Advertisement
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೊಡಗು ಜಿಲ್ಲೆಯ ಜೆಡಿಎಸ್ ಮುಖಂಡರ ಜತೆ ಪಕ್ಷ ಸಂಘಟನೆ ಕುರಿತು ಚರ್ಚಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, 40 ಪರ್ಸೆಂಟ್ ಸರಕಾರ ಎಂದು ರಾಜ್ಯ ಬಿಜೆಪಿ ಸರಕಾರದ ಬಗ್ಗೆ ಬೀದಿಯಲ್ಲಿ ಜನ ಮಾತನಾಡುತ್ತಾರೆ. ಇಲ್ಲೇ ಹೆಗ್ಗಣ ಸತ್ತು ಬಿದ್ದಿದೆ. ಪಿಎಸ್ಐ ನೇಮಕಾತಿ ಹಗರಣ, ಪ್ರಾಧ್ಯಾಪಕರ ನೇಮಕ ಹಗರಣ ಸೇರಿದಂತೆ ಅನೇಕ ಕರ್ಮಕಾಂಡಗಳು ಬೇಕಾದಷ್ಟಿವೆ. ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರ ಬಗ್ಗೆ ಸದ್ದು ಗದ್ದಲ ಇಲ್ಲ. ದೆಹಲಿಯಲ್ಲಿ ಮನೀಶ್ ಸಿಸೋಡಿಯಾ ಅವರ ಮೇಲೆ ಅಬಕಾರಿ ನೀತಿ ವಿಚಾರದಲ್ಲಿ, ಕೇವಲ ಒಂದೆರಡು ಕೋಟಿ ಕುರಿತ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ ಆದರೂ ಕೇಳುವವರು ಇಲ್ಲ ಎಂದು ಕಿಡಿಕಾರಿದರು.
Related Articles
Advertisement
ಪಿಎಸ್ ಐ ಅಕ್ರಮ ಆಯಿತು. ಈಗ ಕೆಪಿಟಿಸಿಎಲ್ ನದ್ದು ಶುರುವಾಗಿದೆ. ಇದರ ಬಗ್ಗೆ ಚರ್ಚೆ ಆಗಬೇಕು. ಆದರೆ ಬೇರೆ ವಿಚಾರ ಚರ್ಚೆ ಆಗುತ್ತಿದೆ. ಬಿಜೆಪಿಯವರು ಸಾವರ್ಕರ್ ರಥ ಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಉಪಯೋಗವೇನು? ಎರಡೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಜನರಿಗೆ ಏನಾದರೂ ಮಾಡಿ ಆಗ ಸಾವರ್ಕರ್ ಗೆ ಗೌರವ ತಂದಂತೆ ಎಂದು ಅವರು ವಾಗ್ದಾಳಿ ನಡೆಸಿದರು.
ಎಸಿಬಿ ರದ್ದು ಸಂಬಂಧ ಸುಪ್ರೀಂ ಕೋರ್ಟ್ ಗೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು,ಕುರಿ ಕಾಯಲು ತೋಳ ಬಿಟ್ಟಂಗೆ ಇದೆ. ತೋಳ ಇಟ್ಟುಕೊಂಡು ಕುರಿ ರಕ್ಷಣೆ ಆಗುತ್ತಾ?. ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದಲ್ಲಿ ಹಾಲೆರೆದಿದ್ದಾರೆ. ಸರ್ಕಾರ ಸರಿಯಾಗಿ ನಿಗಾ ಇಟ್ಟು ಮಟ್ಟ ಹಾಕಬೇಕು ಎಂದು ಹೇಳಿದರು. ಸಿದ್ದರಾಮೋತ್ಸವದಿಂದ ಉಪಯೋಗ ಏನು? ನಮ್ಮ ಜನತಾ ಜಲಧಾರೆಯಿಂದ ಕೆರೆಕಟ್ಟೆಗಳು ತುಂಬಿದ್ದವು, ಇವರ ಉತ್ಸವದಿಂದ ಏನು ಉಪಯೋಗ ಆಯಿತು.ಸಿದ್ದರಾಮೋತ್ಸವದಿಂದ ಏನಾಗಿದೆ. ಅವರ ವರ್ಚಸ್ಸು ಏನು ಹೆಚ್ಚಾಗಿದೆ. ಅಂತಹ ಎಷ್ಟು ಸಮಾವೇಶ ರಾಜ್ಯದಲ್ಲಿ ಆಗಿದೆ.ನಮ್ಮ ಜನತಾ ಜಲಧಾರೆ ಎಷ್ಟು ಜನ ಸೇರಿದ್ರು. ನಮ್ಮ ಉತ್ಸವದಿಂದ 25 ವರ್ಷಗಳಿಂದ ತುಂಬದ ಕೆರೆಗಳಲ್ಲಿ ಮಳೆ ಬಂದು ನೀರು ತುಂಬಿವೆ. ಅವರ ಉತ್ಸವದಿಂದ ಏನು ಪ್ರಯೋಜನ ಆಗಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಹಾಜರಿದ್ದರು.