Advertisement

ಭಾರತ ಕ್ರಿಕೆಟಿಗರಿಗೆ ಯೋ-ಯೋ ಜ್ವರ 

03:25 AM Jun 30, 2018 | |

ಕೆಲವು ದಿನಗಳಿಂದ ಭಾರತ ಕ್ರಿಕೆಟ್‌ ವಲಯದಲ್ಲಿ ಯೋ -ಯೋ ಟೆಸ್ಟ್‌ (ಫಿಟೆ°ಸ್‌ ಪರೀಕ್ಷೆ) ಭಾರೀ ಸದ್ದು ಮಾಡುತ್ತಿದೆ. ಭಾರತ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರರಾದ ಅಂಬಾಟಿ ರಾಯುಡು, ವೇಗಿ ಮೊಹಮ್ಮದ್‌ ಶಮಿ, ಯುವರಾಜ್‌ ಸಿಂಗ್‌ ಹಾಗೂ ಸುರೇಶ್‌ ರೈನಾ ಅವರು ಯೋ ಯೋ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಾರೆ. ಜತೆಗೆ ಭಾರತ “ಎ’ ತಂಡದಿಂದ ಸಂಜು ಸ್ಯಾಮ್ಸನ್‌ ಹೊರಬಿದ್ದಿದ್ದಾರೆ. ಈ ಬೆನ್ನಲ್ಲೇ ಕೆಲವರು ಯೋ ಯೋ ಪರೀಕ್ಷೆಯ ವಿರುದ್ಧ ಅಪಸ್ವರ ಎತ್ತಿದ್ದಾರೆ. ಈ ಟೆಸ್ಟ್‌ನಲ್ಲಿ ಅಂತಹದ್ದೇನಿದೆ ಎಂದು ಪ್ರಶ್ನಿಸಿದ್ದಾರೆ. ಹೀಗಿದ್ದರೂ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಮಾತ್ರ ಆಟಗಾರರ ದೈಹಿಕ ಕ್ಷಮತೆ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಹಾಗಾದರೆ ಯೋ-ಯೋ ಟೆಸ್ಟ್‌ ಅಂದರೇನು? ಇದನ್ನು ಕ್ರಿಕೆಟಿಗರಿಗೆ ಏಕೆ ನಡೆಸುತ್ತಾರೆ? ಇದರಿಂದ ಪ್ರಯೋಜನ ಏನು? ಯೋ-ಯೋ ಟೆಸ್ಟ್‌ ನಡೆಸುವ ವಿಧಾನ ಹೇಗೆ? ಸೇರಿದಂತೆ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

Advertisement

ಯೋ-ಯೋ ಟೆಸ್ಟ್‌  ಅಂದರೇನು?: ಕ್ರಿಕೆಟಿಗರಿಗೆ ನಡೆಸುವ ಕಾರ್ಡಿಯೊ ರೆಸ್ಪಿರೇಟರಿ ಎಂಡ್ನೂರೆನ್ಸ್‌  ಟೆಸ್ಟ್‌ (ಹೃದಯ ಉಸಿರಾಟದ ಸ್ಥಿತಿಗತಿ ಪರೀಕ್ಷೆ) ಅನ್ನು ಯೋ -ಯೋ ಟೆಸ್ಟ್‌ ಎಂದು ಕರೆಯುತ್ತಾರೆ. ಓರ್ವ ಕ್ರಿಕೆಟಿಗನಿಗೆ ರನ್ನಿಂಗ್‌ ಮಾಡಿಸುವ ಒಂದೇ ಒಂದು ವಿಧಾನದಿಂದ ಯೋ-ಯೋ ಪರೀಕ್ಷೆ ನಡೆಸಲಾಗುತ್ತದೆ. ಆತ ಫಿಟ್‌ ಅಥವಾ ಅನ್‌ಫಿಟ್‌ ಅನ್ನುವುದನ್ನು ತಂಡದ ಟ್ರೈನರ್‌ ಹಾಗೂ ಫಿಸಿಯೋ ನೇತೃತ್ವದಲ್ಲಿ ನಿರ್ಧರಿಸಲಾಗುತ್ತದೆ. 

ಕ್ರಿಕೆಟಿಗರಿಗೆ ನಡೆಸುವ ಉದ್ದೇಶವೇನು?: ಕ್ರೀಡಾಂಗಣದೊಳಗೆ ಯಾವುದೇ ಪಂದ್ಯ ಅಥವಾ ಸರಣಿಗೆ ತೆರಳುವ ಮೂದಲು ಕ್ರಿಕೆಟಿಗ ಫಿಟ್‌ ಆಗಿರಬೇಕು ಅನ್ನುವ ಸದುದ್ದೇಶದಿಂದ ಈ ಪರೀಕ್ಷೆಯನ್ನು ಪ್ರತಿಯೊಬ್ಬ ಆಟಗಾರನಿಗೆ ಕಡ್ಡಾಯವಾಗಿ ನಡೆಸಲಾಗುತ್ತದೆ. ಈ ಹಿಂದೆ ಇದನ್ನು “ಬೀಪ್‌’ ಟೆಸ್ಟ್‌ ಎಂದು ಕರೆಯಲಾಗುತ್ತಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಅದನ್ನು ಯೋ-ಯೋ ಟೆಸ್ಟ್‌ ಎಂದು ಕರೆಯುತ್ತಾರೆ. ಹೀಗೆ ಕರೆಯುವುದಕ್ಕೆ ನಿರ್ಧಿಷ್ಟ ಕಾರಣಗಳು ಇಲ್ಲ ಎನ್ನುತ್ತವೆ ಕ್ರಿಕೆಟ್‌ ವಲಯದ ಉನ್ನತ ಮೂಲಗಳು. 

ಪರೀಕ್ಷೆಯಿಂದ ಯಾರಿಗೆ ಪ್ರಯೋಜನ?: ಯೋ-ಯೋ ಟೆಸ್ಟ್‌ನಿಂದ ಯಾರು ಫಿಟ್‌ ಇರುತ್ತಾರೆ ಅವರು ಮಾತ್ರ ತಂಡಕ್ಕೆ ಆಯ್ಕೆಯಾಗುತ್ತಾರೆ. ಇದರಿಂದ ಇಡೀ ತಂಡಕ್ಕೆ ಒಳ್ಳೆಯದಾಗುತ್ತದೆ. ಉತ್ತಮ ಫ‌ಲಿತಾಂಶ ನಿರೀಕ್ಷಿಸಬಹುದು. 

ಯೋ-ಯೋ ಪರೀಕ್ಷೆ ನಡೆಸುವ ವಿಧಾನ: ಯೋ-ಯೋ ಪರೀಕ್ಷೆಯನ್ನು 3 ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಇದು ಭಾರತದ ಎಲ್ಲ ಕ್ರಿಕೆಟಿಗರಿಗೆ ಕಡ್ಡಾಯ. ಪರೀಕ್ಷೆ ನಡೆಸಲು ಹಿಡಿಯುವ ಸಮಯ ಕೇವಲ 30 ನಿಮಿಷ. ಇದಕ್ಕಾಗಿ ವಿಶೇಷ ವಿನ್ಯಾಸದ ಮೆಷಿನ್‌ಗಳಿಲ್ಲ. ಪರೀಕ್ಷೆಯನ್ನು ಮೊಬೈಲ್‌ ಮೂಲಕವೇ ನಡೆಸಲಾಗುತ್ತದೆ. ಮೊಬೈಲ್‌ನಲ್ಲಿ ಅಳವಡಿಸಿರುವ “ಬೀಪ್‌’ ಸೌಂಡ್ಸ್‌ ಯೋ-ಯೋ ಟೆಸ್ಟ್‌ಗೆ ನೆರವಾಗುತ್ತದೆ. ಒಟ್ಟು 16 ಸಲ ಬೀಪ್‌ ಸೌಂಡ್‌ ಬರುವ ತನಕ ಕ್ರಿಕೆಟಿಗ  20 ಮೀ. ಉದ್ದದ ಟ್ರ್ಯಾಕ್‌ನಲ್ಲಿ ಓಡುತ್ತಲೇ ಇರಬೇಕು. ಮಧ್ಯಮಧ್ಯದಲ್ಲಿ ಸಣ್ಣ ಬ್ರೇಕ್‌ ನೀಡಲಾಗುತ್ತದೆ. ಆಗ ನಿಲ್ಲಬೇಕು. ಮತ್ತೆ ಓಟ ಮುಂದುವರಿಸಬೇಕು. ಹೀಗೆ ಕನಿಷ್ಟ ಮಾನದಂಡ 16 ಸಲ ಬೀಪ್‌ ಸೌಂಡ್‌ ಆಗುವ ತನಕ ಓಡಿದರೆ ಆತ ಉತ್ತೀರ್ಣ. ಇಲ್ಲದಿದ್ದರೆ ಅನುತೀರ್ಣ. 16ರಿಂದ ಹೆಚ್ಚು ಓಡಿದರೆ ಕ್ರಿಕೆಟಿಗನಿಗೆ ಫಿಟೆ°ಸ್‌ ಸಾಮರ್ಥ್ಯ ಹೆಚ್ಚಿದೆ ಎಂದರ್ಥ. 

Advertisement

ಟೆಸ್ಟ್‌ನಲ್ಲಿ ಫೇಲಾದರೆ?: ಯೋ-ಯೋ ಟೆಸ್ಟ್‌ನಲ್ಲಿ ಫೇಲಾದರೆ ಕ್ರಿಕೆಟಿಗ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಉದಾಹರಣೆಗೆ ಒಬ್ಬ ಕ್ರಿಕೆಟಿಗ ಯೋ-ಯೋ ಪರೀಕ್ಷೆಯಲ್ಲಿ 10 ಕಿ.ಮೀ. ಓಡಿ ಉತ್ತೀರ್ಣಗೊಂಡ. ಮತ್ತೋರ್ವ ಕ್ರಿಕೆಟಿಗ 9 ಕಿ.ಮೀ. ಓಡಿ ಕೇವಲ 1 ಕಿ.ಮೀ. ಅಂತರದಿಂದ ಯೋ-ಯೋ ಪರೀಕ್ಷೆಯಲ್ಲಿ ಫೇಲಾದ ಅಂತ ಇಟ್ಟುಕೊಳ್ಳೋಣ. ಆಗ ಫೇಲಾದ ಕ್ರಿಕೆಟಿಗ ಕಡಿಮೆಯಾದ 1 ಕಿ.ಮೀ. ಅಂತರವನ್ನು ಹೆಚ್ಚಿಸಿಕೊಳ್ಳಬೇಕು. 3 ತಿಂಗಳ ಮುಂದಿನ ಪರೀಕ್ಷೆಯಲ್ಲಿ ಮತ್ತೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕ್ರಿಕೆಟಿಗನಿಗೆ ಅವಕಾಶ ಇದೆ. 

ಯೋ-ಯೋ ಪರೀಕ್ಷೆ ಹೊಸತೇನಲ್ಲ: ಡಾ.ಶ್ರವಣ್‌
ಯೋ ಯೋ ಪರೀಕ್ಷೆ ಫ‌ುಟ್‌ಬಾಲ್‌ನಲ್ಲಿ ಹಳೆಯದು. ಕ್ರಿಕೆಟ್‌ನಲ್ಲಿ ಸ್ವಲ್ಪ ಹೊಸದು. ಫ‌ುಟ್‌ಬಾಲ್‌ನಲ್ಲಿ ಸ್ಟಾರ್‌ ಆಟಗಾರ  ಸೇರಿದಂತೆ ಎಲ್ಲರು ಯೋ-ಯೋ ಪರೀಕ್ಷೆಯಲ್ಲಿ ಪಾಸಾದರಷ್ಟೇ ರಾಷ್ಟ್ರೀಯ ತಂಡ ಪ್ರತಿನಿಧಿಸಲು ಸಾಧ್ಯ. ಕ್ರಿಕೆಟ್‌ನಲ್ಲಿ ಈ ಹಿಂದೆ ಪರೀಕ್ಷೆಯನ್ನು “ಬೀಪ್‌ ಟೆಸ್ಟ್‌’ ಎಂದು ಕರೆಯುತ್ತಿದ್ದರು ಎಂದು ಆರ್‌ಸಿಬಿ ತಂಡದ ಸಹಾಯಕ ಫಿಸಿಯೋ ಡಾ.ಶ್ರವಣ್‌ ಉದಯವಾಣಿಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಇತ್ತೀಚೆಗೆ ಕೆಲವು ಕ್ರಿಕೆಟಿಗರು ಪರೀಕ್ಷೆಯಲ್ಲಿ ಫೇಲ್‌ ಆದರು. ಈ ವೇಳೆ ಕೆಲವರು ಈ ಬಗ್ಗೆ ಅಪಸ್ವರ ಎತ್ತಿದ್ದರಿಂದ ಯೋ-ಯೋ ಟೆಸ್ಟ್‌ ಬಗ್ಗೆ ಎಲ್ಲರಿಗೂ ಗೊತ್ತಾಗಿದ್ದು. ಹಲವರಿಗೆ ಭಾರತ ತಂಡದಲ್ಲಿ ಈ ಟೆಸ್ಟ್‌ ಮೊದಲೇ ಇತ್ತು ಎನ್ನುವುದು ಗೊತ್ತಿಲ್ಲ. ಆರ್‌ಸಿಬಿ 2011ರಲ್ಲೇ ತನ್ನ ಆಟಗಾರರಿಗೆ ಯೋ-ಯೋ ಟೆಸ್ಟ್‌ ಅನ್ನು ಕಡ್ಡಾಯಗೊಳಿಸಿದೆ. ಯೋ-ಯೋ ಪರೀಕ್ಷೆಯನ್ನು ಕ್ರಿಕೆಟಿಗರು ಮನಸ್ಸು ಮಾಡಿದರೆ ತಾವೇ ಸ್ವತಃ ಮಾಡಿಕೊಂಡು ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು. 

ಹೇಮಂತ್‌ ಸಂಪಾಜೆ 

Advertisement

Udayavani is now on Telegram. Click here to join our channel and stay updated with the latest news.

Next