ಮಣಿಪಾಲ: ಸುದ್ದಿವಾಹಿನಿಗಳ ಟಿಆರ್‌ಪಿ ಬದಲಾಯಿಸುವ ಜಾಲವನ್ನು ಭೇದಿಸಿರುವುದಾಗಿ ಮುಂಬಯಿ ಪೊಲೀಸ್ ಹೇಳಿದೆ. ಇದರಲ್ಲಿ ದೇಶದ ನಂಬರ್ ಒನ್ ಚಾನೆಲ್ ಎಂದು ಹೇಳಲಾಗುವ ಒಂದು ಚಾನೆಲ್ ಸೇರಿದಂತೆ ಮುಂಬಯಿನ ಮೂರು ಸುದ್ದಿ ವಾಹಿನಿಗಳು ಈ ನಕಲಿ ಟಿಆರ್‌ಪಿ ಜಾಲದಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರು ಮರಾಠಿ ಸುದ್ದಿವಾಹಿನಿ ಮಾಲಕರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗುವುದು ಎಂದು ಮುಂಬಯಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಹೇಳಿದ್ದಾರೆ.
ಟಿಆರ್‌ಪಿ ಎಂದರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್. (TRP: Television Rating Points) ಜನರು ಯಾವ್ಯಾವ ಚಾನೆಲ್ಗಳನ್ನು ನೋಡುತ್ತಾರೆ ಎಂಬುದನ್ನು ಲೆಕ್ಕಹಾಕುವ ಒಂದು ವ್ಯವಸ್ಥೆ. ಸ್ಯಾಂಪಲ್ ಸರ್ವೆ ಮಾದರಿಯಲ್ಲೇ ಇದು ಕಾರ್ಯನಿವಹಿಸುತ್ತದೆ. ಈ ರಹಸ್ಯ ಯಂತ್ರಗಳನ್ನ ಅಕ್ರಮ ಮಾರ್ಗವಾಗಿ ಪತ್ತೆ ಹಚ್ಚಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯನ್ನು ಇಲ್ಲ ಎಂದು ಹೇಳುವಂತಿಲ್ಲ. ಮುಂಬಯಿ ಪೊಲೀಸರು ಇಂಥದ್ದೇ ಒಂದು ಅಕ್ರಮವನ್ನು ಬಯಲಿಗೆ ತಂದಿರುವುದಾಗಿ ಹೇಳಿಕೊಂಡಿದ್ದಾರೆ.
ಟಿಆರ್‌ಪಿ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ BARC (Broadcast Audience Research Council ) ಸಂಸ್ಥೆ ಮುಂಬಯಿ ಪೊಲೀಸರ ಈ ಕಾರ್ಯವನ್ನು ಸ್ವಾಗತಿಸಿದೆ. ಮುಂಬಯಿ ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇವೆ. ಜನರು ಏನು ನೋಡುತ್ತಾರೆ ಎಂಬುದನ್ನು ಕರಾರುವಾಕ್ಕಾಗಿ ತೆರೆದಿಡುವುದೇ ತಮ್ಮ ಗುರಿ ಎಂದು ಬಾರ್ಕ್ ಇಂಡಿಯಾ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.
Related Articles
ಆದರೆ ಈ ಟಿಆರ್‌ಪಿ ಎಂಬ ಪದವನ್ನು ಎಲ್ಲರೂ ಕೇಳಿರುತ್ತಾರೆ ಆದರೂ ಟಿಆರ್‌ಪಿ ಎಂದರೇನು ಏನು ಎಂದು ತಿಳಿದಿರುವುದಿಲ್ಲ. ಎಲ್ಲ ಉದ್ಯಮಗಳಂತೆ ಮಾಧ್ಯಗಳಲ್ಲಿಯೂ ತಮ್ಮ ಓದುಗರು ಅಥವ ವೀಕ್ಷಕರನ್ನು ಲೆಕ್ಕ ಹಾಕುವ ಕ್ರಮ ಇದಾಗಿದೆ.
ಮುದ್ರಣ ಮಾಧ್ಯಮದಲ್ಲಿನ ವ್ಯವಸ್ಥೆ ಹೇಗೆ?
ಟಿಆಪಿರ್ ವಿಚಾರ ತಿಳಿದುಕೊಳ್ಳುವ ಮೊದಲು ಪತ್ರಿಕೆಗಳಲ್ಲಿನ ವ್ಯವಸ್ಥೆಗಳ ಕುರಿತು ತಿಳಿದುಕೊಳ್ಳೋಣ. ಒಂದು ಪತ್ರಿಕೆ ಎಷ್ಟು ಖರೀದಿಯಾಗುತ್ತದೆ ಎಂಬುವುದನ್ನು ಎಬಿಸಿ (ಆಡಿಟ್ ಬ್ಯುರೋ ಆಫ್ ಸರ್ಕ್ಯೂಲೇಷನ್) ಸಂಸ್ಥೆ ಹೇಳುತ್ತದೆ. ಆದರೆ ಇಲ್ಲಿ ನಿಖರ ಮಾಹಿತಿ ಆಯಾ ಸಂಸ್ಥೆಗೆ ತಿಳಿದಿರುತ್ತದೆ. ಮುದ್ರಣವಾದ ಪ್ರತಿಗಳಲ್ಲಿ ಎಷ್ಟು ಮಾರಾಟವಾಗಿದೆ, ಯಾವ ದಿನ ಹೆಚ್ಚು ಮಾರಾಟವಾಗುತ್ತದೆ, ಎಲ್ಲಿ ಹೆಚ್ಚು ಮಾರಾಟವಾಗುತ್ತದೆ ಎನ್ನುವ ಮಾಹಿತಿ ಸಂಸ್ಥೆಗಳಿಗೆ ಸಿಗುತ್ತದೆ. ಈ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಅವರು ಜಾಹೀರಾತು ದರವನ್ನು ನಿಗದಿಪಡಿಸುತ್ತಾರೆ. ಇಲ್ಲಿ ತಮ್ಮ ನೇರ ಪ್ರತಿಸ್ಪರ್ಧಿಗೂ ನಮಗೂ ಎಷ್ಟು ಅಂತರವಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ.
ಡಿಜಿಟಲ್ ಮಾಧ್ಯಮಗಳ ವ್ಯವಸ್ಥೆ
ಇನ್ನು ಡಿಜಿಟಲ್ ಮಾಧ್ಯಮಗಳಿರುವ ಈ ಯುಗದಲ್ಲಿ ಆಯಾ ಸಂಸ್ಥೆಗಳಿಗೆ ಬರುವ ರೀಚ್ ಅಥವ ಕ್ಲಿಕ್ಸ್‌ಗಳ ಮಾಹಿತಿ ಪಕ್ಕಾ ಸಿಗುತ್ತದೆ. ಇದಕ್ಕಾಗಿ ಹಲವು ವೆಬ್‌ಸೈಟ್‌ಗಳು ಲೈವ್ ಟ್ರ್ಯಾಕ್ ಸೇವೆಯನ್ನು ಒದಗಿಸುತ್ತದೆ. ಪ್ರತಿದಿನ ಎಷ್ಟು ಜನ ಬರುತ್ತಾರೆ? ಎಲ್ಲಿಂದ ಬರುತ್ತಾರೆ? ಒಂದು ಸುದ್ದಿಯನ್ನು ಎಷ್ಟು ಜನ ಓದಿದ್ದಾರೆ? ಈಗ ನಿಮ್ಮ ಸೈಟ್‌ನಲ್ಲಿ ಎಷ್ಟು ಜನ ಇದ್ದಾರೆ? ಸಾಮಾಜಿಕ ಜಾಲತಾಣಗಳ ಮೂಲಕ ಎಷ್ಟು ಜನ ಬಂದಿದ್ದಾರೆ? ಯಾವ ಬ್ರೌಸರ್‌ನಿಂದ ಬಂದಿದ್ದಾರೆರೆ? ಎಂಬಿತ್ಯಾದಿ ಮಾಹಿತಿಗಳನ್ನು ಪ್ರತಿಕ್ಷಣ ನೀಡುತ್ತಲೇ ಇರುತ್ತದೆ. ಜಾಗತಿಕ ಮಟ್ಟದಲ್ಲಿ ನಿಮ್ಮ ವೆಬ್‌ಸೈಟ್ ಎಷ್ಟನೇ ಸ್ಥಾನದಲ್ಲಿದೆ ಎಂಬ ಮಾಹಿತಿ ನಿಮಗೆ ಬೇಕಿದ್ದರೆ ಅಮೆಜಾನ್‌ನ ಅಲೆಕ್ಸಾ ತಾಣದಲ್ಲಿ ನಿಮಗೆ ಲಭ್ಯವಾಗುತ್ತದೆ. ಇಲ್ಲಿ ಈ ಒಟ್ಟಾರೆ ರೇಟಿಂಗ್ ಉತ್ತಮವಾಗಿದ್ದರೆ ವೆಬ್‌ಸೈಟ್‌ವೊಂದು ಭವಿಷ್ಯ ಕಾಣಬಹುದು.
ಟಿವಿ ಮಾಧ್ಯಮಗಳಿಗೆ ಟಿಆರ್‌ಪಿ
ಇನ್ನು ಟಿವಿ ಮಾಧ್ಯಮಗಳಲ್ಲಿ ಇವುಗಳನ್ನು ಟಿಆರ್‌ಪಿ ಎಂಬ ಮಾನದಂಡದ ಮೂಲಕ ಅಲೆಯಲಾಗುತ್ತದೆ. ಟಿಆರ್‌ಪಿ ಎಂದರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್. ಪ್ರತಿವಾರ ಪ್ರಕಟವಾಗುವ ಟಿಆರ್‌ಪಿ ರೇಟಿಂಗ್‌ಗಳ ಆಧಾರದಲ್ಲಿ ಟಿವಿಗಳ ವ್ಯಾಪ್ತಿಯನ್ನು ಅಲೆಯಲಾಗುತ್ತದೆ. ರೇಟಿಂಗ್ ನೀಡುವ ಸಂಸ್ಥೆ ಕೇಬಲ್ ಹಾಕಿರುವ ಮನೆಗಳಲ್ಲಿ ಕೆಲವು ಮನೆಗಳಲ್ಲಿ ಪೀಪಲ್ಸ್ ಮೀಟರ್ ಎನ್ನುವ ಒಂದು ಸಾಧನವನ್ನು ಅಳವಡಿಸುತ್ತವೆ. ಈ ಸಾಧನ ಒಂದು ವಾರದಲ್ಲಿ ಆ ಮನೆಯವರು ಯಾವ ಸಮಯದಲ್ಲಿ ಯಾವ ಕಾರ್ಯಕ್ರಮವನ್ನು ನೋಡುತ್ತಾರೆ ಎನ್ನುವುದನ್ನು ದಾಖಲಿಸುತ್ತದೆ. ಈ ರೀತಿಯಾಗಿ ಸಂಗ್ರಹಿಸಿದ ಮಾಹಿತಿಗಳನ್ನು ಒಟ್ಟು ಮಾಡಿ ಜನರ ರುಚಿಗಳನ್ನು ತಿಳಿದುಕೊಳ್ಳಲಾಗುತ್ತದೆ. ಇವುಗಳನ್ನು Broadcast Audience Research Council (BARC) ವಾರಕ್ಕೊಮ್ಮೆ ಬಿಡುಗಡೆ ಮಾಡುತ್ತದೆ. ಇದನ್ನು ಗುರುವಾರ ಈ ಸಂಸ್ಥೆ ಬಿಡುಗಡೆ ಮಾಡುತ್ತದೆ. ಆದರೆ ಸಾಮಾಜಿಕ ಜಾಲತಾಣ ಅಥವ ಡಿಜಿಟಲ್ ನಂತೆ ಡೆಟಾಗಳು ಅಂದಿಗಂದು ಸಿಗುವುದಿಲ್ಲ. ಟಿವಿಗಳಿಗೆ ಹಿಂದಿನ ವಾರ ಪ್ರಸಾರವಾದ ಕಾರ್ಯಕ್ರಮಗಳಿ ವಿವರ ಮುಂದಿನವಾರ ಬರುತ್ತದೆ. ಹಿಂದಿನ ವಾರದ ಟಿಆರ್‌ಪಿಯ ಆಧಾರದಲ್ಲಿ ಮುಂದಿನ ವಾರದ ಕಾರ್ಯಕ್ರಮಗಳನ್ನು ನೀವು ನಿರೀಕ್ಷಿಸಬಹುದು.
ಈ ಟಿಆರ್‌ಪಿ ಎಂದರೆ ಅದು ಚಾನೆಲ್‌ನ ಭವಿಷ್ಯವನ್ನು ನಿರ್ಧರಿಸುತ್ತದೆ. ಇದು ಚಾನೆಲ್‌ನ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಒಳ್ಳೆಯ ಟಿಆರ್‌ಪಿಗಳು ಇದ್ದರೆ ಜಾಹೀರಾತುಗಳ ಮೂಲಕ ಬರುವ ಆದಾಯದ ಪ್ರಮಾಣ ಹೆಚ್ಚಾಗಿ ಸಂಸ್ಥೆ ಲಾಭದಾಯಕವಾಗಿ ಇರುತ್ತದೆ. ಇಲ್ಲಿ ಅತೀ ಹೆಚ್ಚು ಟಿಆರ್‌ಪಿ ಇರುವ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳಿಗೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಒಂದು ವೇಳೆ ಚಾನೆಲ್‌ಗಳು ಟಿಆರ್‌ಪಿಯನ್ನು ಕಳೆದುಕೊಂಡರೆ ತನ್ನ ಆದಾಯವನ್ನು ಕಳೆದುಕೊಂಡಂತೆ.