ಇವತ್ತು ಕೂಡ ಬೆಂಡೇಕಾಯಿಯಾ? ನಾನು ಹೇಗಮ್ಮಾ ಊಟ ಮಾಡ್ಲಿ?'”ನನಗೆ ಹಿಡಿಸದ್ದು ಯಾಕ್ಮಾಡ್ತೀಯಾ? ಬೇರೇನಾದ್ರೂ ಮಾಡಾºರದಿತ್ತಾ? ಒಟ್ಟಿನಲ್ಲಿ ನಾನು ಊಟ ಮಾಡುವುದು ನಿಮಗಿಷ್ಟವಿಲ್ಲ”ನೀನು ಯಾವಾಗ್ಲೂ ತಂಗಿಗೆ ಇಷ್ಟವಾದ ತಿಂಡಿನೇ ಮಾಡ್ತೀಯಾ?”
– ಹೀಗೆ ಇದು ನಮ್ಮ ಭಾರತೀಯ ಪ್ರತಿಯೊಂದು ಮನೆಯಲ್ಲಿ ಊಟ-ತಿಂಡಿಯ ವಿಚಾರದಲ್ಲಿ ನಡೆಯುವ ಸಂಗತಿಗಳು. ಒಂದು ಮನೆಯಲ್ಲಿ ನಾಲ್ಕಾರು ಜನ ಇರುವಲ್ಲಿ “ನನಗೆ ಅದು ತಿಂಡಿ ಬೇಡ, ಇದು ಬೇಡ’ ಎಂದು ಮೂಗು ಮುರಿಯುವ ಮಕ್ಕಳು, ಹಿರಿಯರು ಇರುವಲ್ಲಿ “ಇವತ್ತೇನು ತಿಂಡಿ ಮಾಡಲಿ?’ ಎನ್ನುವುದೇ ಪ್ರತಿಯೊಬ್ಬ ಮನೆಯ ಅಮ್ಮನನ್ನು ಕಾಡುವ ದಿನನಿತ್ಯದ ಪ್ರಶ್ನೆ.
ಹೌದು, ಮನೆ ಎಂದ ಮೇಲೆ ಅಲ್ಲಿ ಹಿರಿಯರು, ಕಿರಿಯರು ಒಟ್ಟಾಗಿ ಇರುವುದು ಸಹಜ. ಉಪ್ಪಿಟ್ಟು , ಇಡ್ಲಿ, ದೋಸೆ, ಅನ್ನ-ಸಾಂಬಾರು ಮಾಡಿದರೆ ಹಿರಿಯರಿಗೆ ಹಿತವೆನಿಸುತ್ತದೆ. ಮಕ್ಕಳಿಗೆ ಪುಲಾವ್, ರೈಸ್‌ಬಾತ್, ಪೂರಿ, ಪನ್ನೀರ್ ಇಷ್ಟವಾಗುತ್ತದೆ. ಮಕ್ಕಳು ಇಡ್ಲಿ-ದೋಸೆ ಮುಟ್ಟುವುದಿಲ್ಲ. ಅಜ್ಜ-ಅಜ್ಜಿಗೆ ರೈಸ್‌ಬಾತ್ ಬೇಡ. ಒಬ್ಬೊºಬ್ಬರಿಗೆ ಒಂದೊಂದು ರೀತಿಯ ತಿಂಡಿ ಮಾಡಬೇಕಾಗುತ್ತದೆ. ಹೀಗಿರುವಾಗ ಅವರ ಬೇಕು-ಬೇಡಗಳ ಕಡೆಗೆ ಸ್ಪಂದಿಸುವುದೇ ತಾಯಿಯಾದವಳಿಗೆ ದೊಡ್ಡ ಸವಾಲು.
ಒಂದು ಮನೆಯಲ್ಲಿ ಇಬ್ಬರು ಮಕ್ಕಳು ಇದ್ದಾರೆ ಎಂದಿಟ್ಟುಕೊಳ್ಳೋಣ. ಅವರಲ್ಲಿ ಒಬ್ಬರು, “ನೀನು ಅಕ್ಕನಿಗೆ ಇಷ್ಟವಾದದ್ದನ್ನೇ ಮಾಡ್ತೀಯಾ. ನನ್ನ ಇಷ್ಟಕಷ್ಟ ನಿನಗೆ ಬೇಕಾಗಿಲ್ಲ” ಅಂತ ಎರಡನೆ ಮಗು ಅದನ್ನು ಬಾಯಿಗೂ ಇಡದೆ ಮುಖ ಊದಿಸಿ ಉಪವಾಸ ಕೈಗೊಂಡುಬಿಡುತ್ತದೆ. ಮಕ್ಕಳ ಇಂತಹ ವರ್ತನೆಯಿಂದ ತಾಯಿಗೆ ಸಹಿಸಲು ಕಷ್ಟವಾಗುತ್ತದೆ. ಹಾಗಂತ ಮನೆಯಲ್ಲಿ ನಿತ್ಯ ಊಟ, ತಿಂಡಿ ತಯಾರಿಸದೇ ಇರಲು ಸಾಧ್ಯವೆ? ತರಕಾರಿ, ಅಕ್ಕಿಬೇಳೆಗಳ ಬೆಲೆ ದುಬಾರಿಯಾಗುವ ಈ ದಿನಗಳಲ್ಲಿ ಅಮ್ಮನಾದವಳು ಮಕ್ಕಳಿಗೆ ಅರ್ಥ ಮಾಡಿಸುತ್ತಾಳೆ. “ಎಲ್ಲ ಮನೆಗಳಲ್ಲೂ ಮಕ್ಕಳ ಬಳಿ ವಿಚಾರಿಸಿಯೇ ಊಟ, ತಿಂಡಿ ತಯಾರಿಸ್ತಾರಾ? ಹೊರಗಡೆ ಹೋದಲ್ಲೆಲ್ಲ ತೆಪ್ಪಗೆ ಉಂಡು ಬರೋದಿಲ್ವಾ ನೀವು. ಮನೆಯಲ್ಲಿ ಹೀಗ್ಯಾಕೆ? ಆಹಾರ ಪೋಲು ಮಾಡುವುದಕ್ಕೆ ಅರ್ಥವಿದೆಯೆ? ಏನು ಮಾಡಿ ಬಡಿಸ್ತಾರೋ ಅದನ್ನು ಉಣ್ಣಲು ಕಲಿಯಬೇಕು. ಜಾಣರಲ್ವ ನೀವು” ಎಂದು ನಯವಾಗಿ ಗದರಿಸುತ್ತಾಳೆ. ಮಕ್ಕಳು ಕ್ಯಾಂಟೀನ್‌ನಲ್ಲಿ ತಿನ್ನಲು ಅಭ್ಯಾಸ ಮಾಡಿದರೆ ಆರೋಗ್ಯದ ಕತೆ ಏನು? ಹಾಗಾಗಿ “ಮನೆಯ ಆಹಾರವೇ ಉಣ್ಣಬೇಕು. ಹೋದ ಕಡೆಗಳಲ್ಲೆಲ್ಲ ನೀವು ಬಯಸಿದ ತಿಂಡಿ ತಿನಿಸೇ ತಂದು ಎದುರಿಗಿಡೋಲ್ಲ” ಅಂತ ತಿದ್ದುತ್ತಾಳೆ. “ಮಕ್ಕಳಿಗೆ ದುಡ್ಡು ಕೊಡಬೇಡಿ’ ಎಂದು ಅಪ್ಪನಿಗೆ ತಾಕೀತು ಮಾಡುತ್ತಾಳೆ. ಅಮ್ಮನ ಕಾಳಜಿ ಎಷ್ಟು ಅಲ್ಲವೆ?
ವಾರವಿಡೀ ಅಡುಗೆ ಮಾಡಿ ಸುಸ್ತಾಗಿರುವ ಅಮ್ಮ ಮಕ್ಕಳಿಗೂ ತನ್ನ ಕಷ್ಟ ಅರಿವಾಗಲಿ ಎಂದು “ದಿನಾ ನಾನೇ ಅಡುಗೆ ಮಾಡ್ತೇನಲ್ಲ, ನಾಳೆ ಭಾನುವಾರ. ನಾನು ಏನೂ ತಯಾರಿಸುವುದಿಲ್ಲ. ನೀವುಗಳು ಸೇರಿ ನನಗೂ ಅಪ್ಪನಿಗೂ ಏನೇನು ಮಾಡಿ ಕೊಡ್ತೀರಿ ನೋಡೋಣ” ಅಂತ ಹೇಳುವಾಗ ಮಕ್ಕಳು ಸುಮ್ಮನಾಗುತ್ತಾರೆ !
-ಕೃಷ್ಣವೇಣಿ ಕಿದೂರ್