Advertisement

Health: ಟ್ರೈಜೆಮಿನಲ್‌ ನ್ಯೂರಾಲ್ಜಿಯಾ ಎಂದರೇನು?

11:51 AM Jan 31, 2024 | Team Udayavani |

ಮುಖದ ಒಂದು ಪಾರ್ಶ್ವದಲ್ಲಿ ಕುಟುಕಿದಂತಹ ನೋವನ್ನು ಉಂಟುಮಾಡುವ ಅನಾರೋಗ್ಯವೇ ಟ್ರೈಜೆಮಿನಲ್‌ ನ್ಯೂರಾಲ್ಜಿಯಾ ಅಥವಾ ಟಿಕ್‌ ಡೊಲೊರೆಕ್ಸ್‌. ಈ ಕಾಯಿಲೆಯಲ್ಲಿ ಟ್ರೈಜೆಮಿನಲ್‌ ನರ ಎಂಬ ಕ್ರೇನಿಯಲ್‌ ನರವು ಬಾಧಿತವಾಗುತ್ತದೆ. ಇದು ಮುಖದಿಂದ ಮೆದುಳಿಗೆ ಸಂವೇದನೆಗಳನ್ನು ರವಾನಿಸುವ ಐದನೆಯ ಕ್ರೇನಿಯಲ್‌ ನರವಾಗಿದೆ. ಮುಖದಲ್ಲಿ ಉಂಟಾಗುವ ಪ್ರಚೋದನೆಯಿಂದಾಗಿ ನೋವು ಆರಂಭವಾಗುತ್ತದೆ. ಹಲ್ಲುಜ್ಜುವುದು, ಮುಖಕೌÒರ, ನಗುವುದು, ಮೇಕಪ್‌ ಹಚ್ಚಿಕೊಳ್ಳುವುದು, ಮುಖ ತೊಳೆಯುವುದು ಅಥವಾ ಗಾಳಿಯಿಂದಾಗಿ ಈ ಪ್ರಚೋದನೆ ಉಂಟಾಗಬಹುದು. ನೋವು ಲಘು ಸ್ವರೂಪದಲ್ಲಿ ಆರಂಭವಾಗಿ ಬಳಿಕ ತೀವ್ರಗೊಳ್ಳುತ್ತದೆ.

Advertisement

ಟ್ರೈಜೆಮಿನಲ್‌ ನರವು ಪ್ರಧಾನವಾಗಿ ಮೂರು ಶಾಖೆಗಳನ್ನು ಹೊಂದಿದೆ:

  1. ಆಪ್ತಾಲ್ಮಿಕ್‌ (ವಿ1) – ಇದು ಮೇಲಿನ ಕಣ್ರೆಪ್ಪೆ, ಹಣೆಯಿಂದ ಸಂವೇದನೆಗಳನ್ನು ರವಾನಿಸುತ್ತದೆ.
  2. ಮ್ಯಾಕ್ಸಿಲರಿ (ವಿ2) – ಇದು ಗಲ್ಲ, ಕೆಳ ಕಣ್ರೆಪ್ಪೆ, ಮೂಗಿನಿಂದ ಸಂವೇದನೆಗಳನ್ನು ಹೊತ್ತೂಯ್ಯುತ್ತದೆ.
  3. ಮ್ಯಾಂಡಿಬ್ಯುಲಾರ್‌ (ವಿ3)- ದವಡೆ, ಕೆಳ ತುಟಿಗಳಿಂದ ಸಂವೇದನೆಗಳನ್ನು ರವಾನಿಸುತ್ತದೆ.

ಪ್ರತೀ ವರ್ಷ ಅಂದಾಜು 1.5 ಲಕ್ಷ ಮಂದಿ ಟ್ರೈಜೆಮಿನಲ್‌ ನ್ಯೂರಾಲ್ಜಿಯಾಕ್ಕೆ ತುತ್ತಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಇದು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಪ್ರಮಾಣದಲ್ಲಿ ಬಾಧಿಸುತ್ತದೆ.

ಟ್ರೈಜೆಮಿನಲ್‌ ನ್ಯೂರಾಲ್ಜಿಯಾದ ಲಕ್ಷಣಗಳು

ಸಾಮಾನ್ಯವಾಗಿ ತಾನೇ ತಾನಾಗಿ ಅಥವಾ ಮುಖಕ್ಕೆ ಹೊಡೆತ ಯಾ ದಂತವೈದ್ಯಕೀಯ ಚಿಕಿತ್ಸೆಯಂತಹ ಅಲ್ಪ ಪ್ರಮಾಣದ ಆಘಾತಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇದು ದಂತವೈದ್ಯಕೀಯ ಸಮಸ್ಯೆ ಎಂದು ಭಾವಿಸಿ ರೋಗಿಗಳು ಸಾಮಾನ್ಯವಾಗಿ ನೋವಿಗಾಗಿ ದಂತ ವೈದ್ಯರ ಬಳಿಗೆ ತೆರಳುತ್ತಾರೆ. ರೂಟ್‌ ಕೆನಲ್‌ ಚಿಕಿತ್ಸೆಯಂತಹ ಪ್ರಕ್ರಿಯೆಯ ಬಳಿಕ ಮುಖದಲ್ಲಿ ಕುಟುಕಿದಂತಹ ನೋವು ಕಾಣಿಸಿಕೊಳ್ಳಲಾರಂಭವಾಗುತ್ತದೆ.

Advertisement

ಇದು ದಂತ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ್ದು ಆಗಿರಲಾರದು, ಟ್ರೈಜೆಮಿನಲ್‌ ನ್ಯೂರಾಲ್ಜಿಯಾದ ಆರಂಭ ಇದಾಗಿರಬಹುದು ಮತ್ತು ದಂತವೈದ್ಯಕೀಯ ಚಿಕಿತ್ಸೆಯಿಂದ ಇದು ಪ್ರಚೋದನೆಗೊಂಡಿರಬಹುದು. ಇದು ಆವರ್ತನೀಯ ನೋವಾಗಿ ಬೆಳವಣಿಗೆ ಹೊಂದಬಹುದು. ಅನೇಕ ರೋಗಿಗಳಲ್ಲಿ ಕೆಲವು ಸೆಕೆಂಡುಗಳ ಕಾಲ ನೋವು ಕಂಡುಬಂದು ಆ ಬಳಿಕ ದಿನಪೂರ್ತಿ ಇಲ್ಲದೇ ಇರಬಹುದು. ಕ್ರಮೇಣ ಇದು ಹೆಚ್ಚುತ್ತ ಹೋಗಿ ನೋವಿನ ಆವರ್ತಗಳು ಅಧಿಕವಾಗುತ್ತವೆ ಮತ್ತು ಅಂತಿಮವಾಗಿ ನೋವಿಲ್ಲದ ಅವಧಿ ಇರುವುದೇ ಇಲ್ಲ.

ಟ್ರೈಜೆಮಿನಲ್‌ ನ್ಯೂರಾಲ್ಜಿಯಾಕ್ಕೆ ಕಾರಣಗಳು

ಟ್ರೈಜೆಮಿನಲ್‌ ನ್ಯೂರಾಲ್ಜಿಯಾ ತಾನಾಗಿ ಉಂಟಾಗಿರಬಹುದು ಅಥವಾ ಇನ್ನೊಂದು ಕಾರಣದಿಂದ ತಲೆದೋರಬಹುದು. ತಾನಾಗಿ ಉಂಟಾಗುವ ಟ್ರೈಜೆಮಿನಲ್‌ ನ್ಯೂರಾಲ್ಜಿಯಾಕ್ಕೆ ರಕ್ತನಾಳವೊಂದು ನರದ ಮೇಲೆ ಒತ್ತಡ ಉಂಟು ಮಾಡುವುದು ಕಾರಣವಾಗಿರುತ್ತದೆ.

ಇದರಿಂದಾಗಿ ನರದಲ್ಲಿ ಅಸಹಜ ವಿದ್ಯುತ್ಪ್ರವಾಹ ಸೃಷ್ಟಿಯಾಗಿ ಅನಪೇಕ್ಷಿತ ಡಿಸ್ಚಾರ್ಜ್ ಆಗಿ ನೋವಿಗೆ ಕಾರಣವಾಗುತ್ತದೆ. ಗಡ್ಡೆಗಳು ನರದ ಮೇಲೆ ಒತ್ತಡ ಉಂಟುಮಾಡುವುದು, ಡಿಮೈಲಿನೇಶನ್‌ ಅಥವಾ ಗಂಟು ಇದಕ್ಕೆ ಇನ್ನೊಂದು ಕಾರಣ ಆಗಿರಬಹುದು.

ರೋಗಪತ್ತೆ ಸಾಮಾನ್ಯವಾಗಿ ಲಕ್ಷಣಗಳ ಹಿನ್ನೆಲೆಯನ್ನು ಆಧರಿಸಿ ರೋಗಪತ್ತೆ ನಡೆಸಲಾಗುತ್ತದೆ. ಈ ಹಿಂದೆ ಹೇಳಲಾದಂತೆ ಅನೇಕ ರೋಗಿಗಳು ನೋವಿಗಾಗಿ ದಂತವೈದ್ಯರನ್ನು ಭೇಟಿಯಾಗುತ್ತಾರೆ. ವಿವರವಾದ ಹಿನ್ನೆಲೆ ಮಾಹಿತಿಗಳನ್ನು ಕಲೆಹಾಕುವುದರಿಂದ ರೋಗಪತ್ತೆ ಮಾಡಲು ಸಾಧ್ಯವಾಗುತ್ತದೆ. ಈ ರೋಗ ಸ್ಥಿತಿಯನ್ನು ಪತ್ತೆಹಚ್ಚಲು ಯಾವುದೇ ನಿರ್ದಿಷ್ಟ ಪರೀಕ್ಷೆಗಳಿಲ್ಲ. ರಕ್ತನಾಳಗಳು ಟ್ರೈಜೆಮಿನಲ್‌ ನರದ ಮೇಲೆ ಒತ್ತಡ ಹೇರುತ್ತಿರುವುದನ್ನು ಪತ್ತೆಹಚ್ಚಲು ಅಥವಾ ಬೇರೆ ಕಾರಣಗಳನ್ನು ಪತ್ತೆಹಚ್ಚಲು ಬ್ರೈನ್‌ ಇಮೇಜಿಂಗ್‌ ನಡೆಸಲು ಸೂಚಿಸಲಾಗುತ್ತದೆ.

ಚಿಕಿತ್ಸೆ ಬಹುತೇಕ ಪ್ರಕರಣಗಳಲ್ಲಿ ಆರಂಭಿಕ ಹಂತಗಳಲ್ಲಿ ಔಷಧಗಳ ಮೂಲಕ ನೋವನ್ನು ಉಪಶಮನಗೊಳಿಸಬಹುದು. ಔಷಧಗಳನ್ನು ಅಲ್ಪ ಪ್ರಮಾಣದಲ್ಲಿ ಆರಂಭಿಸಿ ನಿಧಾನವಾಗಿ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಕಾರ್ಬಮಜಪೈನ್‌, ಒಕ್ಸ್‌ ಕಾರ್ಬಮಜಪೈನ್‌, ಎಸ್ಲಿಕಾರ್ಬಜಪೈನ್‌, ಗಬಪೆಂಟಿನ್‌, ಪ್ರಗಬಾಲಿನ್‌ ಸಾಮಾನ್ಯವಾಗಿ ಉಪಯೋಗಿಸುವ ಔಷಧಗಳು. ಇವುಗಳಲ್ಲಿ ಹೆಚ್ಚಿನವು ಆ್ಯಂಟಿಎಪಿಲೆಪ್ಟಿಕ್‌ ಗಳಾಗಿವೆ. ಆರಂಭದಲ್ಲಿ ಸಣ್ಣ ಡೋಸೇಜ್‌ನಿಂದ ಆರಂಭಿಸಿದರೂ ಕಾಯಿಲೆಯ ತೀವ್ರತೆ ಹೆಚ್ಚುತ್ತ ಹೋದ ಹಾಗೆ ಔಷಧದ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ, ಇದರಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಕಾರ್ಬಮಜಪೈನ್‌ ಮತ್ತು ಒಕ್ಸ್‌ಕಾರ್ಬಮಜಪೈನ್‌, ಎಸ್ಲಿಕಾರ್ಬಜಪೈನ್‌ನಂತಹ ಅದರ ಉಪ ಔಷಧಗಳು ಡಿಪ್ಲೊಪಿಯಾ, ಅಸಮತೋಲನ, ಸೋಡಿಯಂ ಅಂಶ ಕುಸಿತದಂತಹ ಅಡ್ಡ ಪರಿಣಾಮ ಉಂಟು ಮಾಡಬಹುದು. ಗಬಪೆಂಟಿನ್‌, ಪ್ರಗಬಾಲಿನ್‌ಗಳು ಅಮಲು ಮತ್ತು ತಲೆ ತಿರುಗುವಿಕೆಗೆ ಕಾರಣವಾಗಬಹುದು.

ಲಕ್ಷಣಗಳನ್ನು ನಿಯಂತ್ರಿಸಲು ಔಷಧಗಳು ಪ್ರಯೋಜನಕ್ಕೆ ಬಾರದೆ ಇದ್ದಲ್ಲಿ ಶಸ್ತ್ರಕ್ರಿಯಾತ್ಮಕ ವಿಧಾನಗಳನ್ನು ಅವಲಂಬಿಸಬೇಕಾಗುತ್ತದೆ. ಶಸ್ತ್ರಕ್ರಿಯಾತ್ಮಕ ಆಯ್ಕೆಗಳು:

  1. ತೆರೆದ ಶಸ್ತ್ರಚಿಕಿತ್ಸೆ – ರಕ್ತನಾಳವು ನರದ ಮೇಲೆ ಉಂಟುಮಾಡಿರುವ ಒತ್ತಡವನ್ನು ನಿವಾರಿಸಲು ಮೈಕ್ರೊವಾಸ್ಕಾಲಾರ್‌ ಡಿಕಂಪ್ರಶನ್‌ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಇದು ಪರಿಣಾಮಕಾರಿ ಹೌದಾದರೂ ಕ್ರಾನಿಕ್ಟಮಿ (ತೆರೆದ ಶಸ್ತ್ರಚಿಕಿತ್ಸೆ) ಮಾಡಬೇಕಾಗುತ್ತದೆ. ಇದರಿಂದ ಶ್ರವಣ ನರದಂತಹ ಸನಿಹದಲ್ಲಿರುವ ವ್ಯವಸ್ಥೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
  2. ಲೇಶನಿಂಗ್‌ ಶಸ್ತ್ರಚಿಕಿತ್ಸೆಗಳು – ಪರ್ಕಟೇನಸ್‌ ರೇಡಿಯೊಫ್ರಿಕ್ವೆನ್ಸಿ ರಿಜೊಟೊಮಿಯಲ್ಲಿ ಎಲೆಕ್ಟ್ರೊಕೊಆಗ್ಯುಲೇಶನ್‌ ಮೂಲಕ ಶಾಖವನ್ನು ಬಳಸಿ ನೋವನ್ನು ಉಂಟುಮಾಡುತ್ತಿರುವ ನರದ ಭಾಗವನ್ನು ನಾಶ ಮಾಡಲಾಗುತ್ತದೆ. ಪರ್ಕಟೇನಸ್‌ ಗ್ಲಿಸರಾಲ್‌ ರಿಜೊಟೊಮಿ ಮತ್ತು ಸ್ಟೀರಿಯೊಟ್ಯಾಕ್ಟಿಕ್‌ ರೇಡಿಯೊಸರ್ಜರಿ ಈ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಅನುಸರಿಸುವ ಇತರ ಶಸ್ತ್ರಚಿಕಿತ್ಸಾತ್ಮಕ ವಿಧಾನಗಳು.

ತಡೆ ದುರದೃಷ್ಟವಶಾತ್‌ ಟ್ರೈಜೆಮಿನಲ್‌ ನ್ಯೂರಾಲ್ಜಿಯಾ ತಡೆಗಟ್ಟಲು ಸಾಧ್ಯವಿಲ್ಲ. ಆದಷ್ಟು ಬೇಗನೆ ವೈದ್ಯಕೀಯ ನಿರ್ವಹಣೆ ಮತ್ತು ಶಸ್ತ್ರಚಿಕಿತ್ಸೆಗಳ ಸಹಾಯದಿಂದ ಈ ನೋವುಪೂರಿತ ಅನಾರೋಗ್ಯವನ್ನು ನಿಯಂತ್ರಿಸಬಹುದು.

-ಡಾ| ರೋಹಿತ್‌ ಪೈ,

ಕನ್ಸಲ್ಟಂಟ್‌ ನ್ಯೂರಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನ್ಯೂರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

 

Advertisement

Udayavani is now on Telegram. Click here to join our channel and stay updated with the latest news.

Next