ನವದೆಹಲಿ:ಕಳೆದ 2 ತಿಂಗಳಿನಿಂದ ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ದೇಶದ ಜನರು ಗಮನಿಸುತ್ತಿದ್ದಾರೆ. ತತ್ವಾದರ್ಶಗಳಿಲ್ಲದ ಅವಕಾಶವಾದಿ ಈ ಮೈತ್ರಿ ಸರ್ಕಾರಕ್ಕೆ ಯಾವುದೇ ಅಜೆಂಡಾ ಇಲ್ಲ. ಕೇವಲ ನರೇಂದ್ರ ಮೋದಿ ಅವರನ್ನು ದೂರ ಇಡುವುದೇ ಇವರ ಮುಖ್ಯ ಉದ್ದೇಶ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಾನು ಅಧಿಕಾರದಲ್ಲಿದ್ದರೂ ಸಂತೋಷವಾಗಿಲ್ಲ ಎಂದು ಕಣ್ಣೀರು ಹಾಕಿದ ಘಟನೆಯ 3 ದಿನಗಳ ಬಳಿಕ ಈ ಬಗ್ಗೆ ಜೇಟ್ಲಿ ಫೇಸ್ ಬುಕ್ ಖಾತೆಯಲ್ಲಿ ಕಟುವಾಗಿ ವಿಮರ್ಶಿಸಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಚೌದರಿ ಚರಣ್ ಸಿಂಗ್, ಚಂದ್ರಶೇಖರ್, ಎಚ್.ಡಿ.ದೇವೇಗೌಡ ಹಾಗೂ ಐಕೆ ಗುಜ್ರಾಲ್ ಅವರಿಗೆ ಎಸಗಿದ ದ್ರೋಹದ ಪುನರಾವರ್ತನೆಯೇ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.
ನಾನು ಎಲ್ಲವನ್ನೂ ನುಂಗಿಕೊಂಡು ವಿಷಕಂಠನಾಗಿದ್ದೇನೆ. ಯಾವುದನ್ನೂ ಹೇಳಿಕೊಳ್ಳಲಾಗದೇ ನೋವನ್ನು ಅನುಭವಿಸುತ್ತಿದ್ದೇನೆ. ನಾನು ಸಿಎಂ ಹುದ್ದೆಯಿಂದ ಸಂತೋಷವಾಗಿಲ್ಲ. ನಾನು ಮನಸ್ಸು ಮಾಡಿದರೆ ಎರಡು ಗಂಟೆಯಲ್ಲೇ ಅಧಿಕಾರದಿಂದ ಕೆಳಗಿಳಿಯಬಲ್ಲೆ ಎಂದು ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿ ಕಣ್ಣೀರು ಹಾಕಿದ್ದಾರೆ.
ಇದನ್ನು ಗಮನಿಸಿದ ಬಳಿಕ ನನಗೆ ಹಳೆಯ ನೆನಪು ಮರುಕಳಿಸಿದಂತಾಗಿದೆ. ದುರಂತ ಕಥೆಯ ಹಿಂದಿ ಸಿನಿಮಾಗಳ ಕಾಲಘಟ್ಟ ನೆನಪಿಗೆ ಬಂತು. ಇದು ನಿಜಕ್ಕೂ ಎರಡು ಪಕ್ಷಗಳ ನಡುವಿನ ಹೊಂದಾಣಿಕೆಯನ್ನು ತೋರಿಸುತ್ತದೆಯೇ? ಅಸಹಾಯಕತೆಯ ಈ ಮೈತ್ರಿ ಪಕ್ಷಗಳಲ್ಲಿ ಯಾವುದೇ ಒಂದೇ ರೀತಿಯ ಆದರ್ಶಗಳ ಕೊಡುಗೆ ಭಾರತದಲ್ಲಿ ನೀಡಲು ಸಾಧ್ಯವೇ? ಎಂಬುದಾಗಿ ಪ್ರಶ್ನಿಸಿರುವ ಜೇಟ್ಲಿ ಅವರು ಹಲವಾರು ವಿಷಯಗಳನ್ನು ತಮ್ಮ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ.