ್ಸ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಯವರ ಜೆಪಿ ನಗರ ನಿವಾಸಕ್ಕೆ ಕೊರಿಯರ್ ಮಾಡಿ ವಿಶೇಷ ಕೃತಜ್ಞತೆಗಳನ್ನ ಹೆಚ್ಡಿಕೆಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಉಡುಗೊರೆ ಬಾಕ್ಸ್ ನೋಡಿದ ಮಾಜಿ ಸಿಎಂ ಹೆಚ್ಡಿಕೆ ಭದ್ರತಾ ಸಿಬ್ಬಂದಿ ಸಂಪೂರ್ಣ ಪರಿಶೀಲಿಸಿದಾಗ ಜೋಳದರೊಟ್ಟಿ, ಶೇಂಗಾ ಚಟ್ನಿಪುಡಿ, ಡ್ರೈ ಪಲ್ಯಾ ಮತ್ತು ರೈತ ಗೋವಿಂದಪ್ಪ ಶ್ರೀ ಹರಿಯವರ ಕೃತಜ್ಞತಾ ಪತ್ರ ಇರುವುದರ ಬಗ್ಗೆ ಹೆಚ್ಡಿಕೆ ಗಮನಕ್ಕೆ ತಂದಿದ್ದಾರೆ. ರೈತ ಗೋವಿಂದಪ್ಪ ಶ್ರೀಹರಿಯವರ ವಿಶೇಷ ಉಡುಗೊರೆಯ ಬಗ್ಗೆ ಹೆಚ್ಡಿಕೆ ರೈತ ಗೋವಿಂದಪ್ಪ ಶ್ರೀಹರಿಯವರಂತಹ ರೈತರೇ ನನ್ನ ರಾಜಕೀಯ ಜೀವನಕ್ಕೆ ಸ್ಪೂರ್ತಿ ಎಂದು ಭಾವುಕರಾದರು.