ನಿಮಗೆ ಗೊತ್ತಾ? ಭಾರತದಲ್ಲಿ 1700 ಮೂಕಿ ಚಿತ್ರಗಳು ತಯಾರಾಗಿವೆ. ಆದರೆ, ಅದರಲ್ಲಿ ಉಳಿದುಕೊಂಡಿರುವುದು ಕೇವಲ ಐದಾರು ಮಾತ್ರ. ಕನ್ನಡದಲ್ಲಂತೂ 1931ರಿಂದ 1941ರ ಅವಧಿಯಲ್ಲಿ 250 ಮೂಕಿ ಚಿತ್ರಗಳು ತಯಾರಾಗಿವೆ. ಆ ಪೈಕಿ ಉಳಿದುಕೊಂಡಿರುವುದು ಕೇವಲ 15 ಮಾತ್ರ.
ಭಾರತೀಯ ಚಿತ್ರರಂಗದ ಮೊದಲ ವಾಕ್ಚಿತ್ರ “ಆಲಂ ಅರಾ’ ಆಗಲೀ, ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ’ ಆಗಲೀ ಇಲ್ಲ. ಈ ನಿಟ್ಟಿನಲ್ಲಿ ಏನು ಮಾಡಬಹುದು? ಚಿತ್ರ ಪರಂಪರೆ ಕಣ್ಮರೆಯಾಗುವುದಕ್ಕೆ ಬಿಡದಂತೆ ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಸಿಗುವ ಎಲ್ಲಾ ಚಿತ್ರಗಳನ್ನು ಅವು ಅಳಿಯುವ ಮುನ್ನವೇ ಸಂಗ್ರಹಿಸುವುದು ಮತ್ತು ರಕ್ಷಿಸುವುದು ಈಗ ತುರ್ತಾಗಿ ಮಾಡಬೇಕಾಗಿರುವ ಕೆಲಸ.
ಸವೆದು ಹೋಗುತ್ತಿರುವ ಸಿನಿಮಾ ಪರಂಪರೆಯನ್ನು ಸಂರಕ್ಷಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಪಾರಂಪರಿಕ ರಕ್ಷಣೆ ಕೆಲಸಕ್ಕೆ ಮುಂದಾಗಿದೆ. ಮೊದಲ ಹಂತವಾಗಿ ನಿರ್ಮಾಪಕ ಶಿವೇಂದ್ರಸಿಂಗ್ ಡುಂಗಾರ್‌ಪುರ್ ಅವರನ್ನು ಬೆಂಗಳೂರಿಗೆ ಕರೆಸಿ ವಿಚಾರ ಸಂಕಿರಣ ಆಯೋಜಿಸಿದೆ.
ಈ ಶಿವೇಂದ್ರ ಸಿಂಗ್ ಅವರು 2014ರಲ್ಲಿ ಮುಂಬೈನಲ್ಲಿ ಫಿಲ್ಮ್ ಹೆರಿಟೇಜ್ ಫೌಂಡೇಷನ್ ಸ್ಥಾಪಿಸಿದ್ದು, ಅದರ ಮೂಲಕ ಭಾರತೀಯ ಚಿತ್ರಪರಂಪರೆಯನ್ನು ಉಳಿಸಿ, ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಇಂದು ಅವರನ್ನು ಬೆಂಗಳೂರಿಗೆ ಕರೆಸಿ ವಿಚಾರ ಸಂಕಿರಣ ಆಯೋಜಿಸಿದೆ.
“ಕನ್ನಡ ಚಲನಚಿತ್ರ ಪರಂಪರೆಯ ಸಂರಕ್ಷಣೆ ಮತ್ತು ಸಂಗ್ರಹ’ ಕುರಿತ ವಿಚಾರ ಸಂಕಿರಣವನ್ನು ಇಂದು ಸಂಜೆ ನಾಲ್ಕಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಯೋಜಿಸಲಾಗಿದೆ. ಈ ವಿಚಾರ ಸಂಕಿರಣವನ್ನು ಬಿ. ಸರೋಜಾದೇವಿ ಉದ್ಘಾಟಿಸಲಿದ್ದು, ಶಿವೇಂದ್ರಸಿಂಗ್ ಡುಂಗಾರ್‌ಪುರ್ ಈ ಕುರಿತು ಮಾತನಾಡಲಿದ್ದಾರೆ.
ಜೊತೆಗೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಹರಿಣಿ, ಜಯಮಾಲಾ ಮುಂತಾದವರು ಹಾಜರಿರಲಿದ್ದಾರೆ.