Advertisement

ರಂಭಾಪುರಿ ಶ್ರೀ ಭೇಟಿಯಾದ್ರೆ ತಪ್ಪೇನು

10:18 AM Apr 08, 2019 | pallavi |
ಹುಬ್ಬಳ್ಳಿ: ಲಿಂಗಾಯತರು ಒಂದು ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯ, ಜಗಳ ಇರುವುದು ಸಾಮಾನ್ಯ. ಅವುಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಅಷ್ಟಕ್ಕೂ ರಂಭಾಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರೆ ತಪ್ಪೇನಿದೆ ಎಂದು ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ತಾವು ರಂಭಾಪುರಿ ಶ್ರೀಗಳ ಭೇಟಿಯಾಗಿದ್ದನ್ನು ಸಮರ್ಥಿಸಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಭಾಪುರಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಚುನಾವಣೆಯಲ್ಲಿ ನೀನು ಗೆಲ್ಲುವುದು ಖಚಿತ. ಸಮಾಜ ಒಗ್ಗೂಡಿಸಿಕೊಂಡು ಮುನ್ನಡೆಯುವಂತೆ ಆಶೀರ್ವಾದ ಮಾಡಿದ್ದಾರೆ. ಲಿಂಗಾಯತ ಹೋರಾಟ ಮುಗಿದು ಹೋದ ಅಧ್ಯಾಯ. ಅದನ್ನು ಪುನಃ ಚರ್ಚೆ ಮಾಡುವುದು ಸೂಕ್ತವಲ್ಲ ಎಂದರು.
ಸ್ವಾಮೀಜಿ ಭೇಟಿ ತಪ್ಪೇನಿದೆ- ಹೊರಟ್ಟಿ: ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮಾಜಿ ಸಚಿವ ವಿನಯ ಕುಲಕರ್ಣಿ ಸ್ವಾಮೀಜಿಗಳನ್ನು ಭೇಟಿ ಮಾಡಿರುವುದರಲ್ಲಿ ತಪ್ಪೇನಿದೆ. ಅವರು ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಎಲ್ಲಾ ಸ್ವಾಮೀಜಿಗಳನ್ನು ಗೌರವದಿಂದ ಕಾಣುವುದು ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿ. ಕೆಲ ವಿಚಾರಗಳಲ್ಲಿ ಭಿನ್ನತೆ ಇರುವುದು ಸಾಮಾನ್ಯ. ಹಾಗೆಂದು ಸ್ವಾಮೀಜಿಗಳನ್ನು ವಿರೋಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಚುನಾವಣೆಗಾಗಿ ಎರಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನೊಳಗೊಂಡಂತೆ ಜಂಟಿ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲೂ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಬಾರಿ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next