ವಾಷಿಂಗ್ಟನ್: ಇತ್ತೀಚೆಗೆ ಭಾರತದ ಕ್ಷಿಪಣಿಯೊಂದು ಪಾಕಿಸ್ತಾನದ ವಾಯುಸೀಮೆಯಲ್ಲಿ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ವಿದ್ಯೆಗಿಂತ ದೊಡ್ಡದು ಯಾವುದೂ ಇಲ್ಲ, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು: ಬೊಮ್ಮಾಯಿ
ಭಾರತ ಕೂಡಾ ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ದೈನಂದಿನ ನಿರ್ವಹಣೆಯ ವೇಳೆ ನಡೆದ ಘಟನೆಯಾಗಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿತ್ತು. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿದೆ ಮತ್ತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿತ್ತು.
ನಮ್ಮ ಪಾಲುದಾರ ದೇಶವಾದ ಭಾರತದಿಂದ ಸಿಡಿದ ಕ್ಷಿಪಣಿ ಪಾಕಿಸ್ತಾನದ ಗಡಿಯೊಳಗೆ ಬಿದ್ದಿರುವ ಘಟನೆಯೊಂದು ಆಕಸ್ಮಿಕವಲ್ಲದೆ ಬೇರೆ ಯಾವ ಉದ್ದೇಶ ಹೊಂದಿರುವಂತೆ ಕಂಡುಬಂದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಡೈಲಿ ನ್ಯೂಸ್ ಗೆ ತಿಳಿಸಿದ್ದಾರೆ.
ನಾವೂ ಈ ಬಗ್ಗೆ ಭಾರತೀಯ ರಕ್ಷಣಾ ಸಚಿವಾಲಯದಲ್ಲಿ ಮಾಹಿತಿಯನ್ನು ಕೇಳಿದ್ದೇವು. ಅದರಂತೆ ಮಾರ್ಚ್ 9ರಂದು ಭಾರತ ಸರ್ಕಾರ ಈ ಬಗ್ಗೆ ವಿವರಣೆ ನೀಡಿತ್ತು. ಇದರ ಹೊರತಾಗಿ ನಾವು ಬೇರೆ ಯಾವ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರೈಸ್ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ ಎಂದು ವರದಿ ಹೇಳಿದೆ.