Advertisement

ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸಿದರೆ ತಪ್ಪೇನು: ಸಚಿವ ಸಿ.ಸಿ.ಪಾಟೀಲ್

04:50 PM Mar 19, 2022 | Team Udayavani |

ಗದಗ: ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಬದಲಾಗಿ ಬೇರೆ ಧರ್ಮದ ಗ್ರಂಥವನ್ನು ಸೇರಿಸುತ್ತೇವೆಂದು ಹೇಳಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವಾಗತಿಸುತ್ತಿದ್ದರು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಟಾಂಗ್ ನೀಡಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವುದು ಇನ್ನೂ ಚರ್ಚೆಯಲ್ಲಿದ್ದರೂ, ಅದಕ್ಕೆ ಡಿ.ಕೆ.ಶಿವಕುಮಾರ್ ಆಕ್ಷೇಪಿಸಿದ್ದಾರೆ. ಆದರೆ, ಭಗವದ್ಗೀತೆ ಯಾವುದೇ ಧರ್ಮಕ್ಕೆ ಸೀಮಿತವಲ್ಲ. ‘ಕರ್ಮವನ್ನು ನೀ ಮಾಡು, ಅದರ ಫಲವನ್ನು ನನಗೆ ಬಿಡು’ ಎಂದು ಶ್ರೀಕೃಷ್ಣ ಪರಮಾತ್ಮನು ಹೇಳುತ್ತಾನೆ. ಒಬ್ಬ ರಾಜಕಾರಣಿಯಾಗಿ ಜನಪರ ಕಾರ್ಯಕ್ರಮ ನಾನು ಮಾಡಬೇಕು. ಚುನಾವಣಾ ಫಲಿತಾಂಶ ಜನರಿಗೆ ಬಿಡಬೇಕು ಎನ್ನುವುದು ಅದರ ಸಾರ. ಬೇರೆ ಪುಸ್ತಕದಲ್ಲಿ ಹೇಳಿರುವಂತೆ ಮತ್ತೊಬ್ಬರ ಕೈ ಕತ್ತರಿಸಬೇಕು. ಕಾಲು ಕಡಿಯಬೇಕು ಎಂದು ಭಗವದ್ಗೀತೆ ಬೋಧಿಸಿಲ್ಲ ಎಂದು ತಿರುಗೇಟು ನೀಡಿದರು.

ಭಗವದ್ಗೀತೆ ಮೇಲೆ ಕೈ ಇಟ್ಟು ಕೋರ್ಟ್‌ನಲ್ಲಿ ಸತ್ಯವನ್ನೇ ನುಡಿಯುತ್ತೇನೆ ಎಂದು ಆಣೆ, ಪ್ರಮಾಣ ಮಾಡುತ್ತೇವೆ. ಅಂತಹ ಮಹಾಗ್ರಂಥವನ್ನು ಅಳವಡಿಸಿಕೊಂಡರೆ ತಪ್ಪೇನು ಎಂದು ಖಾರವಾಗಿ ಪ್ರಶ್ನಿಸಿದರು.

ಟೋಲ್ ಗುತ್ತಿಗೆದಾರರಿಂದ ವಾಹನ ಸವಾರರಿಗೆ ಕಿರುಕುಳ ಇರುವುದು ನಿಜ. ಈ ಬಗ್ಗೆ ಕರ್ನಾಟಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಂಬಂಧಿಸಿದವರ ಮೂಲಕ ಸೂಚಿಸಲಾಗಿದೆ. ಕೆಲವರು ಸುಧಾರಿಸಿದ್ದಾರೆ. ಯಾರಾದರೂ, ಅದನ್ನೇ ಮುಂದುವರಿಸಿದರೆ, ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

ಇದನ್ನೂ ಓದಿ:ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ: ಸಿ.ಟಿ.ರವಿ ಕಿಡಿ

Advertisement

ಕಾಶ್ಮೀರಿ ಪಂಡಿತರು, ಹಿಂದೂಗಳು ಹಾಗೂ ಹಿಂದೂ ಮಹಿಳೆಯರ ಮೇಲಿನ ದೌಜನ್ಯದ ಇತಿಹಾಸದ ಪುಟಗಳಿಗೆ ‘ದಿ ಕಾಶ್ಮೀರಿ ಫೈಲ್ಸ್’ ಹಿಂದಿ ಚಲನಚಿತ್ರ ಕನ್ನಡಿ ಹಿಡಿದಿದ್ದು, ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ. ಗದಗ ನಗರದ ಶಾಂತಿ ಚಿತ್ರಮಂದಿರದಲ್ಲಿ ಮಾ.20 ರಿಂದ 23ರ ವರೆಗೆ ಮಧ್ಯಾಹ್ನ 12 ಮತ್ತು ಮೂರು ಗಂಟೆಯಿಂದ ಆರಂಭಗೊಳ್ಳುವ ಶೋಗಳು ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ಪ್ರವೇಶ ಕಲ್ಪಿಸಿದೆ. ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದ್ದಾಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಎಂ.ಎಸ್.ಕರಿಗೌಡ್ರ, ಸಂಗಮೇಶ ದುಂದೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next